*ಗೋಣಿಕೊಪ್ಪ, ಫೆ. ೧೪: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಪೊನ್ನಂಪೇಟೆ ವಲಯ ಸಮಿತಿಯಿಂದ ಪೊನ್ನಂಪೇಟೆ ಇಗ್ಗುತಪ್ಪ ಸೌಹಾರ್ದ ಕ್ರೆಡಿಟ್ ಬ್ಯಾಂಕ್ ಸಭಾಂಗಣದಲ್ಲಿ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಅತಿಥಿಯಾಗಿ ಪಾಲ್ಗೊಂಡ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಸರ್ಕಾರ ಪ್ರತಿ ಸಮುದಾಯದ ಅಭಿವೃದ್ಧಿಗಾಗಿ ನಿಗಮಗಳನ್ನು ಸ್ಥಾಪನೆ ಮಾಡಿದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದರು.

ಟೈಲರ್ ವೃತ್ತಿ ನಡೆಸುವವರ ಬೇಡಿಕೆಗೆ ಪೂರಕವಾಗಿ ಸ್ಪಂದಿಸಿ ಸರಕಾರ ಮಟ್ಟದಲ್ಲಿ ಗಮನ ಸೆಳೆಯುವ ಪ್ರಯತ್ನ ನಡೆಸಲಾಗುವುದು ಎಂದರು. ಕೊಡಗು ಜಿಲ್ಲಾ ಕೆ.ಎಸ್.ಟಿ.ಎ. ಅಧ್ಯಕ್ಷ ಎನ್.ಸಿ. ನಂದೀಶ್ ಮಾತನಾಡಿ, ಟೈಲರ್ ವೃತ್ತಿ ನಡೆಸುತ್ತಿರುವವರು ಸಂಘದಲ್ಲಿ ಸದಸ್ಯತ್ವವನ್ನು ಪಡೆದುಕೊಳ್ಳುವ ಮೂಲಕ ಒಮ್ಮತದ ಬಲದೊಂದಿಗೆ ಸವಲತ್ತುಗಳನ್ನು ಪಡೆದುಕೊಳ್ಳಲು ತಯಾರಾಗಬೇಕು ಎಂದು ಹೇಳಿದರು.

ಪೊನ್ನಂಪೇಟೆ ವಲಯ ಅಧ್ಯಕ್ಷ ಎಸ್.ಟಿ. ಗಿರೀಶ್ ಅಧ್ಯಕ್ಷತೆಯಲ್ಲಿ ಪತ್ರಕರ್ತ ಜಗದೀಶ್ ಜೋಡುಬೀಟಿ, ಸಮಾಜ ಸೇವಕ ರಾಮಕೃಷ್ಣ, ಭರತನಾಟ್ಯ ಪ್ರವೀಣೆ ಎನ್.ಜಿ. ಗ್ರೀಷ್ಮ, ಹಿರಿಯ ಟೈಲರ್‌ಗಳಾದ ಬೋಜಮ್ಮ, ಪಿ.ಎಸ್ ಲಕ್ಷಿö್ಮ ಇವರುಗಳನ್ನು ಸನ್ಮಾನಿಸಲಾಯಿತು.

ಪೊನ್ನಂಪೇಟೆ ಪಂಚಾಯಿತಿ ಉಪಾಧ್ಯಕ್ಷೆ ದಶಮಿ ಸದಾ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪುಟ್ಟರಾಜು, ಪೊನ್ನಂಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಳೇರ ದಯಾ ಚಂಗಪ್ಪ, ಪೊನ್ನಂಪೇಟೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ನರಸಿಂಹ ಮೂರ್ತಿ ಇದ್ದರು.