ಮಡಿಕೇರಿ, ಫೆ. ೧೨: ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಅನುಗುಣ ವಾಗಿ ಕನಿಷ್ಟ ವೇತನ ನಿಗದಿ ಮಾಡಬೇಕು ಸೇರಿದಂತೆ ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಕರ್ನಾಟಕ ರಾಜ್ಯ ಸರ್ಕಾರ ಮಂಡಿಸುವ ಬಜೆಟ್ನಲ್ಲಿ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಕೊಡಗು ಜಿಲ್ಲಾ ಸಮಿತಿ ನಗರದಲ್ಲಿ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಸಂಘಟನೆಯ ಪ್ರಮುಖರು ಹಾಗೂ ಕಾರ್ಯಕರ್ತರು, ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಮಾತನಾಡಿ, ಸಂಪತ್ತನ್ನು ಸೃಷ್ಟಿಸುವ ಭೌತಿಕ-ದೈಹಿಕ ಶ್ರಮಿಕರು ಬಂಡವಾಳಗಾರರ ಪರವಾಗಿ ರೂಪಿತವಾದ ನೀತಿಗಳಿಂದ ಹಲವು ರೀತಿಯಲ್ಲಿ ಸಂಕಷ್ಟಕ್ಕೊಳಗಾಗಿದ್ದಾರೆ.
ಕೆಲಸದ ಭದ್ರತೆಗಿಂತ ಉದ್ದಿಮೆಗಳ ಭದ್ರತೆ ಆದ್ಯತೆಯಾಗಿದೆ. ಉದ್ಯೋಗಗಳಿಗೆ ದೀರ್ಘಾವಧಿಯ ಭದ್ರತೆ ಇಲ್ಲದಂತಾಗಿದೆ. ಮುಷ್ಕರದ ಹಕ್ಕು ಮತ್ತು ಸಾಮೂಹಿಕ ಚೌಕಾಸಿಯ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿದರು.
ಸಂಘಟನೆಯ ಜಿಲ್ಲಾ ಖಜಾಂಚಿ ಎನ್.ಡಿ. ಕುಟ್ಟಪ್ಪ, ಉಪಾಧ್ಯಕ್ಷ ಹೆಚ್.ಬಿ. ರಮೇಶ್, ಉಪ ಕಾರ್ಯದರ್ಶಿಗಳಾದ ಕೆ.ಎಸ್. ಪ್ರತೀಶ್, ಕೆ.ಎಸ್. ಸಾಜಿ ರಮೇಶ್, ರಾಚಪ್ಪಾಜಿ, ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.