ಮುಳ್ಳೂರು, ಫೆ. ೧೦ : ಗ್ರಾಮೀಣ ಸೊಗಡಿನ ಜಾತ್ರೋತ್ಸವಗಳು ಸಂಸ್ಕೃತಿಯ ಮಿಲನವಾಗಿದ್ದ ಪ್ರಸ್ತುತ ದಿನಗಳಲ್ಲಿ ಜಾತ್ರೋತ್ಸವಗಳು ಮೋಜು ಮಸ್ತಿ ಮಾಡುವ ಸ್ಥಳವಾಗುತ್ತಿರುವುದು ಕಳವಳಕಾರಿಯ ವಿಷಯವಾಗಿದೆ ಎಂದು ಹಾಸನ ಆದಿ ಚುಂಚನಗಿರಿ ಶಾಖಾ ಮಠದೀಶ ಶ್ರೀ ಶÀಂಭುನಾಥಸ್ವಾಮೀಜಿ ವಿಷಾದಿಸಿದರು. ಅವರು ಸಮಿಪದ ಗುಡುಗಳಲೆ ಜಾತ್ರಾ ಮೈದಾನದಲ್ಲಿರುವ ಶ್ರೀ ಜಯದೇವ ಜಾತ್ರಾ ಕಲಾ ವೇದಿಕೆಯಲ್ಲಿ ೭೯ನೇ ಗುಡುಗಳಲೆ ಶ್ರೀ ಜಯದೇವ ಜಾನುವಾರುಗಳ ಜಾತ್ರೆಯ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಜಾತ್ರೋತ್ಸವಗಳಂತಹ ಸಂಸ್ಕೃತಿಯನ್ನು ಕಾಪಾಡಿಕೊಂಡು ಬರುತ್ತಿದ್ದು ಗ್ರಾಮೀಣ ಭಾಗದ ರೈತಾಪಿ ಜನರು ವರ್ಷಪೂರ್ತಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ ವರ್ಷಕೊಮ್ಮೆ ರೈತರು ಜಾತ್ರೆಗಳನ್ನು ಹಬ್ಬದ ರೀತಿಯಲ್ಲಿ ಆಚರಿಸುತ್ತಾರೆ. ಇಂಥಹ ಜಾತ್ರೆಗಳಲ್ಲಿ ಜನರು, ರೈತರು ಸೇರುವ ಸಾಂಸ್ಕೃತಿಕ ವ್ಯವಸ್ಥೆಯಾಗಿತ್ತು ಆದರೆ ಇಂದು ಜಾತ್ರೋತ್ಸವಗಳಲ್ಲಿ ಮೋಜು-ಮಸ್ತಿ ಕಂಡುಬರುತ್ತಿರುವುದು ವಿಷಾದನೀಯ ಎಂದರು. ನಶಿಸುತ್ತಿರುವ ಜಾತ್ರೋತ್ಸವಗಳನ್ನು ಉಳಿಸಲು ಇಂದಿನ ಪೀಳಿಗೆ ಪ್ರಯತ್ನಿಸಿದರೆ ಮಾತ್ರ ಜಾತ್ರೆಯಂತಹ ಸಂಸ್ಕೃತಿ ಉಳಿಯಲು ಸಾಧ್ಯವಾಗುತ್ತದೆ ಎಂದರು.

ಕೊಡ್ಲಿಪೇಟೆ ಕಲ್ಲುಮಠದ ಮಹಾಂತಸ್ವಾಮೀಜಿ ಮಾತನಾಡಿ, ವೈಜ್ಞಾನಿಕವಾಗಿ ಅಭಿವೃದ್ಧಿ ಸಾಧಿಸುತ್ತಿದ್ದರೂ ಆಂತರಿಕವಾಗಿ ಕುಬ್ಜರಾಗುತ್ತಿದ್ದೇವೆ, ಸೊನ್ನೆಯಿಂದ ಮನುಷ್ಯನ ಬದುಕು ಪ್ರಾರಂಭವಾಗಿ ಸೊನ್ನೆಯಲ್ಲೆ ಅಂತ್ಯಗೊಳ್ಳುತ್ತಿರುವ ನಿಟ್ಟಿನಲ್ಲಿ ಮಧ್ಯದಲ್ಲಿರುವ ಮನುಷ್ಯನ ಬದುಕಿನಲ್ಲಿ ಒಳ್ಳೆಯದನ್ನು ಮಾಡುವ ಮೂಲಕ ಸತ್ತ ಮೇಲೆಯೂ ಹೆಸರು ಉಳಿಸಿಕೊಳ್ಳುವಂತಹ ಕಾರ್ಯವನ್ನು ಮಾಡುವಂತೆ ಸಲಹೆ ನೀಡಿದರು.

ಮಾಜಿ ತಾ.ಪಂ. ಸದಸ್ಯ ಬಿ.ಎಸ್. ಅನಂತ್‌ಕುಮಾರ್ ಮಾತನಾಡಿ, ಜಾತ್ರೆಗಳಲ್ಲಿ ಎಲ್ಲಾ ಜಾತಿ, ಧರ್ಮದವರು, ಬಡವ, ಶ್ರೀಮಂತ, ಬೇದಭಾವ ಇಲ್ಲದೆ ಎಲ್ಲರೂ ಸೇರುತ್ತಾರೆ ಇಂತಹ ಐಕ್ಯತೆಯನ್ನು ಸಾರುವ ಜಾತ್ರೆಯನ್ನು ಉಳಿಸಿಕೊಳ್ಳಲು ಜಾತ್ರಾ ಸಮಿತಿಯವರು ಪ್ರಯತ್ನಿಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ, ಶನಿವಾರಸಂತೆ ಸಿಐ ನಾಗೇಶ್, ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷೆ ಪೂರ್ಣಿಮಾ ಕಿರಣ್, ಪ್ರಮುಖರಾದ ಹಾಲಪ್ಪ, ಎಸ್.ಎಂ. ಉಮಾಂಶಕರ್, ಹಂಡ್ಲಿ ಪಿಡಿಓ ಸ್ಮಿತಾ ಮಾತನಾಡಿದರು.

ವೇದಿಕೆಯಲ್ಲಿ ಶನಿವಾರಸಂತೆ ಗ್ರಾ.ಪಂ. ಅಧ್ಯಕ್ಷ ಫರ್ಜಾನ್ ಶಾಹಿದ್ ಖಾನ್, ಹಂಡ್ಲಿ ಗ್ರಾ.ಪಂ. ಅಧ್ಯಕ್ಷೆ ಮಹಾದೇವಮ್ಮ, ಜಾತ್ರಾ ಸಮಿತಿ ಅಧ್ಯಕ್ಷ ಎಚ್.ಎಂ. ವಿನಿತ್, ಕಾರ್ಯದರ್ಶಿ ಅಶೋಕ್, ಪ್ರಮುಖರಾದ ಸಂದೀಪ್, ಗ್ರಾ.ಪಂ. ಸದಸ್ಯರು, ಜಾತ್ರಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು. ೧೫ ದಿನಗಳವರೆಗೆ ನಡೆದ ಜಾತ್ರೆಗೆ ಗುರುವಾರ ತೆರೆಬಿತ್ತು.

-ಭಾಸ್ಕರ್ ಮುಳ್ಳೂರು