ಗೋಣಿಕೊಪ್ಪಲು, ಫೆ. ೧೧: ಪಂಚಾಯಿತಿಯಲ್ಲಿ ಲಭ್ಯವಿರುವ ಅನು ದಾನವನ್ನು ಸದ್ಬಳಕೆ ಮಾಡಿಕೊಂಡು ಆದಿವಾಸಿಗಳಿಗೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಕಳ್ಳಿಚಂಡ ಪೂಣಚ್ಚ ಗ್ರಾಮಸಭೆಗೆ ಮಾಹಿತಿ ಒದಗಿಸಿದರು.
ಕೆ. ಬಾಡಗ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಗ್ರಾಮಸಭೆಯಲ್ಲಿ ಸರ್ಕಾರದ ವತಿಯಿಂದ ಸಿಗುವ ವಿವಿಧ ಸವಲತ್ತುಗಳ ಹಾಗೂ ಅನುದಾನಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸಿ, ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆದಿವಾಸಿಗಳ ಕುಟುಂಬಗಳು ವಾಸವಿದ್ದಾರೆ. ಇವರಿಗೆ ಕುಡಿಯುವ ನೀರು ಸೇರಿದಂತೆ ಇನ್ನಿತರ ಮೂಲ ಸೌಕರ್ಯ ಒದಗಿಸಲು ಸಂಬAಧಿಸಿದ ಗಿರಿಜನ ಕಲ್ಯಾಣ ಇಲಾಖೆಗೆ ಸಂದರ್ಭಕ್ಕನುಗುಣವಾಗಿ ಪತ್ರ ವ್ಯವಹಾರ ನಡೆಸಲಾಗಿದೆ.
ವಿದ್ಯಾರ್ಥಿಗಳಿಗೆ ಪಂಚಾಯಿತಿ ವತಿಯಿಂದ ಹಲವು ರೀತಿಯ ಪ್ರಯೋಜನ ಒದಗಿಸಲಾಗಿದೆ. ಗ್ರಾಮದ ಅಭಿವೃದ್ಧಿಗೆ ಪ್ರತಿ ನಾಗರಿಕರು ಹೆಚ್ಚಿನ ಸಹಕಾರ ಒದಗಿಸಬೇಕು. ರಾಷ್ಟಿçÃಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಭಾಗದ ಕೆಲಸಗಳನ್ನು ಮಾಡಿಕೊಳ್ಳಬಹುದು, ಕನಿಷ್ಟ ಕೂಲಿಯನ್ನು ಸರ್ಕಾರ ಹೆಚ್ಚು ಮಾಡಿದೆ. ಇದರ ಪ್ರಯೋಜನ ಪಡೆಯುವಂತೆ ತಿಳಿಸಿದರು.
ಪಂಚಾಯಿತಿ ಅಧ್ಯಕ್ಷ ಜೆ.ಆರ್. ಚಂದ್ರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮದ ಹಿರಿಯರಾದ ಪೆಮ್ಮಡಮಾಡ ರಮೇಶ್ ಮಾತನಾಡಿ, ಆದಿವಾಸಿಗಳ ಆರೋಗ್ಯದ ಕುರಿತು ಇಲಾಖಾ ಸಿಬ್ಬಂದಿಗಳು ಆಗಿಂದ್ದಾ ಗಿಯೇ ಹಾಡಿಗಳಿಗೆ ತೆರಳಿ ತಪಾಸಣೆ ನಡೆಸಬೇಕು. ನಿರಂತರ ವಿದ್ಯುತ್ ಸಮಸ್ಯೆ ಇರುವುದರಿಂದ ರೈತರಿಗೆ ಗುಣಮಟ್ಟದ ವಿದ್ಯುತ್ ನೀಡಲು ಹೆಚ್ಚಿನ ನಿಗಾವಹಿಸಬೇಕು ಎಂದರು.
ಗ್ರಾಮದ ಮತ್ತೋರ್ವ ಹಿರಿಯ ರಾದ ಬೊಳ್ಳೆರ ಸುಬ್ಬಯ್ಯ ಮಾತನಾಡಿ, ಅರಣ್ಯ ಇಲಾಖೆಯು ಯಾರಿಗೂ ಮಾಹಿತಿ ನೀಡದೆ ರೈತರ ತೋಟದಲ್ಲಿ ಗುರುತು ಕಲ್ಲುಗಳನ್ನು ಅಳವಡಿಸುತ್ತಿದೆ. ಈ ಬಗ್ಗೆ ಅಧಿಕಾರಿಗಳು ಸಮಗ್ರ ಮಾಹಿತಿ ಒದಗಿಸುವಂತೆ ತಿಳಿಸಿದರು. ಸಂಬAಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸಭೆಗೆ ಹಾಜರಾಗದ ಹಿನ್ನೆಲೆಯಲ್ಲಿ ಆದಿವಾಸಿ ಮುಖಂಡರು ಗಳಾದ ಸೋಮಯ್ಯ, ಶಿವು ಸೇರಿದಂತೆ ಅನೇಕ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ವರ್ಷದಲ್ಲಿ ನಡೆಯುವ ಗ್ರಾಮಸಭೆಗೆ ಅರಣ್ಯ ಅಧಿಕಾರಿಗಳು ಆಗಮಿಸುತ್ತಿಲ್ಲ. ಆದಿವಾಸಿಗಳ ಸಮಸ್ಯೆ ಗಳನ್ನು ಆಲಿಸುವವರೆ ಇಲ್ಲದಂತಾಗಿದೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು. ಈ ಸಂದರ್ಭ ಮಧ್ಯ ಪ್ರವೇಶಿಸಿದ ಗ್ರಾಮದ ಹಿರಿಯರಾದ ಮೆಮ್ಮಣಮಾಡ ರಮೇಶ್ ಈ ಬಗ್ಗೆ ಸಭೆಯು ನಿರ್ಣಯ ಕೈಗೊಂಡು ಇಲಾಖೆಯ ಅಧಿಕಾರಿಗಳಿಗೆ ಕಳುಹಿಸಿ ಕೊಡುವಂತೆ ಮುಂದೆ ನಡೆಯುವ ಸಭೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಳು ಕಡ್ಡಾಯವಾಗಿ ಭಾಗವಹಿಸುವಂತೆ ನೋಡಿಕೊಳ್ಳಲು ಸಲಹೆ ನೀಡಿದರು.
ಹಲವು ಕಡೆಗಳಲ್ಲಿ ವಿದ್ಯುತ್ ಲೈನ್ಗಳುತೋಟದ ಕಾಫಿ ಗಿಡದ ಮೇಲೆ ಹಾದು ಹೋಗುತ್ತಿವೆ. ಹಲವು ವಿದ್ಯುತ್ ಕಂಬಗಳು ಬೀಳುವ ಪರಿಸ್ಥಿತಿಯಲ್ಲಿವೆ. ಇವುಗಳ ಬಗ್ಗೆ ಕ್ರಮ ಕೈಗೊಳ್ಳುವಂತೆ ಗುಡಿಯಂಗಡ ರಾಜ ಸಭೆಯಲ್ಲಿದ್ದ ಅಧಿಕಾರಿಯ ಗಮನ ಸೆಳೆದರು. ಈ ವೇಳೆ ಶ್ರೀಮಂಗಲ ಭಾಗದ ಸೆಸ್ಕ್ ಸಹಾಯಕ ಇಂಜಿನಿ ಯರ್ ಮಾತನಾಡಿ, ಈಗಾಗಲೇ ಹಲವು ಕಂಬಗಳನ್ನು ಬದಲಾಯಿಸಲು ಕ್ರಮ ಕೈಗೊಳ್ಳಲಾಗಿದೆ. ಸಿಬ್ಬಂದಿಗಳ ಕೊರತೆ ನೀಗಿಸಿಕೊಂಡು ನೂತನ ವಿದ್ಯುತ್ ಕಂಬ ಅಳವಡಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಗಿರಿಜನ ಕಲ್ಯಾಣ ಇಲಾಖೆಯ ಮೇಲ್ವಿಚಾರಕರು ಸಭೆಗೆ ಆಗಮಿಸಿ ಇಲಾಖೆ ವತಿಯಿಂದ ಆದಿವಾಸಿಗಳ ಮನೆ ನಿರ್ಮಾಣದ ಬಗ್ಗೆ ಮಾಹಿತಿ ಒದಗಿಸಿದರು. ಕುಡಿಯುವ ನೀರಿಗೆ ಹಾಡಿಯಲ್ಲಿ ಸಮಸ್ಯೆ ಕಾಡುತ್ತಿದೆ.
ಈ ಬಗ್ಗೆ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕೊಳವೆ ಬಾವಿ ತೆಗೆಯುವಂತೆ ಆದಿವಾಸಿಗಳು ಸಭೆಯ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಪಂಚಾಯಿತಿ ಕಾರ್ಯದರ್ಶಿ ಪೂಣಚ್ಚ ಈಗಾಗಲೇ ನಾಲ್ಕು ಕೊಳವೆ ಬಾವಿಗಳನ್ನು ತೆಗೆಯಲಾಗಿದೆ. ನೀರು ಕೂಡ ಲಭ್ಯವಾಗಿದೆ. ಇದರಿಂದ ಮುಂದಿನ ದಿನದಲ್ಲಿ ಕುಡಿಯುವ ನೀರನ್ನು ಹಾಡಿಯ ಜನರಿಗೆ ಸಮಗ್ರವಾಗಿ ಒದಗಿಸುವ ಕೆಲಸ ಕೈಗೆತ್ತಿಕೊಳ್ಳಲಾಗುವುದೆಂದರು. ಸಭೆಯಲ್ಲಿ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಸಚಿನ್ ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದರು.
ಸಭೆಯಲ್ಲಿ ಕೆ. ಬಾಡಗ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ ರೀಟಾ, ಸದಸ್ಯರಾದ ಮುಕ್ಕಾಟಿರ ರಿತೇಶ್ ಬಿದ್ದಪ್ಪ, ಸೇರಿದಂತೆ ಇನ್ನಿತರ ಗ್ರಾಮ ಪಂಚಾಯಿತಿ ಸದಸ್ಯರು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಗ್ರಾಮದ ಪ್ರಮುಖರಾದ ಚೆಪ್ಪುಡಿರ ವಿಜಯ್, ರಾಮಕೃಷ್ಣ, ಕಾವೇರಮ್ಮ, ಪದ್ಮಾವತಿ, ಲೀಲಾವತಿ, ನಾಗರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು. ಸದಸ್ಯರಾದ ರಿತೇಶ್ ಬಿದ್ದಪ್ಪ ಸ್ವಾಗತಿಸಿ, ವಂದಿಸಿದರು.