ಮಡಿಕೇರಿ, ಫೆ. ೧೨: ಕೊಡಗು ಪತ್ರಕರ್ತರ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಪೊಲೀಸ್ ಕವಾಯತು ಮೈದಾನದಲ್ಲಿ ಆಯೋಜಿಸಲಾಗಿದ್ದ ಸೌಹಾರ್ದ ಕ್ರಿಕೆಟ್ ಪಂದ್ಯಾಟದಲ್ಲಿ ಪೊಲೀಸ್(ಎ) ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಮಾಸ್ಟರ್ಸ್ ಇಲೆವೆನ್ ತಂಡ ದ್ವಿತೀಯ ಸ್ಥಾನಗಳಿಸಿತು. ಲೀಗ್ ಮಾದರಿಯಲ್ಲಿ ನಡೆದ ಪಂದ್ಯಾಟದಲ್ಲಿ ಕೊಡಗು ಪತ್ರಕರ್ತರ ಸಂಘದ ಎರಡು ತಂಡಗಳು, ಪೊಲೀಸ್ ಇಲಾಖೆಯ ಎರಡು ತಂಡಗಳು, ಕಂದಾಯ ಇಲಾಖೆ, ಮಾಸ್ಟರ್ಸ್ ಇಲೆವೆನ್ ತಂಡಗಳು ಪಾಲ್ಗೊಂಡಿದ್ದವು.
ಪೊಲೀಸ್(ಎ)ತಂಡ ಹಾಗೂ ಮಾಸ್ಟರ್ಸ್ ಇಲೆವೆನ್ ತಂಡದ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಪೊಲೀಸ್(ಎ) ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಮಾಸ್ಟರ್ಸ್ ಇಲೆವೆನ್ ತಂಡ ನಿಗದಿತ ೩ ಓವರ್ ಗಳಲ್ಲಿ ೨ ವಿಕೆಟ್ ಕಳೆದುಕೊಂಡು ೧೭ರನ್ನುಗಳ ಗುರಿ ನೀಡಿತು. ಗುರಿ ಬೆನ್ನಟ್ಟಿದ ಪೊಲೀಸ್ (ಎ) ತಂಡ ೧.೫ ಓವರ್ನಲ್ಲೇ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪುವ ಮೂಲಕ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿತು.
ಪAದ್ಯಾವಳಿಯ ಸರಣಿ ಶ್ರೇಷ್ಟ ಪ್ರಶಸ್ತಿ ಹಾಗೂ ಬೆಸ್ಟ್ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಮಾಸ್ಟರ್ಸ್ ಇಲೆವೆನ್ ತಂಡದ ಮಹೇಶ್ ಪಡೆದುಕೊಂಡರೆ, ಫೈನಲ್ಸ್ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಪೊಲೀಸ್ (ಎ)ತಂಡದ ನಂದ ಹಾಗೂ ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ನಾಗೇಶ್ ಪಡೆದುಕೊಂಡರು. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿಯನ್ನು ನೀಡಲಾಯಿತು. ಬಹುಮಾನ ವಿತರಣಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ.ರಾಜೇಂದ್ರ, ಆರ್.ಆರ್. ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಬಿ.ಸಿ. ನವೀನ್ಕುಮಾರ್ ಇವರುಗಳು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ, ಮಾತನಾಡಿದರು. ಕೊಡಗು ಪತ್ರಕರ್ತರ ಸಂಘದ ಹಿರಿಯ ಸಲಹೆಗಾರ ಬಿ.ಜಿ. ಅನಂತಶಯನ, ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್, ಪ್ರಧಾನ ಕಾರ್ಯದರ್ಶಿ ಉಜ್ವಲ್ರಂಜಿತ್, ಕ್ಷೇಮನಿಧಿ ಸಮಿತಿ ಅಧ್ಯಕ್ಷ ಹರೀಶ್ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸದಸ್ಯ ವಿನೋದ್ ಮೂಡಗದ್ದೆ ನಿರೂಪಿಸಿ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಸ್ವಾಗತಿಸಿ, ಕ್ರೀಡಾ ಸಮಿತಿ ಸಂಚಾಲಕ ಸುರೇಶ್ ಬಿಳಿಗೇರಿ ವಂದಿಸಿದರು.