ಭಾಗಮಂಡಲ, ಫೆ. ೧೧: ಭಾಗಮಂಡಲ ಸನಿಹದ ಅಯ್ಯಂಗೇರಿ ಗ್ರಾಮದಲ್ಲಿ ಚಿನ್ನತಪ್ಪ ಉತ್ಸವ ತಾ. ೧೪ ರಿಂದ ೧೬ ರವರೆಗೆ ನಡೆಯಲಿದೆ. ಉತ್ಸವಕ್ಕೆ ಗ್ರಾಮದ ಜನತೆ ಸಜ್ಜಾಗುತ್ತಿದ್ದು, ಮೂರು ದಿನಗಳ ಕಾಲ ನಡೆಯುವ ವಿಶೇಷವಾದ ಚಿನ್ನತಪ್ಪ ಹಬ್ಬದಲ್ಲಿ ಶ್ರೀ ಕೃಷ್ಣನದು ಎನ್ನಲಾದ ಕೊಳಲಿಗೆ ವಿವಿಧ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಗುತ್ತದೆ.

ತಾ. ೧೪ ರಂದು ಬೆಳಗಿನ ಹಬ್ಬದೊಂದಿಗೆ ಉತ್ಸವ ಪ್ರಾರಂಭಗೊಳ್ಳಲಿದ್ದು ತಾ. ೧೫ ರಂದು ಪಟ್ಟಣಿ ಹಬ್ಬ ಜರುಗಲಿದೆ. ತಾ. ೧೬ ರಂದು ಭಂಡಾರ ಇಡುವುದು ಹಾಗೂ ಅನ್ನದಾನದೊಂದಿಗೆ ಉತ್ಸವ ಕೊನೆಗೊಳ್ಳಲಿದೆ.

ಅಯ್ಯಂಗೇರಿಯಲ್ಲಿ ವರ್ಷಕ್ಕೊಮ್ಮೆ ನಡೆಯುವ ಚಿನ್ನತಪ್ಪ ಹಬ್ಬದದಿಂದ ಊರು ಜನಮನ ಸೆಳೆದಿದೆ. ಜಿಲ್ಲೆಯಲ್ಲಿಯೇ ಏಕೈಕ ಶ್ರೀ ಕೃಷ್ಣ ದೇವಾಲಯವಿರುವ ಏಕೈಕ ಗ್ರಾಮ ಇದಾಗಿದೆ. ಗೊಲ್ಲ ಜನಾಂಗದವರು ಹಾಗೂ ಊರಿನ ಇತರ ಜನಾಂಗದವರು ಒಗ್ಗೂಡಿ ನಡೆಸುವ ಈ ಹಬ್ಬ ಪ್ರತಿ ವರ್ಷ ಮೂರು ದಿನಗಳ ಕಾಲ ವಿವಿಧ ಸಾಂಪ್ರದಾಯಿಕ ಆಚರಣೆಗಳೊಂದಿಗೆ ನೆರವೇರುತ್ತದೆ. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ಹಬ್ಬದಲ್ಲಿ ಕೊಳಲನ್ನು ಎತ್ತಿಕೊಳ್ಳುವವರಿಗೆ ಶ್ರೀ ಕೃಷ್ಣ ಪರಮಾತ್ಮ ಧರಿಸುವ ಆಭರಣಗಳನ್ನು ತೊಡಿಸಿ ಉತ್ಸವದ ಸಂದರ್ಭದಲ್ಲಿ ಕೃಷ್ಣನ ಕೊಳಲನ್ನು ನಿರ್ದಿಷ್ಟ ಜಾಗಗಳಲ್ಲಿ ಮೂರು ಬಾರಿ ನುಡಿಸುತ್ತಾರೆ. ಇದೇ ಸಂದರ್ಭ ಎತ್ತು ಹೋರಾಟದ ಎತ್ತುಗಳನ್ನು ಗದ್ದೆಯಲ್ಲಿ ಮೂರು ಸುತ್ತು ಓಡಿಸುತ್ತಾರೆ. ಕುಟುಂಬದ ಮಹಿಳೆಯರು ‘ಚೆಂಬು ಚರ್ಕ್’ ಒಪ್ಪಿಸುವ ಪದ್ಧತಿ ಇದೆ. ಇಲ್ಲಿ ಗೊಲ್ಲ ಜನಾಂಗದವರೇ ಪೂಜೆಯನ್ನು ಮಾಡುವ ಸಂಪ್ರದಾಯ ಬೆಳೆದು ಬಂದಿದೆ.

ಪ್ರತಿ ವರ್ಷ ಬೆಳಗಿನ ಹಬ್ಬದೊಂದಿಗೆ ಆರಂಭಗೊಳ್ಳುವ ಉತ್ಸವ ಸಾವಿರಾರು ಮಂದಿ ಭಕ್ತರ ಸಮ್ಮುಖದಲ್ಲಿ ದಾರಿ ಪೂಜೆ ಪಟ್ಟಣಿ ಹಬ್ಬ ನಡೆಯುತ್ತದೆ ಕತ್ತಲು ಆವರಿಸಿದ ನಂತರ ಆರಂಭಗೊಳ್ಳುವ ದಾರೆ ಪೂಜೆ ಬೆಳಗಿನ ಜಾವ ೨ ವರೆಗೆ ಜರುಗುತ್ತದೆ. ಮರುದಿನ ಜರುಗುವ ಪಟ್ಟಣ ಹಬ್ಬವನ್ನು ವೀಕ್ಷಿಸಲು ಹಲವು ಭಕ್ತರು ಬಂದು ಸೇರುತ್ತಾg.ೆ ಊರ ಮಂದ್‌ನಲ್ಲಿ ಅಶ್ವಥ ವೃಕ್ಷದ ಕೆಳಗೆ ಶ್ರೀ ಕೃಷ್ಣನದು ಎನ್ನಲಾದ ಕೊಳಲನ್ನು ನುಡಿಸುತ್ತಾರೆ ಜೊತೆಗೆ ವಿಶೇಷ ಸಾಂಪ್ರದಾಯಿಕ ಚಟುವಟಿಕೆಗಳು ನಡೆಯುತ್ತವೆ. ಕೆಲವು ಹಿರಿಯರ ಪ್ರಕಾರ ಶ್ರೀ ಕೃಷ್ಣ ಇಲ್ಲಿಗೆ ಬಂದಾಗ ತನ್ನ ಮೆಚ್ಚಿನ ಕೊಳಲನ್ನು ಬಿಟ್ಟು ಹೋದರಂತೆ. ಕೃಷ್ಣನ ನೆನಪಿನಲ್ಲಿ ಊರವರು ಜೋಪಾನವಾಗಿ ಕಾಯ್ದಿರಿಸಿ ಪೂಜಿಸುತ್ತಾ ಬಂದರು ಎಂಬ ಹಿನ್ನೆಲೆ ಇದೆ. ಉತ್ಸವ ಸಂದರ್ಭದಲ್ಲಿ ಆಶ್ವಥ ವೃಕ್ಷದ ಕೆಳಗೆ ಕೃಷ್ಣನ ಕೊಳಲನ್ನು ನುಡಿಸುವಾಗ ಶುದ್ಧ ಮುದ್ರಿಕೆಯಲ್ಲಿ ಆಗಮಿಸಿದ ಭಕ್ತರಿಗೆ ಆಕಾಶದಲ್ಲಿ ಗರುಡ ಕಾಣಿಸಿಕೊಳ್ಳುತ್ತದೆ ಎಂಬ ನಂಬಿಕೆಯೂ ಇದೆ.

ಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಲು ಪಟ್ಟಣಿ ಹಬ್ಬದಂದು ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಆ ದಿನ ೧೪ ಕುಲದ ಕುಟುಂಬದಿAದ ಒಬ್ಬ ಮಹಿಳೆ ಶ್ವೇತ ವಸ್ತç ಧರಿಸಿ ಹರಿವಾಣದಲ್ಲಿ ಹೂ, ಅಕ್ಕಿ, ದೀಪ ಹಿಡಿದು ಪಟ್ಟಣಿ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಸಂಜೆ ಸಮೀಪದ ಕಲ್ಲು ಹೊಳೆಯಲ್ಲಿ ದೇವರ ಮೀನಿಗೆ ಅಕ್ಕಿ ಹಾಕುವ ಆಚರಣೆ ನಡೆಯಲಿದೆ.

- ಸುನಿಲ್ ಕುಯ್ಯಮುಡಿ