ಚೆಟ್ಟಳ್ಳಿ, ಫೆ. ೧೪: ಸಮಾಜದಲ್ಲಿ ಎಲ್ಲಾ ಧರ್ಮದ ಜನಾಂಗದವರು ಯಾವುದೇ ಬೇಧ ಭಾವವಿಲ್ಲದೆ ಸೌಹಾರ್ದತೆಯಿಂದ ಇದ್ದರೆ ಮಾತ್ರ ಶಾಂತಿ ಕಾಣಲು ಸಾಧ್ಯ ಎಂದು ಎಸ್‌ಕೆಎಸ್‌ಎಸ್‌ಎಫ್ ಮಾಜಿ ಜಿಲ್ಲಾ ಕಾರ್ಯದರ್ಶಿ ಶುಹೈಬ್ ಫೈಝಿ ಹೇಳಿದರು.

ನಾಪೋಕ್ಲುವಿನ ಇತಿಹಾಸ ಪ್ರಸಿದ್ಧ ಚೆರಿಯಪರಂಬು ಮಖಾಂ ಉರೂಸ್ ಸಮಾರಂಭದ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.

ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತ ದೇಶದಲ್ಲಿ ಎಲ್ಲಾ ಧರ್ಮದ ವಿವಿಧ ಜಾತಿಯ ಜನರು ದೇಶದ ಸಂವಿಧಾನದ ಅಡಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಜಗತ್ತಿನಲ್ಲಿ ಉದಯಿಸಿ ಬಂದAತಹ ಯಾವುದೇ ಧರ್ಮದ ಪ್ರವಾದಿಗಳಿರಲಿ, ಸಂತರಿರಲಿ, ಪವಾಡ ಪುರುಷರಾಗಿರಲಿ, ಯಾವುದೇ ಪಂಡಿತರಿರಲಿ ಯಾರೂ ಸಹ ಸಮಾಜದಲ್ಲಿ ಅಶಾಂತಿಯನ್ನು ಮೂಡಿಸಲು ಹೇಳಿಲ್ಲ. ನಾವೆಲ್ಲರೂ ಭಾರತೀಯರು ನಮ್ಮಲ್ಲಿ ಯಾವುದೇ ಧರ್ಮ ಭೇದವಿಲ್ಲ ನಾವೆಲ್ಲರೂ ಸಹೋದರರಂತೆ ಜೀವನ ನಡೆಸಬೇಕು ಎಂದು ಅವರು ನುಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಮಾಅತ್ ಖತೀಬರಾದ ಹಂಝ ರಹ್ಮಾನಿ ಪ್ರತಿ ವರ್ಷ ಸರ್ವ ಧರ್ಮಿಯರನ್ನು ಒಗ್ಗೂಡಿಸಿ ಸಮ್ಮೇಳನ ಆಯೋಜಿಸುವುದರ ಉದ್ದೇಶವನ್ನು ಯುವ ಪೀಳಿಗೆ ಅರ್ಥಮಾಡಿಕೊಳ್ಳಬೇಕು. ಇದರಿಂದ ಸಹೋದರತೆ, ಸಹಬಾಳ್ವೆ ನಾಡಿನಲ್ಲಿ ಬೆಳೆಯಲು ಸಹಕರಿಯಾಗಲಿದೆ ಎಂದರು.

ಜಿಲ್ಲಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಎಂ.ಹೆಚ್. ಅಬ್ದುಲ್ ರಹ್ಮಾನ್ ಪ್ರಸ್ತಾವಿಕವಾಗಿ ಮಾತನಾಡಿದರು.

ಜಮಾಅತ್ ಅಧ್ಯಕ್ಷ ಕೆ.ಹೆಚ್. ಅಹಮದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ. ಮನ್ಸೂರ್ ಆಲಿ, ನಾಪೋಕ್ಲು ಗ್ರಾ.ಪಂ. ಉಪಾಧ್ಯಕ್ಷ ಟಿ.ಎ. ಮಹಮ್ಮದ್, ಮಾಜಿ ಸದಸ್ಯ ರಶೀದ್ ಪಿ.ಎಂ, ಮಾಜಿ ಜಮಾಅತ್ ಅಧ್ಯಕ್ಷ ಪರವಂಡ ಅಬ್ದುಲ್ ರಹ್ಮಾನ್, ಹಂಝ ಪಿ.ಎ., ಅಬ್ದುಲ್ ರೆಹಮಾನ್ ಪಿ.ಎಂ., ಸಮಾಜ ಸೇವಕರಾದ ಮೈಸಿ ಕತ್ತಣೀರ, ಕೆಸಿಎಫ್ ಅಧ್ಯಕ್ಷ ಉಸ್ಮಾನ್ ಹಾಜಿ, ಮಾಜಿ ಕಾರ್ಯದರ್ಶಿ ಪರವಂಡ ಸಿರಾಜ್, ಜಮಾಅತ್ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಉರೂಸ್ ಅಂಗವಾಗಿ ಮಸೀದಿಯಲ್ಲಿ ಮೌಲೂದ್ ಪಾರಾಯಣ ವಿಶೇಷ ಪ್ರಾರ್ಥನೆ ನಡೆಯಿತು. ಬಳಿಕ ಸರ್ವಧರ್ಮಿಯರಿಗೆ ಅನ್ನದಾನ ನಡೆಯಿತು.