ಗೋಣಿಕೊಪ್ಪಲು, ಫೆ.೧೨ : ಕೇರಳ ಗಡಿಗೆ ಹೊಂದಿ ಕೊಂಡAತಿರುವ ಕುಟ್ಟ ಸರ್ಕಾರಿ ಆಸ್ಪತ್ರೆಯ ಆವರಣವು ಕುರುಚಲು ಗಿಡಗಳಿಂದ ಕಾಡು ಬೆಳೆದು ಕಾಡು ಪ್ರಾಣಿಗಳು ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಆಸ್ಪತ್ರೆಯು ಸುಮಾರು ೭ ಏಕರೆ ವಿಸ್ತಿçÃರ್ಣದಲ್ಲಿ ಸುಸಜ್ಜಿತ ಕಟ್ಟಡವನ್ನು ಹೊಂದಿದೆ. ಆದರೆ ವೈದ್ಯರ, ಸಿಬ್ಬಂದಿಗಳ ಕೊರತೆಯಿಂದಾಗಿ ರೋಗಿಗಳು ಆಸ್ಪತ್ರೆಯತ್ತ ಮುಖ ಮಾಡುತ್ತಿಲ್ಲ. ಬದಲಾಗಿ ಸಮೀಪದ ಕೇರಳ ರಾಜ್ಯದ ಮಾನಂದವಾಡಿಯ ಸರ್ಕಾರಿ ಆಸ್ಪತ್ರೆಗೆ ತೆರಳುತ್ತಿದ್ದಾರೆ.
ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನವನ್ನು ಈ ಆಸ್ಪತ್ರೆಗೆ ಬಳಕೆ ಮಾಡಿದ್ದರೂ ಸಿಬ್ಬಂದಿಗಳ ನೇಮಕಾತಿ ಇಲ್ಲದಿರುವುದರಿಂದ ಇಲ್ಲಿಯ ಆಸ್ಪತ್ರೆ ಪ್ರಗತಿ ಕಾಣಲು ಸಾಧ್ಯವಾಗುತ್ತಿಲ್ಲ. ಕುಟ್ಟ ವ್ಯಾಪ್ತಿಯಲ್ಲಿ ಬಹುತೇಕ ಕಾರ್ಮಿಕರು ಹಾಗೂ ಆದಿವಾಸಿಗಳು ಹೆಚ್ಚಾಗಿ ವಾಸವಾಗಿದ್ದಾರೆ. ೪ ಸಾವಿರಕ್ಕೂ ಅಧಿಕ ಮತದಾರರನ್ನು ಹೊಂದಿರುವ ಕುಟ್ಟ ಗ್ರಾಮ ಪಂಚಾಯಿತಿಯಲ್ಲಿ ಈ ಆಸ್ಪತ್ರೆ ಅಸ್ತಿತ್ವದಲ್ಲಿದೆ.
ಆಸ್ಪತ್ರೆಗೆ ತೆರಳುತ್ತಿದ್ದಂತೆಯೇ ಮುಖ್ಯ ದ್ವಾರದ ಬಳಿ ಕುರುಚಲು ಗಿಡಗಳು ನಾಗರಿಕರನ್ನು ಸ್ವಾಗತಿಸುತ್ತವೆ. ಆಸ್ಪತ್ರೆಯಲ್ಲಿ ಹಣದ ವ್ಯವಸ್ಥೆಯಿದ್ದರೂ ಕಳೆದ ಮೂರು ವರ್ಷಗಳಿಂದ ಬೆಳೆದು ನಿಂತ ಕಾಡುಗಳನ್ನು ಕಡಿಯಲು ಸಾಧ್ಯವಾಗುತ್ತಿಲ್ಲ.
ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಹೊರರೋಗಿಗಳ ಸಂಖ್ಯೆ ಇದೀಗ ಬೆರಳೆಣಿಕೆಯ ಮಟ್ಟಿಗೆ ಇಳಿದಿದೆ. ಕೋವಿಡ್ ಸಂದರ್ಭದಲ್ಲಿ ಎರಡು ಕೋಟಿಗೂ ಹೆಚ್ಚಿನ ಅನುದಾನವನ್ನು ಈ ಆಸ್ಪತ್ರೆಯ ಅಭಿವೃದ್ದಿಗೆ ಬಳಕೆ ಮಾಡಿ ಆಕ್ಷಿಜನ್ ಕೊಠಡಿಗಳು ಸೇರಿದಂತೆ ಪೈಪ್ಲೈನ್ಗಳನ್ನು ಅಳವಡಿಸಿದ್ದಾರೆ. ಆದರೆ ಇದು ಯಾವುದೇ ರೀತಿಯ ಪ್ರಯೋಜನಕ್ಕೆ ಬರುತ್ತಿಲ್ಲ.
ಆರು ವೈದ್ಯರ ಹಾಗೂ ೧೦ ಸಿಬ್ಬಂದಿಗಳ ನೇಮಕಾತಿಗೆ ಅವಕಾಶವಿದ್ದರೂ ಇಲ್ಲಿ ಕೇವಲ ಎರಡು ವೈದ್ಯರು ನಾಲ್ಕು ಸಿಬ್ಬಂದಿಗಳು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವೈದ್ಯರ ಹಾಗೂ ಸಿಬ್ಬಂದಿಗಳ ವಸತಿ ಗೃಹವು ದುಸ್ಥಿತಿಯಲ್ಲಿದ್ದು ಯಾವುದೇ ವೈದ್ಯರು ಇಲ್ಲಿಗೆ
(ಮೊದಲ ಪುಟದಿಂದ) ನೇಮಕಾತಿಗೊಂಡರೂ ಮರುದಿನ ವರ್ಗಾವಣೆ ಪಡೆದು ತೆರಳುತ್ತಿದ್ದಾರೆ. ಸರ್ಕಾರ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಸೂಕ್ತವಾದ ಸುಸಜ್ಜಿತ ವಸತಿ ಗೃಹಗಳನ್ನು ನಿರ್ಮಿಸದಿರುವುದರಿಂದ ಇಂತಹ ಪರಿಸ್ಥಿತಿ ಎದುರಾಗಿದೆ.
-ವಿಶೇಷ ವರದಿ : ಹೆಚ್.ಕೆ. ಜಗದೀಶ್