*ಗೋಣಿಕೊಪ್ಪ, ಫೆ. ೧೧: ಬಿರುನಾಣಿ-ವೀರಾಜಪೇಟೆ ಸಂಚಾರಕ್ಕೆ ಸಮೀಪ ಸಂಪರ್ಕ ಕಲ್ಪಿಸುವ ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗರಕೇರಿ-ಕೂಟಿಯಾಲ ಸಂಪರ್ಕ ರಸ್ತೆ ಕಾಮಗಾರಿಗೆ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿಯ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಶಾಸಕರು, ರೂ. ೨ ಕೋಟಿ ೬೦ ಲಕ್ಷ ಅನುದಾನದಲ್ಲಿ ರಸ್ತೆ ಡಾಂಬರೀ ಕರಣಕ್ಕೆ ಮೊದಲ ಹಂತವಾಗಿ ಚಾಲನೆ ದೊರೆತಿದೆ. ಈ ಭಾಗದ ಜನರ ಬೇಡಿಕೆಗೆ ಅನುಕೂಲ ಕಲ್ಪಿಸುತ್ತವ ಉದ್ದೇಶದೊಂದಿಗೆ ಕೂಟಿಯಾಲ ರಸ್ತೆ ಅಭಿವೃದ್ಧಿ ಕಾಣುತ್ತಿದೆ. ಇದರಂತೆ ಕ್ಷೇತ್ರ ವ್ಯಾಪ್ತಿಯ ಹಲವಾರು ರಸ್ತೆಗಳು ಅಭಿವೃದ್ಧಿ ಕಂಡುಕೊಳ್ಳುತ್ತಿದೆ ಎಂದು ಹೇಳಿದರು. ಗ್ರಾಮೀಣ ಭಾಗದ ಜನ ಜೀವನವನ್ನು ಸುಧಾರಣೆಗೆ ತರುವ ನಿಟ್ಟಿನಲ್ಲಿ ಅತಿ ಹೆಚ್ಚು ಅನುದಾನವನ್ನು ಕ್ಷೇತ್ರ ವ್ಯಾಪ್ತಿಯಲ್ಲಿ ಬಳಕೆ ಮಾಡಲಾಗಿದೆ. ಈ ಹಿನ್ನೆಲೆ ರಸ್ತೆ ಅಭಿವೃದ್ಧಿ, ಸಮುದಾಯ ಭವನ, ದೇವಸ್ಥಾನಗಳ ಜೀರ್ಣೋದ್ಧಾರ, ಕಿಂಡಿ ಅಣೆಕಟ್ಟುಗಳು, ಹಕ್ಕುಪತ್ರಗಳ ವಿತರಣೆ ಸೇರಿದಂತೆ ಮೂಲ ಅನುಕೂಲಗಳನ್ನು ಬೇಡಿಕೆ ಅನುಗುಣವಾಗಿ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಬಿರುನಾಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲೇಂಗಡ ರೀನಾ ಶಮಿ, ಉಪಾಧ್ಯಕ್ಷ ಅಮ್ಮತ್ತಿರ ರಾಜೇಶ್, ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ನೆಲ್ಲಿರ ಚಲನ್‌ಕುಮಾರ್, ಪ್ರಕೋಷ್ಟ ಅಧ್ಯಕ್ಷ ಕುಪುö್ಪಡೀರ ಪೊನ್ನು ಮುತ್ತಪ್ಪ, ಬೂತ್ ಅಧ್ಯಕ್ಷ ಕಾಯಪಂಡ ಮಧುಮೋಟಯ್ಯ, ಶಕ್ತಿ ಕೇಂದ್ರ ಪ್ರಮುಖ್ ಅಣ್ಣಾಳಮಾಡ ರಾಯ್ ಚಿಣ್ಣಪ್ಪ, ಪಂಚಾಯಿತಿ ಸದಸ್ಯರು, ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಮಹಾದೇವ್, ಗುತ್ತಿಗೆದಾರರುಗಳಾದ ದಿನೇಶ್, ನಾಮೇರ ನವೀನ್, ವಿವೇಕ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.