ವೀರಾಜಪೇಟೆ:, ಫೆ. ೧೩: ಜೀವನದಲ್ಲಿ ಜಿಗುಪ್ಸೆಗೊಂಡು ಕೂಲಿ ಕಾರ್ಮಿಕನೋರ್ವ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ವೀರಾಜಪೇಟೆ ನಗರದಲ್ಲಿ ನಡೆದಿದೆ.
ಅಪ್ಪಯ್ಯ ಸ್ವಾಮಿ ರಸ್ತೆ (ಕಲ್ಲುಕೋರೆ) ನಿವಾಸಿ ಕೂಲಿ ಕಾರ್ಮಿಕ ರವಿ (೫೦) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಮೃತ ವ್ಯಕ್ತಿ ಮೈಸೂರು ಜಿಲ್ಲೆಯ ಬೆಟ್ಟದಪುರ ನಿವಾಸಿಯಾಗಿದ್ದು, ಕೂಲಿ ಅರಿಸಿಕೊಂಡು ವೀರಾಜಪೇಟೆ ನಗರದಲ್ಲಿ ಜೀವನ ಸಾಗಿಸುತಿದ್ದ ಎನ್ನಲಾಗಿದೆ. ಕುಡಿತದ ಚಟಕ್ಕೆ ದಾಸನಾಗಿದ್ದ ರವಿ ತಾ.೧೨ರಂದು ಮನೆಯಿಂದ ತೆರಳಿದ್ದು, ಇಂದು ವೀರಾಜಪೇಟೆ ನಗರದ ಶಾಂತ ಚಿತ್ರಮಂದಿರದ ಸನಿಹದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಸನಿಹದ ಅಂಗಡಿಗೆ ಹಾಲು ಖರೀದಿಸಲು ಬಂದ ಗ್ರಾಹಕರೊಬ್ಬರು ಬಾವಿಯಲ್ಲಿ ಮೃತದೇಹವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ವ್ಯಕ್ತಿಯು ವಿವಾಹಿತನಾಗಿದ್ದು, ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾನೆ. ವೀರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೀರಾಜಪೇಟೆ ನಗರದಲ್ಲಿ ಇಪ್ಪತ್ತಕ್ಕೂ ಅಧಿಕ ತೆರೆದ ಬಾವಿಗಳಿದೆ. ಇವುಗಳ ನಿರ್ವಹಣೆಗೆ ಸ್ಥಳೀಯ ಆಡಳಿತ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಸುಮಾರು ಐದಕ್ಕೂ ಹೆಚ್ಚು ಮಂದಿ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೆರೆದ ಬಾವಿಗಳು ಕುಡಿಯುವ ನೀರು ಒದಗಿಸುವ ಜಲಮೂಲವಾಗಿದ್ದು, ಶೀಘ್ರವಾಗಿ ನಗರದಲ್ಲಿರುವ ಎಲ್ಲಾ ಸಾರ್ವಜನಿಕ ತೆರೆದ ಬಾವಿಗಳನ್ನು ಸ್ವಚ್ಛಗೊಳಿಸಿ, ಗ್ರಿಲ್ ಅಳವಡಿಸುವಂತೆ ಅಪ್ಪಯ್ಯ ಸ್ವಾಮಿ ರಸ್ತೆಯ ಸ್ನೇಹಿತರ ಬಳಗದವರು ಮತ್ತು ನಾಗರಿಕರು ಒತ್ತಾಯಿಸಿದ್ದಾರೆ.