ಮಡಿಕೇರಿ, ಫೆ. ೧೪: ವರ್ಷಂಪ್ರತಿ ನಡೆಯುವ ಉತ್ಸವ ಈ ಬಾರಿ ಮಾರ್ಚ್ ೭ನೇ ತಾರೀಕು ಮಂಗಳವಾರ ನಡೆಯಲಿದೆ. ಸತ್ಯನಾರಾಯಣ ಪೂಜೆ ಹೊರತುಪಡಿಸಿ, ಇತರ ಎಲ್ಲಾ ವಿಧದ ಪೂಜೆಗಳು, ತುಲಾಭಾರ ಸೇವೆ ನಡೆಸಲು ಅವಕಾಶವಿದೆ.
ಆ ದಿನ ಬೆಳಿಗ್ಗೆ ಎತ್ತು ಪೋರಾಟ (ಜೋಡೆತ್ತು ಪೋರಾಟ) ದಿಂದ ಮೊದಲ್ಗೊಂಡು ಅಪರಾಹ್ನ ದೇವರ ಉತ್ಸವ ಮೂರ್ತಿಯನ್ನು ಮಲ್ಮ ಬೆಟ್ಟಕ್ಕೆ ಕೊಂಡೊಯ್ದು ದೇವಕಟ್ಟು ಮುರಿದು ಸಂಜೆ ಪಾಡಿ ದೇವಸ್ಥಾನಕ್ಕೆ ಹಿಂದಿರುಗಿ ದೇವರ ನಾಟ್ಯ ಪ್ರದರ್ಶನದೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ ಎಂದು ದೇವಾಲಯದ ದೇವ ತಕ್ಕರಾದ ಪರದಂಡ ಕುಟುಂಬಸ್ಥರು ವಿನಂತಿಸಿದ್ದಾರೆ.
ಉತ್ಸವದ ಅನಾದಿಕಾಲದ ನಿಯಮಾವಳಿಯಂತೆ ಫೆಬ್ರವರಿ ೨೧ರ ಮಂಗಳವಾರ ಮಲ್ಮದಲ್ಲಿ ‘ದೇವಕಟ್ಟು’ ಬೀಳಲಿದ್ದು, ಮಾರ್ಚ್ ೭ ರಂದು ಉತ್ಸವ ಸಂಪನ್ನವಾಗುವವರೆಗೆ ಭಕ್ತಾದಿಗಳು ಪ್ರಾಣಿಹಿಂಸೆ, ಮದುವೆ ಮುಂತಾದ ಆಡಂಬರದ ಸಮಾರಂಭಗಳನ್ನು ನಡೆಸದೆ ಭಕ್ತಿಪೂರ್ವಕವಾಗಿ ನಡೆದುಕೊಳ್ಳಲು ಕೋರಲಾಗಿದೆ.