ಮಡಿಕೇರಿ, ಫೆ. ೧೪: ಜಮ್ಮಾ ಜಾಗ ಸೇರಿದಂತೆ ಇತರ ವಿಶೇಷಹಕ್ಕಿನ ಜಮೀನುಗಳನ್ನು ಗುತ್ತಿಗೆಗೆ ನೀಡಲು ಅವಕಾಶ ಕಲ್ಪಿಸಿರುವದಾಗಿ ರಾಜ್ಯ ಕಂದಾಯ ಸಚಿವ ಆರ್. ಅಶೋಕ ಅವರು ನೀಡಿರುವ ಹೇಳಿಕೆ ಆತಂಕಕಾರಿಯಾಗಿದ್ದು, ಈ ಸಂಬAಧ ಸಚಿವರು ಸರಕಾರದ ಮಟ್ಟದಲ್ಲಿ ಉತ್ತರ ನೀಡುವದರೊಂದಿಗೆ ಕೊಡಗಿನ ಜನತೆಯ ಕ್ಷಮೆ ಯಾಚಿಸಬೇಕೆಂದು ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಂದಾಯ ಸಚಿವರು ಜಮ್ಮಾ ಜಾಗವನ್ನು ಗುತ್ತಿಗೆಗೆ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದು, ಈ ಬಗ್ಗೆ ಶಕ್ತಿ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿರುವದನ್ನು ಗಮನಿಸಿದ್ದೇನೆ. ಬಹುಶಃ ಸಚಿವರು ತಪ್ಪಾಗಿ ಹೇಳಿರಬಹುದೆಂದು ಪರಿಗಣಿಸಿದ್ದೆವು. ಆದರೆ ಇದೀಗ ಸಚಿವರು ಯಾವದೇ ಸಮಜಾಯಿಷಿಕೆ ನೀಡದೇ ಇರುವದನ್ನು ಗಮನಿಸಿದರೆ, ಸಚಿವರು ಕನಿಷ್ಟ ಕಾನೂನಿನ ಪರಿಜ್ಞಾನ ಇಲ್ಲದೆ ಇಂತಹ ಹೇಳಿಕೆ ನೀಡಿರುವದು ಖಾತರಿಯಾಗಿದೆ. ಇದೊಂದು ರಾಜಕೀಯ ಪ್ರೇರಿತ ಹೇಳಿಕೆಯಾಗಿದ್ದು, ಜನರನ್ನು ಆತಂಕಕ್ಕೀಡು ಮಾಡಿ ಚುನಾವಣೆಗೆ ಬಳಸಿಕೊಳ್ಳುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.

ಜಮ್ಮಾ ಜಾಗಕ್ಕೆ ಸಂಬAಧಿಸಿದAತೆ ೧೯೯೨ರಲ್ಲಿ ಚೆಕ್ಕೇರ ಪೂವಯ್ಯ ಅವರ ಪ್ರಕರಣಕ್ಕೆ ಸಂಬAಧಿಸಿದAತೆ ಉಚ್ಚ ನ್ಯಾಯಾಲಯ ತೀರ್ಪು ನೀಡಿದ್ದು, ಕೃಷಿ ಚಟುವಟಿಕೆಗಳಿಗೆ ಬಳಸಲಾಗಿ ರುವ ಜಾಗ ಹಿಡುವಳಿದಾರರಿಗೆ ಸಂಬAಧಿಸಿದ್ದು, ಅದಕ್ಕೆ ಕಂದಾಯ ವಿಧಿಸಬಹುದೆಂದು ಸ್ಪಷ್ಟವಾಗಿ ಹೇಳಲಾಗಿದೆ. ಅದನ್ನು ಹೇಗೆ ಗುತ್ತಿಗೆಗೆ ನೀಡಲು ಸಾಧ್ಯವೆಂದು ಪ್ರಶ್ನಿಸಿದ ಅವರು; ಸಚಿವರು ನ್ಯಾಯಾಲಯದ ತೀರ್ಪಿನ ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿದರು. ೧೯೬೪ರ ಕಂದಾಯ ಕಾಯ್ದೆಗೆ ಶಾಸನ ಸಭೆಯಲ್ಲಿಯೇ ತಿದ್ದುಪಡಿ ಮಾಡಲಾಗಿದ್ದು, ಇದರ ಬಗ್ಗೆ ಕೂಡ ಸಚಿವರಿಗೆ ಅರಿವು ಇರಬೇಕಾಗಿದೆ. ಇದೀಗ ದುರುದ್ದೇಶದಿಂದ ಕೃಷಿಕರನ್ನು ದುರ್ಬಲರನ್ನಾಗಿ ಮಾಡಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು. ಸಚಿವರ ಹೇಳಿಕೆ ಕಾನೂನು ಬಾಹಿರವಾಗಿದ್ದು, ಇದನ್ನು ಖಂಡಿಸಲಾಗುವದು. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಉತ್ತರ ನೀಡಬೇಕಾಗಿದೆ. ಅಲ್ಲದೆ, ಜಿಲ್ಲೆಯ ಜನತೆಯ ಕ್ಷಮೆ ಯಾಚಿಸಬೇಕೆಂದು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ಹುಲಿದಾಳಿಗೆ ಶಾಶ್ವತ ಪರಿಹಾರ

ಜಿಲ್ಲೆಯಲ್ಲಿ ಆನೆ, ಹುಲಿ ದಾಳಿ ಸತತವಾಗಿ ನಡೆಯುತ್ತಿದೆ. ಇದನ್ನು ತಡೆಯಲು ಗುಂಡು ಹೊಡೆಯುವದೊಂದೇ ಪರಿಹಾರವಲ್ಲ. ನಾಯಕರು ಜನರ ದಾರಿ ತಪ್ಪಿಸುವ ಕಾರ್ಯವನ್ನು ಬಿಟ್ಟು ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸಬೇಕೆಂದು ಪೊನ್ನಣ್ಣ ಆಗ್ರಹಿಸಿದರು. ಕೇಂದ್ರ, ರಾಜ್ಯದಲ್ಲಿ ಒಂದೇ ಸರಕಾರವಿದ್ದು, ಅಧಿಕಾರಿಗಳು ಯಾವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಗಮನಿಸಬೇಕು. ಆಫ್ರಿಕಾ, ಅಮೇಝಾನ್ ಸೇರಿದಂತೆ ವಿದೇಶಗಳಲ್ಲೂ ಕಾಡುಗಳಿವೆ. ಆದರೆ, ಅಲ್ಲಿ ಮಾನವ-ವನ್ಯಪ್ರಾಣಿ ಸಂಘರ್ಷವಿಲ್ಲ. ಕೊಡಗಿನಲ್ಲಿ ಕಾಡನ್ನು ಬರಿದು ಮಾಡುತ್ತಿರುವದರಿಂದ ಪ್ರಾಣಿಗಳು ದಾಳಿ ಮಾಡುತ್ತಿವೆ. ಅಧಿಕಾರಿಗಳ ನಿರ್ಲಕ್ಷö್ಯದಿಂದಾಗಿ ಜನರು ಸಾಯುತ್ತಿದ್ದಾರೆ. ಜವಾಬ್ದಾರಿಯುತ ಅಧಿಕಾರಿಗಳ ಮೇಲೆ ಮೊಕದ್ದಮೆ ದಾಖಲಿಸಿ ತನಿಖೆ ಮಾಡಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಮನುಷ್ಯನ ಜೀವನದಲ್ಲಿ ನಿರ್ಲಕ್ಷö್ಯ ವಹಿಸುತ್ತಿರುವವರನ್ನು ಅಮಾನತ್ತುಪಡಿಸಿದರೆ ಎಚ್ಚೆತ್ತುಕೊಳ್ಳುತ್ತಾರೆ. ಪ್ರತಿನಿಧಿಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ಹೇಳಿದರು.

ಪ್ರಸ್ತುತ ತೋಟದೊಳಗಡೆ ಒಡಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರೊಂದಿಗೆ ಅಧಿಕಾರಿಗಳು ಹುಲಿ ದಾಳಿ ಮಾಡುವ ಪ್ರದೇಶವನ್ನು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವೆಂದು ಸರಕಾರಕ್ಕೆ ವರದಿ ನೀಡುತ್ತಿದ್ದು, ಇದರಿಂದ ಇನ್ನಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಕೆ. ಬಾಡಗ ಗ್ರಾಮವನ್ನು ಇದೇ ರೀತಿ ಬಿಂಬಿಸಲಾಗಿದ್ದು, ಜನರಿಗೆ ರಕ್ಷಣೆ ಇಲ್ಲದಂತಾಗಿದೆ. ಜನಪ್ರತಿನಿಧಿಗಳು ನಾಟಕ ಮಾಡುವದನ್ನು ನಿಲ್ಲಿಸಿ ಅರಣ್ಯ ಇಲಾಖೆ ಮೂಲಕ ಕೈಗೊಳ್ಳಲಾಗಿರುವ ಕ್ರಮದ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಿಸಿದರು. ಹುಲಿ ಯಾವ ಕಾರಣಕ್ಕಾಗಿ ಕಾಡು ಬಿಟ್ಟು ನಾಡಿಗೆ ಬರುತ್ತಿವೆ ಎಂಬದನ್ನು ಕಂಡು ಹಿಡಿಯಬೇಕು, ಅವುಗಳ ದಾಳಿ ನಿಯಂತ್ರಿಸಲು ಶಾಶ್ವತ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಕಾನೂನು ಘಟಕದ ಜಿಲ್ಲಾಧ್ಯಕ್ಷ ಶ್ರಿಧರನ್ ನಾಯರ್, ಸಾಮಾಜಿಕ ಜಾಲ ತಾಣ ಘಟಕದ ಅಧ್ಯಕ್ಷ ಹೊಸೂರು ಸೂರಜ್, ಪಕ್ಷದ ಪ್ರಮುಖರುಗಳಾದ ಕಿರಣ್ ಪೂವಯ್ಯ, ಶರಿನ್, ಕೌಶಿಕ್ ಹಾಜರಿದ್ದರು.