ವೀರಾಜಪೇಟೆ, ಫೆ. ೧೪: ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರುವ ನಿಟ್ಟಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದಲ್ಲಿ ೩೦ ಸಾವಿರ ಮಹಿಳೆಯರಿಗೆ ಸ್ವ ಉದ್ಯೋಗಕ್ಕಾಗಿ ರೂ. ೬೦೦ ಕೋಟಿ ಸಾಲ ನೀಡಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲಿಯಾನ್ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಮಹಿಳಾ ಜ್ಞಾನ ವಿಕಾಸ ಕೇಂದ್ರಗಳು ಮತ್ತು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ನಗರದ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ಆಸಕ್ತ ಮಹಿಳೆಯರನ್ನು ಗುರುತಿಸಿ ತರಬೇತಿ ನೀಡಲಾಗುತ್ತಿದೆ. ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಲ ನೀಡುತ್ತಿಲ್ಲ ಬ್ಯಾಂಕ್ ಸಾಲ ನೀಡುತ್ತಿದೆ ಎಂದ ಅವರು ಯೋಜನೆಯ ಸೌಲಭ್ಯಗಳನ್ನು ಸದಸ್ಯರು ಸರಿಯಾಗಿ ಬಳಕೆ ಮಾಡಿಕೊಳ್ಳುವಂತಾಗಬೇಕು ಎಂದರು.

ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಡಿ.ಆರ್. ರವಿಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಾರ್ವಜನಿಕರು ಪೊಲೀಸರೊಂದಿಗೆ ಸಹಕಾರ ನೀಡಬೇಕು. ಗ್ರಾಮಗಳಲ್ಲಿ ಸಮಸ್ಯೆಗಳಿದ್ದಾಗ ನೇರವಾಗಿ ದೂರವಾಣಿ ಮೂಲಕ ಸಂಪರ್ಕಿಸಬಹುದು. ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನ ಹರಿಸಬೇಕು ಎಂದರು.

ಯೋಜನೆಯ ತಾಲೂಕು ಜ್ಞಾನ ವಿಕಾಸ ಕೇಂದ್ರದ ಬಿ.ಎಸ್. ಪವಿತ್ರ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೀರಾಜಪೇಟೆ ಕಾವೇರಿ ಕಾಲೇಜಿನ ಉಪನ್ಯಾಸಕರಾದ ಅಂಬಿಕಾ ಉತ್ತಪ್ಪ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ' ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಬಾನಂಗಡ ಅರುಣ್, ಹಾಗೂ ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಜಿಲ್ಲಾ ನಿರ್ದೇಶಕರಾದ ಲೀಲಾವತಿ ಮಾತನಾಡಿದರು. ಅಮ್ಮತ್ತಿ ವಲಯದ ಮೇಲ್ವಿಚಾರಕ ಸುಜೀರ್ ಕುಲಾಲ್, ತಾಲೂಕು ಲೆಕ್ಕ ಪರಿಶೋಧಕ ನವೀನ್, ಜ್ಞಾನ ವಿಕಾಸ ಸಮನ್ವಯಾಧಿಕಾರಿಗಳಾದ ಅಮೃತ, ಮತ್ತು ಆರ್. ಶ್ರೇಯಾ ಉಪಸ್ಥಿತರಿದ್ದರು. ವೀರಾಜಪೇಟೆ ಮತ್ತು ಮಡಿಕೇರಿ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಬಿ. ದಿನೇಶ್ ಸ್ವಾಗತಿಸಿ, ಕೃಷಿ ಅಧಿಕಾರಿ ರಾಮ್ ಕುಮಾರ್ ನಿರೂಪಿಸಿದರೆ, ವೀರಾಜಪೇಟೆ ವಲಯ ಮೇಲ್ವಿಚಾರಕ ನಾಗರಾಜ್ ವಂದಿಸಿದರು.

ಪೊನ್ನಂಪೇಟೆ ಶ್ರೀಮಂಗಲ ವಲಯದ ಸದಸ್ಯರಾದ ಸುಜಾತ ಮನೆಯವರಿಗೆ ಗ್ಯಾಸ್ ಸ್ಪೋಟದಿಂದ ಗಾಯಗೊಂಡವರಿಗೆ ರೂ, ೩೩ ಸಾವಿರ, ಗೋಣಿಕೊಪ್ಪ-ಚೆನ್ನಂಗೊಲ್ಲಿ ರುಕ್ಮಿಣಿ ಅವರಿಗೆ ಆಸ್ಪತ್ರೆ ಚಿಕಿತ್ಸಾ ವೆಚ್ಚ ರೂ, ೨೦ ಸಾವಿರ, ಮತ್ತು ಜಯ ಅವರಿಗೆ ಆಸ್ಪತ್ರೆ ಚಿಕಿತ್ಸಾ ವೆಚ್ಚ ರೂ,೨೦ ಸಾವಿರ, ವೀರಾಜಪೇಟೆ ವೆಂಕಪ್ಪ ಅವರಿಗೆ ಹೃದಯ ಸಂಬAಧಿ ಕಾಯಿಲೆಗೆ ಸಹಾಯ ರೂ. ೨೦ ಸಾವಿರ, ಸಿದ್ದಾಪುರ-ಪಾಲಿಬೆಟ್ಟ ಸಿ.ಎಸ್. ಸರಿತಾ ಆನೆ ದಾಳಿಗೆ ತುತ್ತಾದ ಕಾರಣ ರೂ ೨೦ ಸಾವಿರ, ಸಿದ್ದಾಪುರ-ಮಾಲ್ದಾರೆ ವಿ.ಎಸ್.ಅಪ್ಪಯ್ಯ ಹೃದಯ ಸಂಬAಧಿ ಕಾಯಿಲೆಗೆ ರೂ. ೧೫ ಸಾವಿರ ಚೆಕ್ ನೀಡಲಾಯಿತು. ಈ ಸಂದರ್ಭ ಜ್ಞಾನ ವಿಕಾಸ ಕೇಂದ್ರ, ಪ್ರಗತಿಬಂಧು ಸ್ವ ಸಹಾಯ ಸಂಘಗಳ ಸದಸ್ಯರು ಹಾಜರಿದ್ದರು.