(ವಿಶೇಷ ವರದಿ - ಕೆ.ಎಸ್. ಮೂರ್ತಿ)
ಕಣಿವೆ, ಫೆ. ೧೨: ಕಳೆದ ಬಾರಿಗೆ ಹೋಲಿಸಿದಲ್ಲಿ ಈ ಬಾರಿ ಶುಂಠಿ ಫಸಲಿನ ಬಿತ್ತನೆ ಬೀಜದ ದರ ಗಗನಕ್ಕೇರಿದೆ.
ಈ ಬಾರಿ ಉತ್ತಮ ಗುಣಮಟ್ಟದ ಶುಂಠಿ ಬಿತ್ತನೆ ಬೀಜದ ದರ ೬೦ ಕೆಜಿ ತೂಕದ ಚೀಲವೊಂದಕ್ಕೆ ೪ ಸಾವಿರ ರೂ.ಗಳಿಂದ ೪೬೦೦ ರೂ.ಗಳವರೆಗೆ ಇದೆ. ಮಾಮೂಲಿ ಬಿತ್ತನೆ ಬೀಜಕ್ಕೆ ೩ ಸಾವಿರ ರೂ.ಗಳಿಂದ ೩೫೦೦ ರೂ.ಗಳು ಇದೆ. ಮಾರುಕಟ್ಟೆಗೆ ಸಾಗಿಸುವ ಶುಂಠಿಯ ದರ ೨೭೦೦ ರೂ.ಗಳಿಂದ ೨೮೦೦ ಗಳತನಕ ಇದೆ.
ಕಳೆದ ಬಾರಿ ಶುಂಠಿ ಬಿತ್ತನೆ ಬೀಜದ ದರ ೧೫೦೦ ರೂ.ಗಳಿಂದ ೧೮೦೦ ರೂ.ಗಳವರೆಗೆ ಇತ್ತು. ಈ ಬಾರಿ ಶುಂಠಿ ಬಿತ್ತನೆ ಬೀಜದ ದರ ಏರಿಕೆಯಾಗಿದ್ದರೂ ಕೂಡ ಕೃಷಿಕರಲ್ಲಿ ಶುಂಠಿ ಬೆಳೆಯುವ ಉತ್ಸಾಹವೇನು ಕುಗ್ಗಿಲ್ಲ. ಈ ಬಾರಿ ಮಾರುಕಟ್ಟೆಯಲ್ಲಿ ಶುಂಠಿ ಫಸಲಿಗೆ ಒಂದಷ್ಟು ದರ ಏರಿಕೆಯಾದ್ದರಿಂದ ಗ್ರಾಮೀಣ ಪ್ರದೇಶಗಳ ಕೃಷಿಕರಲ್ಲಿ ಒಂದು ರೀತಿಯ ಮಂದಹಾಸ ಮನೆ ಮಾಡಿದೆ.
ರೂ. ೪ ಸಾವಿರ ದಿಂದ ೪೫೦೦ ರೂ. ನೀಡಿ ಶುಂಠಿ ಬೀಜವನ್ನು ಖರೀದಿಸಿ ತರುತ್ತಿರುವ ಶುಂಠಿ ಕೃಷಿಕರು ತಮ್ಮ ಮನೆ ಬಾಗಿಲಿನಲ್ಲಿ ಅದನ್ನು ಸಂಗ್ರಹಿಸಿಟ್ಟು ಅದನ್ನು ಮುರಿದು ಬಿತ್ತನೆ ಬೀಜವಾಗಿ ಪರಿವರ್ತಿಸಿ ರಾಸಾಯನಿಕ ದ್ರಾವಣ ಸಿಂಪಡಿಸಿ ಮೊಳಕೆಯೊಡೆಯಲು ಅಣಿಗೊಳಿಸುತ್ತಿರುವ ಚಿತ್ರಣ ಸಾಮಾನ್ಯವಾಗಿ ಕಂಡು ಬರುತ್ತಿದೆ.
ಕಣಿವೆ ಗ್ರಾಮದ ಬಳಿಯ ಹುಲುಸೆ ಗ್ರಾಮದ ಕೃಷಿಕ ವಿಶ್ವನಾಥ್ ಎಂಬವರು ಕಳೆದ ಹತ್ತು ವರ್ಷಗಳಿಂದ ಶುಂಠಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಶುಂಠಿಯ ಬೆಲೆ ಹಿಗ್ಗಲಿ ಅಥವಾ ಕುಗ್ಗಲಿ ತಾವು ಮಾತ್ರ ಬೆಲೆಯನ್ನು ಸರಿ ಸಮಾನವಾಗಿ ಸ್ವೀಕರಿಸಿದ್ದಾಗಿ ಹೇಳುತ್ತಾರೆ.
ಶುಂಠಿ ದರ ಏರಿಕೆಯಾದಾಗ ಹಿಗ್ಗದೆ ದರ ಇಳಿಕೆಯಾದಾಗ ಕುಗ್ಗುವುದಿಲ್ಲ. ಭೂಮಿ ತಾಯಿಗೆ ಶ್ರದ್ಧೆಯಿಂದ ಮಾಡುವ ಕೃಷಿ ಕಾಯಕದಲ್ಲಿ ಯಾವಾಗಲೂ ಸಿಹಿಯೇ ಇರುತ್ತದೆ ಎನ್ನುತ್ತಾರೆ ವಿಶ್ವನಾಥ.
ಕಳೆದ ಮೂರು ವರ್ಷಗಳಲ್ಲಿ ಕೊರೊನಾದಿಂದಾಗಿ ಎರಡು ವರ್ಷ ಬೆಳೆಯೂ ಹೋಯಿತು. ಬೆಲೆಯೂ ಬಾರದಾಯಿತು. ಆದರೆ ಈ ಬಾರಿ ಉತ್ತಮ ದರ ಬಂದ ಹಿನ್ನೆಲೆಯಲ್ಲಿ ಕಳೆದ ಬಾರಿ ಸಂಭವಿಸಿದ್ದ ನಷ್ಟ ಸರಿದೂಗಿದೆ. ಈ ಬಾರಿ ಮತ್ತದೇ ಅದೃಷ್ಟವನ್ನು ಪಣಕ್ಕಿಟ್ಟು ಶುಂಠಿ ಕೃಷಿಯಲ್ಲಿ ತೊಡಗಿದ್ದಾಗಿ ಅವರು ಹೇಳುತ್ತಾರೆ.ಎಲ್ಲೆಲ್ಲೂ ಭೂಮಿ ಹದ
ಶುಂಠಿ ಬಿತ್ತನೆ ಮಾಡುವ ಹಿನ್ನೆಲೆಯಲ್ಲಿ ಭೂಮಿಯನ್ನು ಉಳುಮೆ ಮಾಡಿ ಅಚ್ಚುಕಟ್ಟು ಮಾಡಲಾಗಿದೆ.
ಮಳೆ ಬಂದೊಡನೆ ಭೂಮಿಯ ತಾಪಮಾನವನ್ನು ಅನುಸರಿಸಿ ಬಿತ್ತನೆ ಕೈಗೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ.
ಸಾವಯವ ಸಗಣಿ ಗೊಬ್ಬರಕ್ಕೆ ಬೇಡಿಕೆ
ಶುಂಠಿ ಕೃಷಿಗೆ ಹಿತವೆನ್ನಲಾಗುವ ಸಾವಯವ ಸಗಣಿ ಗೊಬ್ಬರಕ್ಕೆ ಇದೀಗ ಗ್ರಾಮೀಣ ಪ್ರದೇಶಗಳಲ್ಲಿ ಭಾರೀ ಬೇಡಿಕೆ ಇದೆ.
ಒಂದು ಟ್ರಾö್ಯಕ್ಟರ್ ಸಗಣಿ ಗೊಬ್ಬರಕ್ಕೆ ಮೂರರಿಂದ ಮೂರುವರೆ ಸಾವಿರ ರೂ.ಗಳ ತನಕ ಬಿಕರಿಯಾಗುತ್ತಿದೆ.
ಹಾಗಾಗಿ ಗ್ರಾಮೀಣ ಪ್ರದೇಶಗಳ ಬಹಳಷ್ಟು ರೈತರು ಸಗಣಿ ಗೊಬ್ಬರವನ್ನು ವರ್ಷ ಪೂರ್ಣ ಸಂಗ್ರಹಿಸಿಟ್ಟು ತಾವು ತಮ್ಮ ಕೃಷಿ ಭೂಮಿಗೆ ಬಳಸದೇ ಶುಂಠಿ ಕೃಷಿಕರಿಗೆ ಮಾರಾಟ ಮಾಡಿ ಅದರಿಂದ ಒಂದಷ್ಟು ಹೆಚ್ಚೇ ಲಾಭ ಗಳಿಸುತ್ತಿದ್ದಾರೆ.
ಅವರು ತಮ್ಮ ಉಪಯೋಗಕ್ಕೆ ಬೆಳೆಯುವ ಭತ್ತದ ಗದ್ದೆಗೆ ರಸಾಯನಿಕ ಗೊಬ್ಬರ ಬಳಸಿ ಲಾಭದ ಆಸೆಗೆ ಆರೋಗ್ಯಮಯ ಸಾವಯವ ಸಗಣಿ ಗೊಬ್ಬರವನ್ನು ಶುಂಠಿ ಬೆಳೆಗೆ ಮಾರಾಟ ಮಾಡುತ್ತಿದ್ದಾರೆ.
ಬತ್ತದ ಹುಲ್ಲಿಗೆ ಭಾರೀ ಬೇಡಿಕೆ
ರೈತರು ಬೆಳೆಯುವ ಭತ್ತದ ಫಸಲನ್ನು ಕಟಾವು ಮಾಡಿದ ನಂತರದ ಹುಲ್ಲಿಗೆ ಶುಂಠಿಯ ಬೆಳೆಯ ಉದ್ದೇಶಕ್ಕೆ ಭಾರೀ ಬೇಡಿಕೆ ಇದೆ.
ಶುಂಠಿ ಬಿತ್ತನೆ ಮಾಡಿದ ಸಂದರ್ಭ ಬಿಸಿಲಿನ ತಾಪಮಾನದಿಂದ ಶುಂಠಿ
ಬಿತ್ತನೆಯ ಬೀಜದ ಮೊಳಕೆಯನ್ನು ಸಂರಕ್ಷಿಸಿಟ್ಟು ಮೊಳಕೆ ಒಡಿದು ಬೇರು ಭೂಮಿಯ ಮಣ್ಣಲ್ಲಿ ಸೇರುವ ತನಕ ಭತ್ತದ ಹುಲ್ಲು ಉಪಯೋಗಕ್ಕೆ ಬರುವ ಕಾರಣ ಈ ಭತ್ತದ ಹುಲ್ಲಿಗೆ ಬೇಡಿಕೆ ಇದೆ.
ಅಂದಾಜು ಎರಡು ಕೆಜಿ ತೂಕದ ಒಂದು ಕಟ್ಟು ಭತ್ತದ ಹುಲ್ಲಿಗೆ ೨೫ ರಿಂದ ೩೦ ರೂ.ಗಳವರೆಗೆ ದರ ಇದೆ.
ಗ್ರಾಮೀಣ ಪ್ರದೇಶಗಳಲ್ಲಿ ಜಾನುವಾರುಗಳು ವರ್ಷವಿಡೀ ಸೊಂಪಾಗಿ ತಿನ್ನುವ ಈ ಭತ್ತದ ಹುಲ್ಲನ್ನು ಶುಂಠಿಗೆ ಮುಚ್ಚಲು ಮಾರಾಟ ಮಾಡಲಾಗುತ್ತಿದೆ.
ಇದರಿಂದಾಗಿ ಭತ್ತದ ಕೃಷಿಕರಿಗೆ ಭತ್ತದ ಕೃಷಿಯಿಂದ ಹುಲ್ಲಿನ ರೂಪದಲ್ಲಿ ಉತ್ತಮ ಆದಾಯ ಲಭಿಸುತ್ತಿದೆ.
ಈ ಬಾರಿ ಅಂತರ್ಜಲವೂ ಸಮೃದ್ಧಿ
ಕಳೆದ ಎರಡೂ ವರ್ಷಗಳಲ್ಲಿ ಎಲ್ಲೆಡೆ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಅಂತರ್ಜಲದ ಮಟ್ಟ ಏರಿಕೆ ಗೊಂಡಿರುವುದು ಶುಂಠಿ ಕೃಷಿಗೆ ಪೂರಕವಾಗಿದೆ. ಶುಂಠಿ ಬಿತ್ತನೆಯ ದಿನದಿಂದ ಕಟಾವಿನ ದಿನದ ತನಕ ಸರಾಸರಿ ಆರು ತಿಂಗಳಿAದ ಎಂಟು ತಿಂಗಳವರೆಗೆ ನಿರಂತರವಾಗಿ ಕೊಳವೆ ಬಾವಿಗಳು ನೀರನ್ನು ಮೇಲೆತ್ತುತ್ತವೆ.
ಕಳೆದ ಎರಡು ವರ್ಷಗಳ ಹಿಂದೆ ವರ್ಷದಿಂದ ವರ್ಷಕ್ಕೆ ಅಂತರ್ಜಲದ ಮಟ್ಟ ಗಣನೀಯವಾಗಿ ತಳಮಟ್ಟಕ್ಕೆ ಕುಸಿಯುತ್ತಿದ್ದ ಕಾರಣ ಶುಂಠಿ ಬಿತ್ತನೆ ಸಮಯದಲ್ಲಿ ಎಲ್ಲೆಲ್ಲೂ ರೈತನ ಹೊಲ - ಗದ್ದೆ, ಕಾಡು ಮೇಡುಗಳಲ್ಲಿ ಕೊಳವೆ ಬಾವಿ ತೋಡಲು ರಾತ್ರಿ ಹಗಲು ಸದ್ದು ಮಾಡುತ್ತಿದ್ದ ಯಂತ್ರಗಳ ಸದ್ದು ಈ ಬಾರಿ ಅಷ್ಟಾಗಿ ಕೇಳಿಸುತ್ತಿಲ್ಲ.