ನಾಪೋಕ್ಲು, ಫೆ. ೧೨: ರೈತರ ಬೆಳವಣಿಗೆಯಲ್ಲಿ ದವಸ ಭಂಡಾರಗಳ ಪಾತ್ರ ಮಹತ್ವದ್ದಾಗಿದ್ದು ಅವುಗಳ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಸಮೀಪದ ನೆಲಜಿ ಸಹಕಾರ ದವಸ ಭಂಡಾರ ನಿಯಮಿತದ ನವೀಕೃತಗೊಂಡ ಕಟ್ಟಡ ಹಾಗೂ ಶತಮಾನೋತ್ಸವ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಸಹಕಾರಿ ಸಂಸ್ಥೆಗಳಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪ ಇರಬಾರದು ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ ಸುಜಾ ಕುಶಾಲಪ್ಪ ಹೊರ ಸಭಾಂಗಣ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ರೈತರು ಅಭಿವೃದ್ಧಿ ಆಗಬೇಕಾದರೆ ಸಹಕಾರಿ ಸಂಘಗಳ ಅಗತ್ಯವಿದೆ. ಗ್ರಾಮೀಣ ರೈತರ ಆರ್ಥಿಕ ಅಭಿವೃದ್ಧಿಯಿಂದ ಸ್ಥಳೀಯ ಬ್ಯಾಂಕುಗಳ ಅಭಿವೃದ್ಧಿ ಆಗುತ್ತದೆ ಎಂದರು

ವೇದಿಕೆಯನ್ನು ಉದ್ಘಾಟನೆ ಮಾಡಿದ ಕೊಡಗು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೆರ ಬಿ ಗಣಪತಿ ಮಾತನಾಡಿ, ನೆಲಜಿ ಗ್ರಾಮದ ಸಹಕಾರಿಗಳ ಸಹಕಾರದಿಂದ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ಇದು ಇತರ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಬೇಕು ಎಂದರು.

ಹೈಕೋರ್ಟ್ ಹಿರಿಯ ವಕೀಲ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿ ಸಹಕಾರ ಸಂಘಗಳನ್ನು ಸ್ಥಾಪಿಸುವುದು ಸಹಕಾರಿಗಳ ಮೂಲಭೂತ ಹಕ್ಕಾಗಿದ್ದು, ಇದರಲ್ಲಿ ಸರ್ಕಾರಿ ಅಧಿಕಾರಿಗಳು ಹಸ್ತಕ್ಷೇಪ ಮಾಡುವಂತಿಲ್ಲ. ಸಹಕಾರಿ ವ್ಯವಸ್ಥೆ ಜಿಲ್ಲೆಯಲ್ಲಿ ಉತ್ತಮವಾಗಿ ನಡೆಯುತ್ತಿದೆ. ಶೇ. ೮೫ರಷ್ಟು ಸಹಕಾರಿ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.

ಕೊಡಗು ಜಿಲ್ಲಾ ಸಹಕಾರ ಒಕ್ಕೂಟಗಳ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಿವೃತ್ತ ಡಿಎಫ್‌ಓ ಮುಕ್ಕಾಟಿರ ಎಂ. ಜಯ, ನೆಲಜಿ ಕೈಲ್‌ಪೊಳ್ದ್ ಕ್ರೀಡಾ ಸಮಿತಿ ಅಧ್ಯಕ್ಷ ಅಪ್ಪುಮಣಿಯಂಡ ಸನ್ನು ಸೋಮಣ್ಣ, ನಬಾರ್ಡ್ ನಿವೃತ್ತ ಡಿಡಿಎಂ ಮುಂಡAಡ ಸಿ. ನಾಣಯ್ಯ, ನೆಲಜಿ ನಾಡು ಮರಣ ಫಂಡ್ ಅಧ್ಯಕ್ಷ ಮಣವಟ್ಟಿರ ಎಂ. ಚೆಂಗಪ್ಪ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭ ವೇದಿಕೆಯಲ್ಲಿ ದಾನಿಗಳಾದ ಮಂಡಿರ ಎ. ಜಯದೇವಯ್ಯ, ಬಾಳಿಯಡ ಸಿ. ಪ್ರಕಾಶ್ ನಾಣಯ್ಯ ಹಾಗೂ ಅಚ್ಚಾಂಡಿರ ಬಿ. ಅರುಣ್ ಭೀಮಯ್ಯ ಉಪಸ್ಥಿತರಿದ್ದರು.

ನೆಲಜಿ ಸಹಕಾರ ದವಸ ಭಂಡಾರದ ಅಧ್ಯಕ್ಷ ಬಾಳಿಯಡ ಸಿ. ಕುಂಜಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ದವಸ ಬಂಡಾರದ ಆಡಳಿತ ಮಂಡಳಿ ಹಾಗೂ ಶತಮಾನೋತ್ಸವ ಸಮಾರಂಭದ ಸಮಿತಿಯ ಪದಾಧಿಕಾರಿಗಳು ಮತ್ತು ಸಮಿತಿ ಸರ್ವ ಸದಸ್ಯರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಈ ಸಂದರ್ಭ ಸಹಕಾರಿ ಕ್ಷೇತ್ರದ ಅಧ್ಯಕ್ಷರಾಗಿ ದುಡಿದವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಮಾಳೆಯಂಡ ಎ. ಅಯ್ಯಪ್ಪ, ಕೋಟೇರ ಪಿ. ಪಳಂಗಪ್ಪ, ನಾಪನೆರವಂಡ ಸಿ. ಪೊನ್ನಪ್ಪ, ಕೋಟೆರ ಈ. ಭೀಮಯ್ಯ, ಕೈಬುಲಿರ ಕೆ ಚಿಣ್ಣಪ್ಪ, ಕೈಬುಲಿರ ಕೆ ಗಣಪತಿ, ಬಾಳಿಯಡ ಜಿ.ಉತ್ತಪ್ಪ, ನಾಪನೆರವಂಡ ಸಿ ಸೋಮಯ್ಯ, ಮುಂಡAಡ ಕೆ. ಪೊನ್ನಣ್ಣ, ಚೆಟ್ಟಿನೆರವನ ಎಸ್. ಮಾದಪ್ಪ, ಮಾಜಿ ಕಾರ್ಯದರ್ಶಿ ಬದ್ದಂಜೆಟ್ಟೀರ ಬಿ.ನಾಣಯ್ಯ ಅವರನ್ನು ಹಾಗೂ ಸ್ಥಳದಾನಿಗಳಾದ ಬಾಳಿಯಡ ಕುಟುಂಬಸ್ಥರ ಪರವಾಗಿ ಪಟ್ಟೆದಾರ, ನಿವೃತ್ತ ಅರ್‌ಎಫ್‌ಓ ಕೆ.ತಮ್ಮಯ್ಯ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಮಂಡಿರ ಕೆ .ನಂಜಪ್ಪ, ದವಸ ಭಂಡಾರದ ಅಧ್ಯಕ್ಷ ಬಾಳಿಯಡ ಸಿ. ಕುಂಞಪ್ಪ ಅವರನ್ನು ಸನ್ಮಾನಿಸಲಾಯಿತು.

ಅಲ್ಲಾರಂಡ ಪ್ರೀತಿ ಕುಮಾರಿ ಪ್ರಾರ್ಥಿಸಿ ಬಾಳಿಯಡ ಕುಂಜಪ್ಪ ಸ್ವಾಗತಿಸಿದರು. ಮುಕ್ಕಾಟಿರ ಎಂ.ವಿನಯ್ ಕಾರ್ಯಕ್ರಮ ನಿರೂಪಿಸಿ, ಬದಂಜೆಟ್ಟೀರ ಎ.ತಿಮ್ಮಯ್ಯ ವಂದಿಸಿದರು. ಬಳಿಕ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

- ದುಗ್ಗಳ