ಸೋಮವಾರಪೇಟೆ, ಫೆ. ೧೩: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಮೀಪದ ಗೌಡಳ್ಳಿ ಬಿಜಿಎಸ್ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಸೋಮವಾರಪೇಟೆ ತಾಲೂಕಿನ ೮ನೇ ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡ ನಾಡು-ನುಡಿ, ನೆಲ-ಜಲ, ಭಾಷೆ-ಸಾಹಿತ್ಯ, ಸಂಸ್ಕೃತಿ, ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಲ್ಲಿ ಯಶಸ್ವಿಯಾಯಿತು.

ಸಮ್ಮೇಳನದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಾಹಿತ್ಯಾಸಕ್ತ ರೊಂದಿಗೆ ಗೌಡಳ್ಳಿ, ದೊಡ್ಡಮಳ್ತೆ, ಶನಿವಾರಸಂತೆ, ಕೊಡ್ಲಿಪೇಟೆ, ಸೋಮವಾರಪೇಟೆ ಭಾಗದ ಸಾಹಿತಿಗಳು, ಕನ್ನಡಾಭಿಮಾನಿಗಳು ಭಾಗವಹಿಸಿದ್ದರು. ಗ್ರಾಮೀಣ ಭಾಗದಲ್ಲಿ ನುಡಿಹಬ್ಬ ಆಯೋಜಿಸಿದ್ದರಿಂದ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವಲ್ಲಿ ಸಮ್ಮೇಳನ ಯಶಸ್ವಿಯಾಯಿತು. ಸಾಹಿತ್ಯ ದಿಗ್ಗಜರ ಮಾತುಗಳು, ವಿಚಾರವಂತರ ವಿಚಾರ ಮಂಡನೆ, ಸಾಧಕರಿಗೆ ಸನ್ಮಾನ, ಕವಿಗಳ ಕವನಗಳು, ಕಲಾವಿದರ ಗೀತಗಾಯನ, ಸ್ಥಳೀಯ ಪ್ರತಿಭೆಗಳ ನೃತ್ಯ ಕಾರ್ಯಕ್ರಮಗಳಿಗೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಹೆಸರಿನಲ್ಲಿ ನಿರ್ಮಿಸಿದ್ದ ವೇದಿಕೆಯು ಜಾಗ ನೀಡಿತ್ತು. ರಾತ್ರಿ ೧೨ ಗಂಟೆಯವರೆಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ಮೂಲಕ ೮ನೇ ಸಾಹಿತ್ಯ ಸಮ್ಮೇಳನಕ್ಕೆ ವರ್ಣರಂಜಿತ ತೆರೆ ಎಳೆಯಲಾಯಿತು.

ತಾಲೂಕಿನ ೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ ಸಮಾರೋಪ ಭಾಷಣ ಮಾಡಿದ ಹಿರಿಯ ಸಾಹಿತಿ, ಮೈಸೂರಿನ ಪ್ರೊ. ಕಾಳೇಗೌಡ ನಾಗವಾರ ಅವರು ಕನ್ನಡ ನಾಡು ಕಟ್ಟುವ ಕಾಯಕಕ್ಕೆ ಎಲ್ಲರೂ ಕೈಜೋಡಿಸಬೇಕು. ಅನೇಕ ಭಾಷಿಕರಿದ್ದರೂ ಕೊಡಗಿನಲ್ಲಿ ಕನ್ನಡದ ಸಂಭ್ರಮವಿದೆ. ಸಾಹಿತ್ಯವು ಸುಸಂಸ್ಕೃತ ಸಮಾಜ ಕಟ್ಟಲು ಪೂರಕವಾಗಿದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ನ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಎಲ್ಲರೂ ಭಾಗಿಯಾಗಿ ಸದಸ್ಯತ್ವ ಪಡೆದುಕೊಳ್ಳಬೇಕು. ಆ ಮೂಲಕ ಕನ್ನಡ ಸಾಹಿತ್ಯದ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದರು. ರಾಜ್ಯ ಒಕ್ಕಲಿಗರ ಸಂಘದ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಮೂಡಿಬಂದ ಕವಿಗೋಷ್ಠಿಯು, ಕೇಳುಗರನ್ನು ಚಿಂತನೆಯ ಓರೆಗೆ ಹಚ್ಚುವಂತೆ ಮಾಡಿತು.

ಕೊಡ್ಲಿಪೇಟೆಯ ಕನ್ನಡ ಉಪನ್ಯಾಸಕ ಕೆ.ಎ. ಕಿರಣ್‌ಕುಮಾರ್, ಯುವ ಕವಿ ಡಿ.ಪಿ. ಸತೀಶ್, ಕೆ.ಆರ್. ಪ್ರಜ್ಞಾ, ಲಾವಣ್ಯ ಮೋಹನ್, ಅನಿತಾ ಶುಭಾಕರ್, ಜಲಜಾಕ್ಷಿ, ರಾಚು ಶ್ಯಾಂ, ಕೆ.ಎನ್. ಕವಿತಾ, ರಾಜೇಶ್, ಹೆಚ್.ಆರ್. ಪವಿತ್ರ, ಎಸ್.ಎಂ. ಆಶಾ ಕವನಗಳನ್ನು ವಾಚಿಸಿದರು. ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಲೇಖಕಿ ರಾಣಿ ರವೀಂದ್ರ ಅವರು ಮಾತನಾಡಿ, ಸಮಾಜ ವನ್ನು ತಿದ್ದಿ ತೀಡುವ ಕೆಲಸವನ್ನು ಕವಿಗಳು ಈ ಹಿಂದಿನಿAದಲೂ ಮಾಡಿ ಕೊಂಡು ಬಂದಿದ್ದಾರೆ. ಕವಿ ಕೇವಲ ಹೇಳುವವನಷ್ಟೇ ಅಲ್ಲ; ಕೇಳುಗನೂ ಆಗಿರಬೇಕು ಎಂದರು. ಈ ಸಂದರ್ಭ ಹಿರಿಯ ಸಾಹಿತಿ ಜಲಾ ಕಾಳಪ್ಪ, ಕಲಾವಿದರಾದ ಪುರುಷೋತ್ತಮ್, ಕಸಾಪ ಪದಾಧಿಕಾರಿ ಮಚ್ಚಂಡ ಅಶೋಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಮಾತನಾಡಿ, ಕನ್ನಡವಿಲ್ಲದೇ ಕನ್ನಡಿಗರಿಲ್ಲ; ಕನ್ನಡಿಗರಿಲ್ಲದೇ ಕರ್ನಾಟಕವಿಲ್ಲ ಎಂಬುದನ್ನು ಮನಗಾಣಬೇಕು ಎಂದು ಕಿವಿಮಾತು ಹೇಳಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ತಾಲೂಕು ಅಧ್ಯಕ್ಷ ಎಸ್.ಡಿ. ವಿಜೇತ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಹಣಕಾಸು ಸಮಿತಿ ಅಧ್ಯಕ್ಷ ಪಿ.ಕೆ. ರವಿ, ಕಸಾಪ ಸಂಘಟನಾ ಕಾರ್ಯದರ್ಶಿ ಮೊಹಿದ್ದೀನ್, ಪ್ರಮುಖರಾದ ಬಿ.ಎಸ್. ಸುಂದರ್, ನಿವೃತ್ತ ಮುಖ್ಯೋಪಾಧ್ಯಾಯ ಗುಂಡೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ತಾಲೂಕಿನ ಸಾಧಕರನ್ನು ಸನ್ಮಾನಿಸ ಲಾಯಿತು. ಪತ್ರಿಕಾ ಕ್ಷೇತ್ರದ ಸಾಧನೆ ಗಾಗಿ ರವಿ ಹಿರಿಕರ, ಕೃಷಿ ಕ್ಷೇತ್ರದಲ್ಲಿ ಕೆರೆಹಳ್ಳಿ ಕೆ.ಎಂ. ಕಾಂತರಾಜು, ಗೌಡಳ್ಳಿಯ ತಾಯಮ್ಮ, ಶಿಕ್ಷಣ ಕ್ಷೇತ್ರದಲ್ಲಿ ಕೊಡ್ಲಿಪೇಟೆ ಸತೀಶ್, ಗೌಡಳ್ಳಿಯ ಬಿ.ಬಿ. ದಿನೇಶ್, ಶಾಂತಳ್ಳಿಯ ಎಸ್.ವಿ. ವಿಠಲ, ನಾಟಿ ವೈದ್ಯೆ ಸಜ್ಜಳ್ಳಿಯ ಜೇನುಕುರುಬರ ಸೀತೆ, ಗುಡಿ ಕೈಗಾರಿಕೆಯ ಸಾಧನೆಗಾಗಿ ಶನಿವಾರಸಂತೆಯ ಸುಶೀಲಾ ನಾಗರಾಜು, ಉತ್ತಮ ದಾದಿ ಹಿರಿಕರ ಗ್ರಾಮದ ಅಕ್ಕಮ್ಮ ಮುತ್ತಣ್ಣ ಅವರುಗಳನ್ನು ಸನ್ಮಾನಿಸಲಾಯಿತು. ಸಮಾಜ ಸೇವೆಗಾಗಿ ಗೌಡಳ್ಳಿಯ ಫ್ರಾನ್ಸಿಸ್ ಡಿಸೋಜ, ಸೋಮವಾರಪೇಟೆಯ ಎಚ್.ಎ. ನಾಗರಾಜ್, ಕಿಬ್ಬೆಟ್ಟದ ನಿವೃತ್ತ ಯೋಧ ಕೆ.ಕೆ. ವಿಜಯಕುಮಾರ್, ಕಲಾಕ್ಷೇತ್ರದ ಸಾಧನೆಗಾಗಿ ಕವಿತ ಪೀಟರ್, ಸಹಕಾರ ಕ್ಷೇತ್ರದ ಸೇವೆಗಾಗಿ ಕೊಡ್ಲಿಪೇಟೆಯ ತಮ್ಮಯ್ಯ, ರಕ್ಷಣಾ ಕ್ಷೇತ್ರದಲ್ಲಿನ ಸೇವೆಗಾಗಿ ನಿವೃತ್ತ ಡಿವೈಎಸ್‌ಪಿ ಕೂಡಕಂಡಿ ಎ. ಸೋಮಣ್ಣ ಅವರುಗಳನ್ನು ಸನ್ಮಾನಿಸಲಾಯಿತು.

ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಹೈಕೋರ್ಟ್ನ ಹಿರಿಯ ವಕೀಲ ವಿಚಾರ ಗೋಷ್ಠಿಯಲ್ಲಿ ‘ಸಾಹಿತ್ಯ, ಕಲೆ, ಸಾಂಸ್ಕೃತಿಕ ಕ್ಷೇತ್ರಕ್ಕೆ ಸೋಮವಾರಪೇಟೆ ತಾಲೂಕಿನ ಕೊಡುಗೆ’ ವಿಷಯದ ಬಗ್ಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಎಂ.ಬಿ.ತಿಲೋತ್ತಮೆ ನಂದಕುಮಾರ್, ವಿಘ್ನೇಶ್ವರ ಪ್ರೌಢಶಾಲೆಯ ಶಿಕ್ಷಕ ಕೆ.ಪಿ. ಜಯಕುಮಾರ್ ಅವರು ‘ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಸಾಮರಸ್ಯ’ ವಿಷಯದ ಕುರಿತು ಉಪನ್ಯಾಸ ನೀಡಿದರು. ವಿಚಾರಗೋಷ್ಠಿಯಲ್ಲಿ ಮಡಿಕೇರಿ ಸರಸ್ವತಿ ಡಿಎಡ್ ಕಾಲೇಜಿನ ಪ್ರಾಂಶುಪಾಲ ಕುಮಾರ್, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ.ಚಂದ್ರು, ಕಾಫಿ ಬೆಳೆಗಾರ ಎಚ್.ಆರ್.ಮುತ್ತಣ್ಣ, ಸಿವಿಲ್ ಇಂಜಿನಿಯರ್ ಎ.ಆರ್. ಮಮತ, ಎ.ಪಿ.ವೀರರಾಜು, ಉಪನ್ಯಾಸಕಿ ವಿನಿತ, ವಕೀಲೆ ಎಚ್.ಆರ್.ಪವಿತ್ರ ಇದ್ದರು.ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿ ಸಮ್ಮೇಳನವನ್ನು ಯಶಸ್ವಿಯಾಗಿ ನಿರ್ವಹಿಸಿದ, ಸಮ್ಮೇಳನಾಧ್ಯಕ್ಷೆಯಾದ ಹಿರಿಯ ಪತ್ರಕರ್ತೆ, ಕವಯತ್ರಿ, ಲೇಖಕಿ ಶನಿವಾರಸಂತೆಯ ಶ.ಗ. ನಯನತಾರಾ ಅವರನ್ನು ಸಮ್ಮೇಳನ ಆಯೋಜಕರು ಹಾಗೂ ಕಸಾಪ ಪರವಾಗಿ ಸನ್ಮಾನಿಸ ಲಾಯಿತು.ಹೆಚ್.ಎಸ್. ಚಂದ್ರಮೌಳಿ ಸನ್ಮಾನಗಳು ಭಾರತೀಯ ಸಂಸ್ಕೃತಿ-ಸAಸ್ಕಾರದ ಅಂಗವಾಗಿವೆ. ಸಾಧಕರನ್ನು ಗುರುತಿಸುವ ಕೆಲಸ ಆಗಬೇಕು. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಣ್ಣೀರುಹಳ್ಳ ಮಸೀದಿಯ ಧರ್ಮಗುರು ಶಾಫಿ ಸಅದಿ ಮಾತನಾಡಿ, ಭಾರತದ ಸಂಸ್ಕೃತಿಯ ಧ್ಯೋತಕವಾಗಿ ಕರ್ನಾಟಕವಿದೆ. ಶಾಂತಿ, ಸಂಸ್ಕೃತಿ, ಸೌಹಾರ್ದತೆಗೆ ಎಲ್ಲರೂ ಕೈ ಜೋಡಿಸಬೇಕು ಎಂದರು. ವೇದಿಕೆಯಲ್ಲಿ ಕರ್ನಾಟಕ ಕಾವಲು ಪಡೆಯ ಅಧ್ಯಕ್ಷ ಮಂಜುನಾಥ್, ಕರವೇ ಅಧ್ಯಕ್ಷ ದೀಪಕ್, ಸೃಷ್ಟಿಯ ಚಿಗುರು ಕವಿ ಬಳಗದ ಅಧ್ಯಕ್ಷ ಕೆ.ಪಿ. ಸುದರ್ಶನ್, ಜಾನಪದ ಪರಿಷತ್ ಅಧ್ಯಕ್ಷ ಕೆ.ಎ. ಪ್ರಕಾಶ್, ಮೋಟಾರ್ ಯೂನಿಯನ್ ಅಧ್ಯಕ್ಷ ಕೆ.ಜಿ. ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಹಲವು ನಿರ್ಣಯಗಳನ್ನು ಸಭೆಯಲ್ಲಿ ಅಂಗೀಕರಿಸಲಾಯಿತು.

ಸೋಮವಾರಪೇಟೆ ತಾಲೂಕಿನ ಪ್ರವಾಸಿತಾಣಗಳಿಗೆ ಪ್ರವಾಸಿಗರನ್ನು ಆಕರ್ಷಿಸುವ ದೃಷ್ಟಿಯಿಂದ ಮಲ್ಲಳ್ಳಿ ಜಲಪಾತ, ಹೊನ್ನಮ್ಮನ ಕೆರೆ ಬೆಟ್ಟ, ಮಕ್ಕಳಗುಡಿ ಬೆಟ್ಟ, ಭತ್ತದರಾಶಿ, ಕೋಟೆಬೆಟ್ಟ, ಮಳೆಮಲ್ಲೇಶ ಬೆಟ್ಟಗಳಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಕೇಬಲ್ ಕಾರ್ ಯೋಜನೆ ರೂಪಿಸಲು ಇಲಾಖೆ ಕ್ರಮಕೈಗೊಳ್ಳಬೇಕು. ಶನಿವಾರಸಂತೆ ಹೋಬಳಿಗೆ ಸೇರಿದ ಭಾಗದಲ್ಲಿರುವ ಹೊನ್ನಮ್ಮನ ಕೆರೆ, ಮಾಲಂಬಿ ಬೆಟ್ಟ, ದೊಡ್ಡಪಾರೆ, ಮುಳ್ಳೂರು ಜೈನ ಬಸದಿ ಮುಂತಾದ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸೋದ್ಯಮ ಇಲಾಖೆಯು ಹೆಚ್ಚಿನ ಸವಲತ್ತುಗಳನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಲಾಯಿತು.

ಸೈನಿಕ ಕುಟುಂಬಗಳು ಹೆಚ್ಚಿರುವುದರಿಂದ ಫೀಲ್ಡ್ಮಾರ್ಷಲ್ ಕಾರ್ಯಪ್ಪ ಅವರು ಜನಿಸಿದ ಶನಿವಾರಸಂತೆಯಲ್ಲಿ ಆರ್ಮಿ ಕ್ಯಾಂಟೀನ್ ಪ್ರಾರಂಭಿಸಬೇಕು.

ಸೋಮವಾರಪೇಟೆಯಲ್ಲಿರುವ ಗ್ರಂಥಾಲಯವನ್ನು ಮೇಲ್ದರ್ಜೆಗೇರಿಸಬೇಕು. ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ಶಾಲಾ ಸಮಯದಲ್ಲಿ ಸರ್ಕಾರಿ ಬಸ್‌ಗಳನ್ನು ಕಲ್ಪಿಸಬೇಕು.

ತಾಲೂಕಿನ ಲೇಖಕರ ಸಾಹಿತ್ಯ ಕೃತಿಗಳನ್ನು ಸರ್ಕಾರವು ಸರ್ಕಾರಿ ಗ್ರಂಥಾಲಯಗಳಿಗೆ ಖರೀದಿಸಿ ಪ್ರೋತ್ಸಾಹಿಸಬೇಕು. ಅನ್ಯಭಾಷಿಕರು ವಾಸಿಸುವ ಸ್ಥಳಗಳಲ್ಲಿ ಕನ್ನಡ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಬೇಕು. ಸರ್ಕಾರಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು. ತಾಲೂಕಿನ ಸಾಹಿತಿಗಳ ಕೃತಿಗಳನ್ನು ಪ್ರಾಥಮಿಕ ಹಾಗೂ ಪೌಢಶಾಲಾ ವಿಭಾಗದಲ್ಲಿ ಅಳವಡಿಸಬೇಕು.

ಸೋಮವಾರಪೇಟೆ ತಾಲೂಕಿನ ಹಲವು ಭಾಗಗಳು ಕುಶಾಲನಗರ ತಾಲೂಕಿಗೆ ಸೇರಿರುವ ಕಾರಣ ಸೋಮವಾರಪೇಟೆಗೆ ಅನ್ಯಾಯವಾಗಿದ್ದು, ಸಕಲೇಶಪುರ ತಾಲೂಕಿನ ಹೆತ್ತೂರು, ಯಸಳೂರು ಹೋಬಳಿಗಳನ್ನು ಸೋಮವಾರಪೇಟೆಗೆ ಸೇರಿಸಲು ಸರ್ಕಾರ ಕ್ರಮಕೈಗೊಳ್ಳಬೇಕು.

ಹಾರಂಗಿ ಹಿನ್ನೀರಿನಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಿಸಬೇಕು. ಅಲ್ಲಿನ ಗ್ರಾಮಗಳ ರಸ್ತೆಯನ್ನು ಡಾಮರೀಕರಣಗೊಳಿಸಬೇಕು. ಅತಿವೃಷ್ಟಿಯಿಂದ ತಾಲೂಕಿನ ಜನರು ಸಂಕಷ್ಟದಲ್ಲಿದ್ದು, ಸರ್ಕಾರ ವಿಶೇಷ್ ಪ್ಯಾಕೇಜ್ ಘೋಷಿಸಬೇಕು. ಮಡಿಕೇರಿಯಲ್ಲಿ ಸಾಹಿತ್ಯ ಭವನ ನಿರ್ಮಿಸಲು ಸರ್ಕಾರ ೧೦ ಕೋಟಿ ಅನುದಾನ ಕಲ್ಪಿಸಬೇಕು ಎಂಬ ನಿರ್ಣಯಗಳನ್ನು ಸಭೆಯಲ್ಲಿ ಅಂಗೀಕರಿಸಲಾಯಿತು.

ನಿರ್ಣಯಗಳನ್ನು ಕಸಾಪ ಕಾರ್ಯದರ್ಶಿ ಎ.ಪಿ. ವೀರರಾಜು ಮಂಡಿಸಿದರು. ವೇದಿಕೆಯಲ್ಲಿ ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್, ಕಾರ್ಯದರ್ಶಿ ಜ್ಯೋತಿ ಅರುಣ್, ಕೋಶಾಧಿಕಾರಿ ಕೆ.ಪಿ. ದಿನೇಶ್ ಇದ್ದರು.