ಸೋಮವಾರಪೇಟೆ, ಫೆ. ೧೦: ಗದ್ದೆಯ ಬಳಿ ಮೇಯಲು ಬಿಟ್ಟಿದ್ದ ಉಳುಮೆ ಎತ್ತಿನ ಮೇಲೆ ಚಿರತೆ ಧಾಳಿ ನಡೆಸಿ ಕೊಂದು ಹಾಕಿರುವ ಘಟನೆ ಸಮೀಪದ ಗರ್ವಾಲೆ ಗ್ರಾಮದ ಕಿಕ್ಕರಳ್ಳಿಯಲ್ಲಿ ನಡೆದಿದೆ.

ಕಿಕ್ಕರಳ್ಳಿ ಗ್ರಾಮದ ಕೃಷಿಕ ಕೊಚ್ಚೇರ ಪಿ. ಬೋಪಯ್ಯ ಅವರಿಗೆ ಸೇರಿದ ೪ ವರ್ಷದ ಉಳುಮೆ ಎತ್ತನ್ನು ಮನೆ ಸಮೀಪವೇ ಇರುವ ಗದ್ದೆಯ ಬಳಿಯಲ್ಲಿ ಮೇಯಲು ಬಿಡಲಾಗಿತ್ತು. ಈ ಸಂದರ್ಭ ಎತ್ತಿನ ಮೇಲೆ ಧಾಳಿ ನಡೆಸಿರುವ ಚಿರತೆ, ಅದನ್ನು ಕೊಂದು ಅರ್ಧ ದೇಹವನ್ನು ತಿಂದು ಹಾಕಿದೆ.

ಇದರಿಂದಾಗಿ ಬೋಪಯ್ಯ ಅವರಿಗೆ ಸುಮಾರು ೪೦ ಸಾವಿರ ರೂಪಾಯಿ ನಷ್ಟವಾಗಿದೆ. ಘಟನೆಯ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆ ಸ್ಥಳಕ್ಕೆ ತೆರಳಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಗರ್ವಾಲೆ ಭಾಗದಲ್ಲಿ ಕಾಡುಹಂದಿ, ಕಾಡುಕೋಣ, ಹುಲಿ, ಚಿರತೆಯಂತಹ ವನ್ಯಪ್ರಾಣಿಗಳ ಹಾವಳಿ ಮಿತಿ ಮೀರಿದ್ದು, ಜಾನುವಾರುಗಳ ಮೇಲೆ ನಿರಂತರ ಧಾಳಿ ನಡೆಸುತ್ತಿವೆ. ಇದರೊಂದಿಗೆ ಕೃಷಿ ಫಸಲನ್ನೂ ನಷ್ಟಪಡಿಸುತ್ತಿವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ವನ್ಯಪ್ರಾಣಿಗಳಿAದ ಈ ಭಾಗದಲ್ಲಿ ಹಲವು ಕೃಷಿಕರು ತಮ್ಮ ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ಕೃಷಿ ಕೈಗೊಳ್ಳಲೂ ಹಿಂದೆ ಮುಂದೆ ನೋಡುವಂತೆ ಆಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ವನ್ಯಪ್ರಾಣಿಗಳನ್ನು ಅರಣ್ಯಕ್ಕೆ ಅಟ್ಟಲು ಕ್ರಮ ಕೈಗೊಳ್ಳಬೇಕು. ಜಾನುವಾರು, ಕೃಷಿ ಫಸಲು ಹಾನಿಗೆ ಗರಿಷ್ಠ ಪ್ರಮಾಣದ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.