ಮಡಿಕೇರಿ, ಫೆ. ೧೦: ಹಿರಿಯ ರಾಜಕಾರಣಿ ಕಾಂಗ್ರೆಸ್ ಪ್ರಮುಖರಾಗಿದ್ದ ಮಾಜಿ ಸಚಿವ ಟಿ.ಜಾನ್ ಅವರು ವಿಧಿವಶರಾಗಿದ್ದಾರೆ. ಕಳೆದ ಹಲವು ಸಮಯದಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಇವರು, ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ೯೧ ವರ್ಷ ಪ್ರಾಯದವರಾಗಿದ್ದ ಜಾನ್ ಅವರು ತಾ. ೧೦ರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ.

ಮೂಲತಃ ಕೇರಳ ರಾಜ್ಯದವರಾದ ಇವರು, ಕೊಡಗಿನಲ್ಲಿ ನೆಲೆಸಿ ಹಂತಹAತವಾಗಿ ಮೇಲೆ ಬಂದ ಪ್ರಮುಖರಾಗಿದ್ದರು. ೧೯೭೮ರ ಸಮಯದಲ್ಲಿ ರಾಜಕೀಯ ಪ್ರವೇಶಿಸಿದ ಅವರು, ಮಡಿಕೇರಿ ಪುರಸಭಾ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ೧೯೯೯-೨೦೦೩ರಲ್ಲಿ ರಾಜ್ಯ ವಿಧಾನಪರಿಷತ್‌ಗೆ ಕೊಡಗಿನಿಂದ ನಡೆದ ಚುನಾವಣೆಯಲ್ಲಿ ಸದಸ್ಯರಾಗಿ ಆಯ್ಕೆಗೊಂಡು ಇದೇ ಅವಧಿಯಲ್ಲಿ ಎಸ್.ಎಂ. ಕೃಷ್ಣ ಸಚಿವ ಸಂಪುಟದಲ್ಲಿ ಮೂಲಭೂತ ಸೌಲಭ್ಯ ಹಾಗೂ ನಾಗರಿಕ ವಿಮಾನಯಾನ ಸಚಿವರು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿದ್ದರು. ನಂತರದ ವಿಧಾನಪರಿಷತ್ ಚುನಾವಣೆಯಲ್ಲಿ ಪರಾಭವಗೊಂಡರೂ, ೨೦೦೯ರಲ್ಲಿ ನಡೆದ ಮತ್ತೊಂದು ಚುನಾವಣೆಯಲ್ಲಿ ಎರಡನೆಯ ಬಾರಿಗೆ ಎಂ.ಎಲ್.ಸಿ.ಯಾಗಿ ಆಯ್ಕೆಗೊಂಡಿದ್ದರು. ಖ್ಯಾತ ಉದ್ಯಮಿ ಜಾನ್ ಡಿಸ್ಟಿಲರೀಸ್, ಶಿಕ್ಷಣ ಸಂಸ್ಥೆಗಳು, ತೋಟ, ರೆಸಾರ್ಟ್ ಸೇರಿದಂತೆ ಹಲವು ಚಟುವಟಿಕೆಗಳನ್ನು ನಡೆಸುತ್ತಿದ್ದ ಜಾನ್ ಅವರು, ರಾಜ್ಯದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದರು. ಕೆ.ಪಿ.ಸಿ.ಸಿ. ಸದಸ್ಯರಾಗಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಇವರ ಪತ್ನಿ ಚಾಚಮ್ಮ ಜಾನ್ ಅವರು, ಇತ್ತೀಚೆಗೆ ನಿಧನರಾಗಿದ್ದರು. ಮೃತರು ಪುತ್ರರುಗಳಾದ ಡಾ|| ಥಾಮಸ್ ಪಿ. ಜಾನ್, ಪೌಲ್ ಪಿ. ಜಾನ್, ಬಿಜು ಪಿ. ಜಾನ್ ಹಾಗೂ ಪುತ್ರಿಯರಾದ ಶೀಲಾ ಹಾಗೂ ಶಿಜಿ ಅವರುಗಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ.೧೧ರಂದು (ಇಂದು) ಬೆಂಗಳೂರಿನಲ್ಲಿ ನಡೆಯಲಿದೆ.

ಸಂತಾಪ

ಶಾಸಕ ಕೆ.ಜಿ. ಬೋಪಯ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಜಿಲ್ಲೆಯ ಓರ್ವ ಸಜ್ಜನ ರಾಜಕಾರಣಿ ಇವರಾಗಿದ್ದರು ಎಂದು ಬೋಪಯ್ಯ ಹೇಳಿದ್ದಾರೆ.

ಜಾನ್ ಅವರ ನಿಧನಕ್ಕೆ ಜಿಲ್ಲಾ ಕಾಂಗ್ರೆಸ್ ಸಂತಾಪ ವ್ಯಕ್ತಪಡಿಸಿದೆ.

(ಮೊದಲ ಪುಟದಿಂದ) ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಎ.ಐ.ಸಿ.ಸಿ. ಮಾಜಿ ಸದಸ್ಯ ಮಿಟ್ಟು ಚಂಗಪ್ಪ, ಎಂ.ಎ. ವಸಂತ್, ಎಸ್.ಬಿ. ಶಂಕರ್, ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್, ಕ್ರೆöÊಸ್ತಸೇವಾ ಸಂಘದ ಅಧ್ಯಕ್ಷ ಕೆ.ಟಿ. ಬೇಬಿ ಮ್ಯಾಥ್ಯು ಸೇರಿದಂತೆ ಚೇಂಬರ್ ಆಫ್ ಕಾಮರ್ಸ್ ಸಂಕೀರ್ಣ ಟ್ರಸ್ಟ್ನ ಅಧ್ಯಕ್ಷ ಕೆ.ಬಿ. ಗಿರೀಶ್ ಗಣಪತಿ, ಕೊಡಗು ಜಿಲ್ಲಾಡಳಿತದ ಕಾನೂನು ಸಹೆಗಾರ ಎ. ಲೋಕೇಶ್ ಕುಮಾರ್, ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಜಿ. ಪೀಟರ್ ಸಂತಾಪ ವ್ಯಕ್ತಪಡಿಸಿದ್ದಾರೆ.