(ಹೆಚ್.ಕೆ.ಜಗದೀಶ್)ಗೋಣಿಕೊಪ್ಪಲು, ಫೆ. ೧೩: ತನ್ನ ಬಂಧುವಿನ ಸಾವಿನ ಸುದ್ದಿಯನ್ನು ತಿಳಿದು ಅಂತ್ಯಕ್ರಿಯೆಗೆ ದೂರದ ಪಂಚವಳ್ಳಿ ಸಮೀಪದ ಹನುಗೋಡು ಗ್ರಾಮದಿಂದ ತಡರಾತ್ರಿ ಆಗಮಿಸಿದ್ದ ವ್ಯಕ್ತಿಯೊಬ್ಬರು ಚೂರಿ ಕಾಡು ಬಳಿ ಇರುವ ತನ್ನ ಮಗನ ಮನೆಯಲ್ಲಿ ರಾತ್ರಿ ಕಳೆದು ಮುಂಜಾನೆ ೭.೩೦ರ ಸುಮಾರಿಗೆ ಮನೆಯಿಂದ ಹೊರ ಬಂದು ಬಹಿರ್ದೆಸೆಗಾಗಿ ಹೊರಹೋಗುತ್ತಿದ್ದಂತೆಯೇ ಹುಲಿಯ ಬಾಯಿಗೆ ಸಿಲುಕಿ ಕೊನೆಯುಸಿರೆಳೆದ ಘಟನೆ ದ.ಕೊಡಗಿನ ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೂರಿಕಾಡು ಸಮೀಪದ ಕಾಫಿ ತೋಟದ ಲೈನ್ ಮನೆ ಬಳಿ ನಡೆದಿದೆ. ಮೂಲತಃ ಪಂಚವಳ್ಳಿ ಸಮೀಪದ ಹನುಗೋಡು ಗ್ರಾಮದ ರಾಜು(೬೫) ಎಂಬವರೇ ಹುಲಿಯ ಬಾಯಿಗೆ ಸಿಲುಕಿ ಪ್ರಾಣ ಕಳೆದುಕೊಂಡ ದುರ್ದೈವಿಯಾಗಿದ್ದಾನೆ.
ಕಾರ್ಮಿಕ ರಾಜು ಭಾನುವಾರ ರಾತ್ರಿಯ ವೇಳೆ ತನ್ನ ಕುಟುಂಬದ ಯುವಕ ಚೇತನ್ ಎಂಬಾತ ಹುಲಿ ದಾಳಿಗೆ ಸಿಲುಕಿ ಮೃತಪಟ್ಟ ಮಾಹಿತಿ ತಿಳಿದು ಅಂತ್ಯಕ್ರಿಯೆಗಾಗಿ ಪಂಚವಳ್ಳಿ ಸಮೀಪದ ಹನುಗೋಡುವಿನಿಂದ ಹಲವು ಕುಟುಂಬ ಸದಸ್ಯರೊಂದಿಗೆ ಜೀಪಿನಲ್ಲಿ ಆಗಮಿಸಿ ಚೂರಿಕಾಡು ಬಳಿ ಇರುವ ತನ್ನ ಮಗನಾದ ರಾಜೇಶ್ ಮನೆಯಲ್ಲಿ ತಂಗಿದ್ದರು. ಮುಂಜಾನೆ ವೇಳೆ ನಿದ್ರೆಯಿಂದ ಎದ್ದ ರಾಜು ಮನೆಯ ಅಂಗಳದ ಬಳಿ ಆಗಮಿಸುತ್ತಿದ್ದಂತೆಯೇ ಸಮೀಪದ ತೋಟದಲ್ಲಿದ್ದ ಹುಲಿಯೊಂದು ದಿಢೀರನೆ ದಾಳಿ ಮಾಡಿ ರಾಜು ಅವರನ್ನು ತೋಟಕ್ಕೆ ಎಳೆದೊಯ್ದಿದೆ. ಇದನ್ನು ಗಮನಿಸಿದ ರಾಜು ಅವರ ಮಗ ರಾಜೇಶ್ ಹಾಗೂ ಇತರರು ಕತ್ತಿ ತೆಗೆದುಕೊಂಡು ಹುಲಿಯ ಹಿಂದೆ ಜೋರಾಗಿ ಸದ್ದು ಮಾಡುತ್ತಾ ಬೆನ್ನಟ್ಟಿದ್ದಾರೆ.
(ಮೊದಲ ಪುಟದಿಂದ) ಕತ್ತಿಯನ್ನು ಹುಲಿಯತ್ತ ಬೀಸುತ್ತಿದ್ದಂತೆಯೇ ಹುಲಿ ರಾಜುವಿನ ದೇಹವನ್ನು ಬಿಟ್ಟು ತೋಟದಲ್ಲಿ ಮರೆಯಾಗಿದೆ.
ಮನೆಯಲ್ಲಿದ್ದವರು ಜೋರಾಗಿ ಬೊಬ್ಬೆ ಹಾಕಿಕೊಂಡ ಹಿನ್ನೆಲೆಯಲ್ಲಿ ಸಮೀಪದಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದು ಮುಂಜಾಗ್ರತಾ ಕ್ರಮವಾಗಿ ಹುಲಿಯನ್ನು ಕಾಫಿ ತೋಟದಿಂದ ಓಡಿಸಲು ಆಕಾಶದತ್ತ ಬೆದರುಗುಂಡುಗಳನ್ನು ಹಾರಿಸಿದ್ದಾರೆ. ಈ ಸದ್ದಿನಿಂದ ಹುಲಿಯು ಕಾಫಿ ತೋಟದಿಂದ ಮರೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಮನೆಯ ಮಾಲೀಕರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ರವಾನಿಸಿದ್ದಾರೆ. ಈ ಸುದ್ದಿಯು ಕಾಡ್ಗಿಚ್ಚಿನಂತೆ ಹರಡಲಾರಂಭಿಸಿ ತೋಟದ ಲೈನ್ ಮನೆಯ ಬಳಿ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ವಿವಿಧ ರಾಜಕೀಯ ಪಕ್ಷದ ಮುಖಂಡರು ಸಂಘ ಸಂಸ್ಥೆಯ ಪ್ರಮುಖರು ಜಮಾಯಿಸತೊಡಗಿದರು.
ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಕುಟ್ಟ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಯಶ್ವಂತ್, ಠಾಣಾಧಿಕಾರಿ ಡಿ.ಲಕ್ಷö್ಮಣ್ ಸ್ಥಳಕ್ಕೆ ಆಗಮಿಸಿದರು. ಇದೇ ವೇಳೆ ಮಾಹಿತಿ ತಿಳಿದ ವೀರಾಜಪೇಟೆ ಡಿವೈಎಸ್ಪಿ ನಿರಂಜನ್ರಾಜೇ ಅರಸ್ ಘಟನಾ ಸ್ಥಳಕ್ಕೆ ತಲುಪಿದರು. ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾವಣೆಗೊಂಡ ಹಿನ್ನೆಲೆಯಲ್ಲಿ ನೂರಾರು ಪೊಲೀಸ್ ಸಿಬ್ಬಂದಿಗಳನ್ನು ಮುಂಜಾಗ್ರತಾ ಕ್ರಮವಾಗಿ ಬರಮಾಡಿಕೊಳ್ಳಲಾಯಿತು. ಎಸ್ಪಿ ಕೆ. ರಾಮರಾಜನ್, ಎಎಸ್ಪಿ ಸುಂದರ್ರಾಜ್ ಸ್ಥಳಕ್ಕೆ ಆಗಮಿಸಿ ಸೂಕ್ತ ವ್ಯವಸ್ಥೆ ಮಾಡಿದರು.
ಸಮಯ ಕಳೆಯುತ್ತಿದ್ದಂತೆಯೆ ಘಟನಾ ಸ್ಥಳಕ್ಕೆ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ನಾಗರಹೊಳೆ ರಾಷ್ಟಿçÃಯ ಉದ್ಯಾನವನದ ನಿರ್ದೇಶಕರಾದ ಹರ್ಷಕುಮಾರ್ ಹಾಗೂ ಎಸಿಎಫ್ ಗೋಪಾಲ್ ಭೇಟಿ ನೀಡಿದರು. ಈ ವೇಳೆ ಸ್ಥಳದಲ್ಲಿದ್ದ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಪೆಮ್ಮಣಮಾಡ ನವೀನ್, ನಂಜುAಡಸ್ವಾಮಿ ಬಣದ ರೈತ ಸಂಘದ ಕಾರ್ಯಾಧ್ಯಕ್ಷರಾದ ಕಳ್ಳಿಚಂಡ ಧನು ಸೇರಿದಂತೆ ಇನ್ನಿತರ ಪ್ರಮುಖರು ಅವರುಗಳನ್ನು ತೀವ್ರ ತರಾಟೆಗೆ ತೆಗದುಕೊಂಡರು. ಹುಲಿಯನ್ನು ತಕ್ಷಣವೇ ಕೊಲ್ಲಬೇಕು ಇಲ್ಲದಿದ್ದಲ್ಲಿ ಇಲ್ಲಿಂದ ಹೊರಡಿ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದರು.
ಹುಲಿಯ ಸೆರೆಗೆ ಅಗತ್ಯ ಕ್ರಮ ಕೈಗೊಂಡ ಇಲಾಖೆಯ ಸಿಬ್ಬಂದಿಗಳು ಲಾರಿಯ ಮೂಲಕ ನಾಲ್ಕು ಸಾಕಾನೆಗಳನ್ನು ಬರಮಾಡಿಕೊಂಡರು. ನೂರಾರು ಸಿಬ್ಬಂದಿಗಳನ್ನು ಸ್ಥಳದಲ್ಲಿ ನಿಯೋಜಿಸಿ ತೋಟದ ಸುತ್ತಲೂ ಕೂಂಬಿAಗ್ ಕಾರ್ಯಚರಣೆಯಲ್ಲಿ ಸಾಕಾನೆಗಳೊಂದಿಗೆ ಆರಂಭಿಸಿದರು.
ಘಟನಾ ಸ್ಥಳಕ್ಕೆ ಮಡಿಕೇರಿಯ ಸಿಸಿಎಫ್ ತಡವಾಗಿ ಆಗಮಿಸಿರುವುದನ್ನು ಆಕ್ಷೇಪಿಸಿ ಸ್ಥಳದಲ್ಲಿದ್ದ ನೂರಾರು ಗ್ರಾಮಸ್ಥರು ತೋಟದ ರಸ್ತೆಯಲ್ಲಿಯೇ ಅಡ್ಡಗಟ್ಟಿ ಘಟನೆಗೆ ಇಲಾಖೆಯ ಸಿಬ್ಬಂದಿ ಕಾರಣ ಇಲ್ಲಿನ ಆರ್ಎಫ್ಓ ಅವರನ್ನು ಅಮಾನತು ಮಾಡಬೇಕು. ಹುಲಿಯನ್ನು ಕೊಲ್ಲಲು ಲಿಖಿತ ಆದೇಶ ನಾಗರಿಕರಿಗೆ ನೀಡಬೇಕು ಎಂದು ಆಗ್ರಹಿಸಿದರು. ಇದರಿಂದ ಕೆಲಕಾಲ ಪ್ರಕ್ಷÄಬ್ಧ ವಾತಾವರಣ ನಿರ್ಮಾಣವಾಯಿತು. ಇದನ್ನು ಗಮನಿಸಿದ ಎಸ್ಪಿ ರಾಮ್ರಾಜನ್ ಹಾಗೂ ಎಎಸ್ಪಿ ಸುಂದರ್ರಾಜ್ ಸ್ಥಳಕ್ಕೆ ಆಗಮಿಸಿ ಆಕ್ರೋಶಗೊಂಡ ನಾಗರಿಕರನ್ನು ಸಮಧಾನ ಪಡಿಸುವಲ್ಲಿ ಯಶಸ್ವಿಯಾದರು.
ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಜಿಲ್ಲಾಧ್ಯಕ್ಷ ತೀತಿರ ಧರ್ಮಜ, ಮುಖಂಡರಾದ ಪಲ್ವಿನ್, ಕೊಲ್ಲೀರ ಬೋಪಣ್ಣ ಮುಂತಾದವರು ಘಟನೆ ಸಂಬAಧ ಸಿಸಿಎಫ್ ಮೂರ್ತಿ ಅವರನ್ನು ತರಾಟೆಗೆ ತೆಗೆದುಕೊಂಡರು. ಕೊಡಗಿನಲ್ಲಿ ಅದರಲ್ಲಿಯೂ ದ.ಕೊಡಗಿನಲ್ಲಿ ಹುಲಿಯ ಹಾವಳಿಗೆ ಕೊನೆ ಇಲ್ಲದಂತಾಗಿದೆ. ಇದಕ್ಕೆ ಇಲಾಖೆಯ ಅಧಿಕಾರಿಗಳು ನೇರ ಹೊಣೆಯಾಗಿದ್ದಾರೆ. ಇದರಿಂದಾಗಿ ಎರಡು ಅಮಾಯಕ ಜೀವಗಳು ಬಲಿಯಾಗಿವೆ. ಆ ಕಾರಣದಿಂದ ಇಲಾಖೆಯ ಅಧಿಕಾರಿಗಳ ಮೇಲೆ ಪೊಲೀಸ್ ಪ್ರಕರಣ ದಾಖಲಾಗಬೇಕು. ನಂತರ ಈ ಬಗ್ಗೆ ನ್ಯಾಯಾಲಯದಲ್ಲಿ ಚರ್ಚೆ ನಡೆಯಬೇಕು. ಹಾಗಾದಲ್ಲಿ ಮಾತ್ರ ಬಡ ಜೀವಗಳಿಗೆ ನ್ಯಾಯ ಸಿಕ್ಕಿದಂತಾಗುತ್ತದೆ ಎಂದು ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಸ್ಥಳದಲ್ಲಿದ್ದ ಪೊಲೀಸ್ ವರಿಷ್ಠಾಧಿಕಾರಿ ಅವರ ಬಳಿ ಹೇಳಿದರು. ಗ್ರಾಮದ ಜನತೆ ಧ್ವನಿಗೂಡಿಸಿದರು.
ಮಧ್ಯಾಹ್ನದ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಅಜ್ಜಮಾಡ ಚಂಗಪ್ಪ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್, ವಿವಿಧ ಪದಾಧಿಕಾರಿಗಳಾದ ಆಲೆಮಾಡ ಮಂಜುನಾಥ್, ಚಟ್ಟಂಗಡ ಕಂಬ ಕಾರ್ಯಪ್ಪ, ಪುಚ್ಚಿಮಾಡ ರಾಯ್ ಮಾದಪ್ಪ, ತೀತರಮಾಡ ರಾಜ, ಕವಿತ ರಾಮು, ಸೇರಿದಂತೆ ಇನ್ನಿತರ ಹಲವು ಮಂದಿ ಸ್ಥಳಕ್ಕೆ ಜಮಾಯಿಸಿ ಅರಣ್ಯ ಇಲಾಖೆಯ ಅಧಿಕಾರಿಗಳ ಕಾರ್ಯ ವೈಖರಿಯನ್ನು ಖಂಡಿಸಿ ಧಿಕ್ಕಾರದ ಘೋಷಣೆ ಕೂಗಿದರು.
ನಾಗರಿಕರು ತಿಳಿಸಿದಂತೆ ನಾಗರಹೊಳೆ ಆರ್ಎಫ್ಒ ಜಿಶಾನ್ ಎಂಬವರನ್ನು ಅಮಾನತುಗೊಳಿಸಬೇಕು. ಹುಲಿಯನ್ನು ಕೊಲ್ಲುವ ಆದೇಶ ಪತ್ರವನ್ನು ತಕ್ಷಣ ನೀಡುವಂತೆ ಆಗ್ರಹಿಸಿದರು. ಇದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕೆಲ ಕಾಲ ಗೊಂದಲಕ್ಕೀಡಾದರು. ಪ್ರತಿಭಟನಕಾರರ ಪ್ರಶ್ನೆಗಳಿಗೆ ಉತ್ತರಿಸಲು ತಡಕಾಡಿದರಾದರೂ ಅಂತಿಮವಾಗಿ ಈ ಹುಲಿಯ ದಾಳಿಗೆ ಕಾರ್ಯಾಚರಣೆ ಮೂಲಕ ಅಂತ್ಯಹಾಡದೆ ತೆರಳುವುದಿಲ್ಲ. ಕಾರ್ಯಾಚರಣೆಗೆ ಗ್ರಾಮಸ್ಥರು ಸಂಘ ಸಂಸ್ಥೆಯವರು ಸಹಕಾರ ನೀಡಬೇಕೆಂದು ಸಿಸಿಎಫ್ ಮನವಿ ಮಾಡಿದರು.
ಇತ್ತೀಚಿನ ದಿನದಲ್ಲಿ ರೈತರ ತೋಟಗಳಿಗೆ ಗಡಿ ಗುರುತು ಮಾಡಿ ತೊಂದರೆ ನೀಡುತ್ತಿದ್ದಾರೆ. ಜಿಂಕೆಯೊAದು ತಾನಾಗಿಯೇ ಬಸ್ಗೆ ಡಿಕ್ಕಿ ಹೊಡೆದು ಮೃತಪಟ್ಟಾಗ ಅನವಶ್ಯಕವಾಗಿ ಚಾಲಕರಿಗೆ ಅರಣ್ಯ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ. ಅಲ್ಲದೆ ಇನ್ನಿತರ ವಿಚಾರದಲ್ಲಿ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಸ್ಥಳದಲ್ಲಿದ್ದ ರೈತ ಸಂಘದ ಕಳ್ಳಿಚಂಡ ಧನು ಹಾಗೂ ಇತರರು ಹಿರಿಯ ಅಧಿಕಾರಿಗಳಿಗೆ ಇಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ವಿವರಿಸಿದರು. ಇವುಗಳನ್ನು ಸರಿಪಡಿಸುವುದಾಗಿ ಅಧಿಕಾರಿಗಳು ನಾಗರಿಕರಿಗೆ ಭರವಸೆ ನೀಡಿದರು. ನಿನ್ನೆ ಮೃತಪಟ್ಟ ಚೇತನ್ ಕುಟುಂಬಕ್ಕೆ ಇಂದು ೨.೫೦ ಲಕ್ಷ, ರಾಜು ಅವರ ಕುಟುಂಬಕ್ಕೆ ೫ ಲಕ್ಷ ಪರಿಹಾರ ಚೆಕ್ ವಿತರಣೆ ಮಾಡಲಾಯಿತು. ಚೇತನ್ ಕುಟುಂಬಕ್ಕೆ ನಿನ್ನೆ ದಿನ ೨.೫೦ ಲಕ್ಷ ಪರಿಹಾರವನ್ನು ನೀಡಲಾಗಿತ್ತು.
ಘಟನಾ ಸ್ಥಳದಲ್ಲಿ ಗಿರಿಜನ ಕಲ್ಯಾಣಾಧಿಕಾರಿ ಗುರುಶಾಂತಪ್ಪ, ಕೆ.ಬಾಡಗ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಚೆಪ್ಪುಡಿರ ರೀಟಾ, ಸದಸ್ಯರಾದ ಮುಕ್ಕಾಟಿರ ರಿತೇಶ್ ಬಿದ್ದಪ್ಪ, ಗ್ರಾಮದ ಪ್ರಮುಖರಾದ ಕಳ್ಳಂಗಡ ಸೌರಬ್, ಬೊಳ್ಳೆರ ವಿಜಯ್, ನೆಲ್ಲಿರ ಪೂಣಚ್ಚ, ಚೆಪ್ಪುಡಿರ ಬೋಜ, ದೇಯಂಡ ಜಯರಾಮ್, ವೀರಾಜಪೇಟೆ ಬಿಜೆಪಿ ಮಂಡಲ ಅಧ್ಯಕ್ಷ, ನೆಲ್ಲಿರ ಚಲನ್, ಬಿಜೆಪಿ ಪ್ರಮುಖರಾದ ಕಟ್ಟೆರ ಈಶ್ವರ ಸೇರಿದಂತೆ ಅನೇಕ ಗಣ್ಯರು ರಾಜಕೀಯ ಮುಖಂಡರು, ಸಂಘ ಸಂಸ್ಥೆಯ ಪ್ರಮುಖರು ಘಟನಾ ಸ್ಥಳದಲ್ಲಿ ಜಮಾವಣೆಗೊಂಡಿದ್ದರು. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹದ ಅಂತ್ಯಸAಸ್ಕಾರ ನೆರವೇರಿಸಲಾಯಿತು.