ಸೋಮವಾರಪೇಟೆ, ಫೆ. ೧೪: ಸ್ಥಳೀಯ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ರೂ. ೨.೨೬ ಕೋಟಿ ವೆಚ್ಚದಲ್ಲಿ ನಗರೋತ್ಥಾನ ಯೋಜನೆಯ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಇದರಲ್ಲಿ ಕೆಲವೊಂದು ಕಾಮಗಾರಿಗಳು ಕಳಪೆಯಾಗಿರುವ ಬಗ್ಗೆ ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳು ಆರೋಪಿಸಿದ ಹಿನ್ನೆಲೆ, ಇಲಾಖೆಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಕಾಮಗಾರಿಯ ಗುಣಮಟ್ಟ ಪರಿಶೀಲಿಸಿದರು. ಅಧಿಕಾರಿಗಳ ಭೇಟಿ ಸಂದರ್ಭ ಸಂಬAಧಿಸಿದ ಗುತ್ತಿಗೆದಾರ ಸ್ಥಳಕ್ಕೆ ಆಗಮಿಸದ ಬಗ್ಗೆ ಜನಪ್ರತಿನಿಧಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ರೂ. ೨.೨೬ಕೋಟಿ ವೆಚ್ಚದ ಚರಂಡಿ ಹಾಗೂ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಇಲ್ಲಿನ ವಲ್ಲಭಭಾಯಿ ರಸ್ತೆ ಹಾಗೂ ರೇಂಜರ್ ಬ್ಲಾಕಿನಲ್ಲಿ ನಿರ್ಮಾಣಗೊಂಡಿರುವ ಚರಂಡಿ ಕಾಮಗಾರಿ ಕಳಪೆಯಾಗಿರುವ ಬಗ್ಗೆ ಪಟ್ಟಣ ಪಂಚಾಯಿತಿ ಸದಸ್ಯರ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರ ಶಿವಪ್ರಕಾಶ್ ಅವರು ಪಟ್ಟಣಕ್ಕೆ ದೌಡಾಯಿಸಿ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳೊಡನೆ ಸಮಾಲೋಚನೆ ನಡೆಸಿದರು.

ಈ ಸಂದರ್ಭ ಗುತ್ತಿಗೆದಾರರು ಗೈರಾಗಿರುವ ಬಗ್ಗೆ ಸದಸ್ಯರುಗಳು ಆಕ್ಷೇಪಿಸಿದ್ದರಿಂದ ಅಧಿಕಾರಿಗಳು ಪೇಚಿಗೆ ಸಿಲುಕುವಂತಾಯಿತು. ಕಾಮಗಾರಿ ಆರಂಭಿಸುವಾಗ ಪಂಚಾಯಿತಿ ಆಡಳಿತಕ್ಕೆ ಮತ್ತು ವಾರ್ಡ್ ಸದಸ್ಯರಿಗೆ ಮಾಹಿತಿ ನೀಡಿಲ್ಲ. ಅಲ್ಲದೆ ಕೆಲವೇ ಕಾರ್ಮಿಕರನ್ನು ಇಟ್ಟುಕೊಂಡು ಬೇಕಾಬಿಟ್ಟಿ ಹಾಗೂ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಸದಸ್ಯರುಗಳು ಆರೋಪಿಸಿದರು.

ನಂತರ ಕಾಮಗಾರಿ ನಡೆಯುತ್ತಿರುವ ವಲ್ಲಭಭಾಯಿ ರಸ್ತೆಗೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಈ ಸಂದರ್ಭ ರಸ್ತೆಗಿಂತಲೂ ಮೇಲ್ಭಾಗದಲ್ಲಿ ಚರಂಡಿ ನಿರ್ಮಾಣ ಸೇರಿದಂತೆ ಕಾಂಕ್ರಿಟ್ ಹಾಗೂ ಕಬ್ಬಿಣದ ರಾಡ್ ಅಳವಡಿಸುವ ಕಾಮಗಾರಿ ಅಸಮರ್ಪಕವಾಗಿರುವ ಬಗ್ಗೆ ಅಸಮಾಧಾನ ವ್ಯಕ್ತವಾಯಿತು.

ಮುಂದೆ ಕೆಲಸ ನಡೆಯುವ ಸಂದರ್ಭ ಸ್ಥಳದಲ್ಲಿದ್ದು ಸರಿಯಾದ ರೀತಿಯಲ್ಲಿ ನಿಗಾವಹಿಸುವಂತೆ ನಗರಾಭಿವೃದ್ಧಿ ಯೋಜನೆಯ ಸೈಟ್ ಇಂಜಿನಿಯರ್ ಸಂಭ್ರಮ್ ಹಾಗೂ ಟೀಮ್ ಲೀಡರ್ ರತೀಶ್ ಅವರುಗಳಿಗೆ ಕಾರ್ಯಪಾಲಕ ಅಭಿಯಂತರ ಶಿವಪ್ರಕಾಶ್ ಅವರು ಸೂಚಿಸಿದರು. ಪಟ್ಟಣ ಪಂಚಾಯಿತಿ ಇಂಜಿನಿಯರ್ ವೆಂಕಟೇಶ್ ನಾಯಕ್ ಅವರಿಗೂ ಸಹ ಕಾಮಗಾರಿಯ ಮೇಲುಸ್ತುವಾರಿ ನೋಡಿಕೊಳ್ಳುವಂತೆ ತಿಳಿಸಿದರು.

ಇದೇ ಸಂದರ್ಭ ಗುತ್ತಿಗೆದಾರರಾದ ನಾಗರಾಜು ಹಾಗೂ ಸಂದೀಪ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಅಭಿಯಂತರರು, ನೋಟೀಸ್ ನೀಡುವ ಎಚ್ಚರಿಕೆ ಕೊಟ್ಟು, ತಾ. ೧೬ ರಂದು ಕಾಮಗಾರಿ ನಡೆಯುವ ಸ್ಥಳಕ್ಕೆ ಬರುವಂತೆ ತಾಕೀತು ಮಾಡಿದರು.

ಈ ಸಂದರ್ಭ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಪಿ.ಕೆ. ಚಂದ್ರು, ಸದಸ್ಯರುಗಳಾದ ಜಯಂತಿ ಶಿವಕುಮಾರ್, ಜೀವನ್, ಜಯಣ್ಣ, ಶೀಲಾ ಡಿಸೋಜ, ಮಹೇಶ್, ಶುಭಕರ, ಮೋಹಿನಿ, ಸೋಮೇಶ್, ಶರತ್, ಮುಖ್ಯಾಧಿಕಾರಿ ನಾಚಪ್ಪ ಹಾಜರಿದ್ದರು.