ಮಡಿಕೇರಿ, ಫೆ. ೧೨: ಅಬ್ದುಲ್ ಕಲಾಂ ಆರ್ಟ್ಸ್ ಹಾಗೂ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ತಾ ೧೮ ಹಾಗೂ ೧೯ ರಂದು ಅಯ್ಯಂಗೇರಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಅಲ್ಲಿನ ಕೊಲೊಂಬೊ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕ್ರೀಡಾಕೂಟದ ಆಯೋಜಕರು ಮಾಹಿತಿ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾ.ಪಂ. ಸದಸ್ಯ ಹಾಗೂ ಸಮಿತಿ ಪ್ರಮುಖ ಅಬ್ದುಲ್ ರಾಶೀದ್, ಅಯ್ಯಂಗೇರಿ, ಸಣ್ಣ ಪುಲಿಕೋಟ್, ದೊಡ್ಡಪುಲಿಕೋಟ್, ಗೊಲ್ಲಕೇರಿ ವ್ಯಾಪ್ತಿಯ ಜನರನ್ನು ಒಗ್ಗೂಡಿಸುವ ಸಲುವಾಗಿ ಕ್ರಿಕೆಟ್ ಆಯೋಜಿಸಲಾಗಿದ್ದು, ೮ ತಂಡಗಳಲ್ಲಿ ಒಟ್ಟು ೧೩೦ ಆಟಗಾರರು ಭಾಗವಹಿಸಲಿದ್ದಾರೆ. ಬೆಳಿಗ್ಗೆ ೯ ಗಂಟೆಗೆ ಪಂದ್ಯಾಟಕ್ಕೆ ಗಣ್ಯರು ಚಾಲನೆ ನೀಡಲಿದ್ದು, ಇದೇ ಸಂದರ್ಭ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು. ವಿಜೇತ ತಂಡಕ್ಕೆ ರೂ. ೩೩,೩೩೩, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ೧೬,೬೬೬ ನಗದು ಹಾಗೂ ಆಕರ್ಷಕ ಟ್ರೋಫಿಯೊಂದಿಗೆ ವೈಯಕ್ತಿಕ ಬಹುಮಾನಗಳಿರಲಿವೆ. ಲೀಗ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದೆ ಎಂದರು.
ಗೋಷ್ಠಿಯಲ್ಲಿ ಅಬ್ದುಲ್ ಕಲಾಂ ಆರ್ಟ್ಸ್ ಹಾಗೂ ಸ್ಪೋರ್ಟ್ಸ್ ಅಸೋಸಿಯೇಷನ್ನ ಅಧ್ಯಕ್ಷ ಸಿ.ಎ. ಶಾಫಿ, ಕಾರ್ಯದರ್ಶಿ ಸುಹೇಬ್, ಉಪಾಧ್ಯಕ್ಷ ಸಾಬೀರ್, ಸದಸ್ಯ ಅಬ್ದುಲ್ ಬಾಸಿದ್ ಹಾಜರಿದ್ದರು.