ಕೊಡ್ಲಿಪೇಟೆ, ಫೆ. ೧೦: ಪರಶುರಾಮರು ನಡೆದಾಡಿದ ಸ್ಥಳವೆಂದು ಖ್ಯಾತಿಯಾಗಿರುವ ಕೊಡ್ಲಿಪೇಟೆ ಭಾಗದಲ್ಲಿರುವ ಶ್ರೀ ಕ್ಷೇತ್ರ ಕಲ್ಲಳ್ಳಿ ಮಠದಲ್ಲಿ ಸಂತ ಗಣದ ಸಾನ್ನಿಧ್ಯದಲ್ಲಿ ಹಲವು ಧಾರ್ಮಿಕ ಕೈಂಕರ್ಯಗಳೊAದಿಗೆ ಶ್ರೀ ರುದ್ರಮುನಿ ಸ್ವಾಮೀಜಿಗಳ ಗುರು ಪಟ್ಟಾಧಿಕಾರ ಮಹೋತ್ಸವ ಸಂಭ್ರಮದಿAದ ನೆರವೇರಿತು.

ಕೊಡ್ಲಿಪೇಟೆ, ದೊಡ್ಡಕೊಡ್ಲಿ, ಕಿರಿಕೊಡ್ಲಿ, ಕೆಲಕೊಡ್ಲಿ ಗ್ರಾಮಗಳಿಗೆ ತನ್ನದೇ ಆದ ಐತಿಹ್ಯವಿದ್ದು, ಪರಶುರಾಮರು ತಮ್ಮ ಕೊಡಲಿಯನ್ನು ಬಂಡೆಗೆ ಒಡೆದ ಸಂದರ್ಭ ಅದರ ಚೂರುಗಳು ಅಲ್ಲಲ್ಲಿ ಬಿದ್ದು, ಈ ಮೇಲಿನ ಗ್ರಾಮಗಳಾದವು ಎಂಬ ಪುರಾಣೇತಿಹಾಸ ಈ ಸ್ಥಳಗಳಿಗಿವೆ. ಇದರೊಂದಿಗೆ ಕಲ್ಲರಳಿ ಹೂವಾದ ಜಾಗವೇ ಕಲ್ಲಳ್ಳಿ ಎಂಬ ನಂಬಿಕೆಯೂ ಇದ್ದು, ಈ ಕಲ್ಲಳ್ಳಿ ಮಠಕ್ಕೆ ೧೯೯೫ರಲ್ಲಿಯೇ ಶ್ರೀರುದ್ರಮುನಿ ಸ್ವಾಮೀಜಿಗಳನ್ನು ಉತ್ತರಾಧಿಕಾರಿ ಯಾಗಿ ನೇಮಿಸಲಾಗಿತ್ತು. ಆದರೆ ಈವರೆಗೆ ಪಟ್ಟಾಧಿಕಾರ ಮಾಡಿರಲಿಲ್ಲ.

ಇದನ್ನು ಮನಗಂಡ ಕೊಡ್ಲಿಪೇಟೆ ವೀರಶೈವ ಮಂಡಳಿ, ಕೊಡ್ಲಿಪೇಟೆ ವೀರಶೈವ ಸಮಾಜ, ಮಠದ ಭಕ್ತವೃಂದದ ನೇತೃತ್ವದಲ್ಲಿ ಕಲ್ಲಳ್ಳಿ ಮಠದ ಪೀಠಾಧಿಪತಿಗಳನ್ನಾಗಿ ಶ್ರೀರುದ್ರಮುನಿ ಸ್ವಾಮೀಜಿಗಳಿಗೆ ಪಟ್ಟಾಧಿಕಾರ ಮಹೋತ್ಸವ ನಡೆಸಲಾಯಿತು. ನಿನ್ನೆ ಸಂಜೆ ಗಂಗಾಪೂಜೆಯ ನಂತರ ಯಾಗಶಾಲಾ ಪ್ರವೇಶ, ಗಣಪತಿ ಪೂಜೆ, ಪುಣ್ಯಾಹ, ನಾಂದಿ ಪೂಜೆ, ಅಂಕುರಾರ್ಪಣ, ಮಂಟಪ ಪೂಜೆ, ವಾಸ್ತು ಅಘೋರ ಕಳಸ ಪೂಜೆ, ಸಪ್ತಸಭಾ ಪೂಜೆ, ಅಷ್ಟದಿಕ್ಪಾಲಕರ ಪೂಜೆ, ನವಗ್ರಹ, ಉಮಾ ಮಹೇಶ್ವರ, ಮಹಾಮೃತ್ಯುಂಜಯ ಪೂಜೆಗಳು ಸೇರಿದಂತೆ ಹೋಮ ಹವನಾದಿಗಳು ನಡೆದವು.

ಇದರೊಂದಿಗೆ ಕಿಕ್ಕೇರಿ ಅಶೋಕಪ್ಪ ಹಾಗೂ ಗುರುಮಕ್ಕಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಠದಲ್ಲಿ ನಡೆದ ಪೂಜಾ ಕಾರ್ಯಗಳ ನೇತೃತ್ವವನ್ನು ಕೊಡ್ಲಿಪೇಟೆ ವ್ಯಾಪ್ತಿಯ ಪುರೋಹಿತ ವರ್ಗದವರು ವಹಿಸಿದ್ದರು.

ಇಂದು ನಸುಕಿನ ಜಾವ ೪ ರಿಂದ ೫ ಗಂಟೆಯವರೆಗೆ ಸಲ್ಲುವ ಬ್ರಾಹ್ಮೀ ಮುಹೂರ್ತದಲ್ಲಿ ಕಾಡುಸಿದ್ದೇಶ್ವರ ಮಠದ

(ಮೊದಲ ಪುಟದಿಂದ) ಮಠಾಧಿಪತಿಗಳಾದ ಡಾ. ಶ್ರೀ ಶಿವಾನುಭವ ಚರವರ್ಯ ಕರಿವೃಷಭ ದೇಶೀಕೇಂದ್ರ ಶಿವಯೋಗಿ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಶ್ರೀರುದ್ರಮುನಿ ಸ್ವಾಮೀಜಿಗಳಿಗೆ ಪಟ್ಟಾಧಿಕಾರದ ವಿಧಿವಿಧಾನಗಳು ಪೂರ್ಣಗೊಂಡವು. ನಂತರ, ಶ್ರೀರುದ್ರಮುನಿ ಸ್ವಾಮೀಜಿಗಳಿಗೆ ಮಸ್ತಕಾಭಿಷೇಕ, ಮಂಗಳಸ್ನಾನ, ಅನುಗ್ರಹ, ಗುರುದೀಕ್ಷೆ ಸೇರಿದಂತೆ ವಿವಿಧ ಪೂಜಾಕೈಂಕರ್ಯಗಳು ನೆರವೇರಿದವು.

ನಂತರ ಕೊಡ್ಲಿಪೇಟೆ ಕಡೆಪೇಟೆಯಿಂದ ಕೊಡ್ಲಿಪೇಟೆ, ಯಸಳೂರು, ಕೆಂಚಮ್ಮನಹೊಸಕೋಟೆ ಭಾಗದ ವೀರಶೈವ ಸಮಾಜದವರ ನಂದಿಧ್ವಜ, ವೀರಗಾಸೆ, ವಾದ್ಯವೈಭವಗಳೊಂದಿಗೆ ಅಲಂಕೃತ ಪಲ್ಲಕ್ಕಿಯಲ್ಲಿ ಶ್ರೀರುದ್ರಮುನಿ ಸ್ವಾಮೀಜಿಗಳ ಮೆರವಣಿಗೆಯು ಕಲ್ಲಳ್ಳಿಮಠದವರೆಗೆ ನಡೆಯಿತು. ಇವರೊಂದಿಗೆ ಇತರ ಸ್ವಾಮೀಜಿಗಳೂ ಸಹ ಪಲ್ಲಕ್ಕಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

ಧರ್ಮಸಭಾ ಕಾರ್ಯಕ್ರಮ: ನಂತರ ನಡೆದ ಧರ್ಮ ಸಭಾ ಕಾರ್ಯಕ್ರಮದಲ್ಲಿ ವಿವಿಧ ಮಠಗಳ ೧೬ ಮಂದಿ ಸ್ವಾಮೀಜಿಗಳು ಭಾಗಿಯಾಗಿದ್ದರು. ಸಾನ್ನಿಧ್ಯವನ್ನು ಕಾಡುಸಿದ್ದೇಶ್ವರ ಮಠದ ಮಠಾಧಿಪತಿಗಳಾದ ಡಾ. ಶ್ರೀ ಶಿವಾನುಭವ ಚರವರ್ಯ ಕರಿವೃಷಭ ದೇಶೀಕೇಂದ್ರ ಶಿವಯೋಗಿಗಳು ವಹಿಸಿದ್ದರು. ಯಸಳೂರು ತೆಂಕಲಗೋಡು ಮಠಾಧೀಶರಾದ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪರೋಪಕಾರವೇ ಗುರುಪರಂಪರೆಯ ಧ್ಯೇಯವಾಗಿದ್ದು, ಗುರುಪರಂಪರೆಯಿAದ ಭಾರತವು ವಿಶ್ವಗುರು ಸ್ಥಾನದಲ್ಲಿದೆ ಎಂದರು.

ತAತ್ರಜ್ಞಾನ ಎಷ್ಟೇ ಮುಂದುವರೆದರೂ ಸಂಸ್ಕಾರಗಳು ಗುರುಗಳಿಂದ ಮಾತ್ರ ಲಭಿಸುತ್ತದೆ. ಗುರುಪರಂಪರೆ ಉನ್ನತ ಸ್ಥಾನದಲ್ಲಿದ್ದರೆ ಸಮಾಜ ಸುಭದ್ರವಾಗಿರುತ್ತದೆ ಎಂದು ಅಭಿಪ್ರಾಯಿಸಿದರು.

ಕಲಬುರಗಿ ಜಿಲ್ಲೆಯ ಖಜೂರಿ ಆಳಂದ ಕೋರಣೇಶ್ವರ ವಿರಕ್ತ ಮಠದ ಶ್ರೀ ಮುರುಗೇಂದ್ರ ಕೋರಣೇಶ್ವರ ಶಿವಯೋಗಿಗಳು ಮಾತನಾಡಿ, ತನುಶುದ್ಧಿಗೆ ಕಾಯಕ, ಮನಶುದ್ಧಿಗೆ ಪ್ರಾರ್ಥನೆ, ಧನ ಶುದ್ಧಿಗೆ ದಾನಗಳು ಇರಬೇಕು. ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ನೇತಾರರಾಗಿ ಮಠಗಳು ಬೆಳೆಯಬೇಕು ಎಂದರು.

ವೀರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶರಾದ ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ೪ ದಶಕದ ನಂತರ ಕೊಡಗಿನಲ್ಲಿ ಪಟ್ಟಾಧಿಕಾರ ಮಹೋತ್ಸವ ನಡೆಯುತ್ತಿದೆ. ಕೊಡಗಿನಲ್ಲಿ ಈ ಹಿಂದೆ ೧೦೮ ಮಠಗಳಿದ್ದು, ಅವುಗಳ ಪೈಕಿ ೬೮ ಮಠಗಳು ವಿರಕ್ತ ಮಠಗಳಾಗಿದ್ದವು. ಇತ್ತೀಚಿನ ದಿನಗಳಲ್ಲಿ ಹಲವು ಮಠಗಳು ಕಣ್ಮರೆಯಾಗಿವೆ. ಕಾಯಕ ಪ್ರಜ್ಞೆಯ ಜಾಗ್ರತೆಗಾಗಿ ಮಠಗಳಿಗೆ ಆಸ್ತಿಗಳನ್ನು ನೀಡಲಾಗಿದೆ. ಇದನ್ನು ಸರಿದಾರಿಯಲ್ಲಿ ಉಳಿಸಿಕೊಳ್ಳಬೇಕು. ಹರನಿಗಿಂತ ಗುರುಶ್ರೇಷ್ಠ ಎಂಬ ಮಾತಿದ್ದು, ಅದರಂತೆ ಗುರುಪರಂಪರೆ ಮಾರ್ಗದರ್ಶನ ಮಾಡಬೇಕು ಎಂದು ಅಭಿಮತ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿದ್ದ ಹೈಕೋರ್ಟ್ ವಕೀಲ ಹೆಚ್.ಎಸ್. ಚಂದ್ರಮೌಳಿ ಅವರು ಮಾತನಾಡಿ, ಧಾರ್ಮಿಕ ಕಾರ್ಯಗಳಲ್ಲಿ ಒಗ್ಗಟ್ಟು ಮುಖ್ಯ. ಬಸವ ತತ್ವವನ್ನು ಸ್ವಾಮೀಜಿಗಳು ಮುಂದುವರೆಸಿಕೊAಡು ಬರುತ್ತಿರುವುದು ಶ್ಲಾಘನೀಯ. ಗುರು ಪರಂಪರೆಯ ಇತಿಹಾಸವನ್ನು ಉಳಿಸಿ ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಆಗಬೇಕು. ಸಾಮರಸ್ಯದ ಜೀವನಕ್ಕೆ ಮಠಗಳ ಕೊಡುಗೆ ಅಪಾರವಾಗಿದ್ದು, ಸ್ವಾಮೀಜಿಗಳನ್ನು ಸಮಾಜವು ದೈವ ಸ್ವರೂಪಿಯಾಗಿ ನೋಡುತ್ತದೆ ಎಂದರು.

ಧರ್ಮ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡ್ಲಿಪೇಟೆ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್. ವರಪ್ರಸಾದ್ ವಹಿಸಿದ್ದರು. ವೇದಿಕೆಯಲ್ಲಿ ಶನಿವಾರಸಂತೆ ಮುದ್ದಿನಕಟ್ಟೆ ಮಠದ ಸಿದ್ಧವೀರ ಶಿವಾಚಾರ್ಯ ಸ್ವಾಮೀಜಿ, ತಿಪಟೂರಿನ ಅಭಿನವ ಕಾಡಸಿದ್ಧೇಶ್ವರ ಸ್ವಾಮೀಜಿ, ರಾವಂದೂರಿನ ಮೋಕ್ಷಪತಿ ಸ್ವಾಮೀಜಿ, ಮುದ್ದಿನಕಟ್ಟೆ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಕಲ್ಲುಮಠದ ಮಹಾಂತ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಹೊಸಕೊಪ್ಪಲುವಿನ ಬಸವೇಶ್ವರ ಚೈತನ್ಯ ಸ್ವಾಮೀಜಿ, ತೊರೆನೂರು ಮಠದ ಮಲ್ಲೇಶ ಸ್ವಾಮೀಜಿ, ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ, ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಹೊಸಪೇಟೆ ಕಂಪ್ಲಿಯ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಕೆಸವತ್ತೂರು ಮಠದ ಬಸವರಾಜೇಂದ್ರ ಸ್ವಾಮೀಜಿ, ವೀರಶೈವ ಸಮಾಜದ ಪ್ರಮುಖರಾದ ಸಿ.ವಿ. ಶಂಭುಲಿAಗಪ್ಪ, ಕೆ.ಎನ್. ವಸಂತ್, ಕೆ.ಸಿ. ಪ್ರಸನ್ನ, ಬಿ.ಕೆ. ಯತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕೊಡ್ಲಿಪೇಟೆ ಗಂಗಾ ವೀರಶೈವ ಮಹಿಳಾ ಸಮಾಜದ ಸದಸ್ಯರು ಪ್ರಾರ್ಥಿಸಿ, ವೀರಶೈವ ಮಂಡಳಿ ಉಪಾಧ್ಯಕ್ಷ ಹೆಚ್.ಸಿ. ಯತೀಶ್‌ಕುಮಾರ್, ನಿರ್ದೇಶಕ ಯು.ಪಿ. ನಾಗೇಶ್, ಕಾರ್ಯದರ್ಶಿ ಸಿ.ಎಸ್. ಲಿಂಗರಾಜು ಅವರುಗಳು ಕಾರ್ಯಕ್ರಮ ನಿರ್ವಹಿಸಿದರು. ಕೊಡ್ಲಿಪೇಟೆ ಸೇರಿದಂತೆ ಯಸಳೂರು, ಕೆಂಚಮ್ಮನ ಹೊಸಕೋಟೆ, ಚಂಗಡಹಳ್ಳಿ, ಶನಿವಾರಸಂತೆ, ಗುಡುಗಳಲೆ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವ ಸಮಾಜದವರು, ಮಠದ ಭಕ್ತರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

- ವಿಜಯ್ ಹಾನಗಲ್