ಕುಶಾಲನಗರ, ಫೆ. ೯: ಸೇವಾ ಮನೋಭಾವ ಜನರ ಮನಸ್ಸಿನಿಂದ ಸೃಷ್ಟಿಯಾಗಬೇಕು ಎಂದು ರೋಟರಿ ೩೧೮೧ ಜಿಲ್ಲಾ ರಾಜ್ಯಪಾಲ ಪ್ರಕಾಶ್ ಕಾರಂತ್ ತಿಳಿಸಿದರು.
ಕುಶಾಲನಗರ ರೋಟರಿ ಸಂಸ್ಥೆಯ ಅಧಿಕೃತ ಭೇಟಿ ಕಾರ್ಯಕ್ರಮದ ನಂತರ ನಡೆದ ಸಮಾರಂಭದಲ್ಲಿ ಮಾತನಾಡಿ, ಪ್ರತಿಯೊಬ್ಬರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಕಾಯಕವನ್ನು ಜನರಿಗೆ ತಿಳಿಸುವ ಮೂಲಕ ಇನ್ನೊಬ್ಬರಿಗೆ ಪ್ರೇರಣೆಯಾಗಬೇಕು ಎಂದ ಪ್ರಕಾಶ್ ಕಾರಂತ್, ಸಮಾಜದ ಕೆಳಸ್ತರದ ಜನರಿಗೆ ಸಹಾಯ ಹಸ್ತ ಚಾಚುವ ಮನಸ್ಥಿತಿ ಹೊಂದಬೇಕೆAದು ಕರೆ ನೀಡಿದರು.
ಜನರೊಂದಿಗೆ ರೋಟರಿ ನಿರಂತರ ವಿಚಾರ ವಿನಿಮಯ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಉತ್ತಮ ಸಮಾಜ ನಿರ್ಮಾಣದ ಗುರಿ ಹೊಂದಿದೆ. ಕೊಡುವ ಮನಸ್ಸಿನ ಮೂಲಕ ತೃಪ್ತಿಗಳಿಸಲು ಸಾಧ್ಯ. ರೋಟರಿ ದತ್ತಿನಿಧಿ ಮೂಲಕ ವಿಶ್ವದಾದ್ಯಂತ ನಿರಂತರ ಸೇವಾ ಕಾರ್ಯ ನಡೆಯುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಅಮೆಮನೆ ಜರ್ನಾಧನ್, ಉದ್ಗಮ್ ಶಾಲೆಯ ಬ್ಯಾಡ್‌ಮಿಂಟನ್ ಕ್ರೀಡಾಪಟು ಕು. ಅನಿಶ್ ಎಸ್. ದೇವಾಡಿಗ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ತೊರೆನೂರು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸ್ಟೀಲ್ ಬಾಟೆಲ್ ಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹಿಂದಿನ ರಾಜ್ಯಪಾಲ ಸುರೇಶ್ ಚಂಗಪ್ಪ, ವಲಯ ೬ ರ ಸಹಾಯಕ ರಾಜ್ಯಪಾಲ ಎಸ್.ಕೆ. ಸತೀಶ್, ಜೋನಲ್ ಲೆಫ್ಟಿನೆಂಟ್ ಎಂ.ಡಿ. ಲಿಖಿತ್, ಕುಶಾಲನಗರ ರೋಟರಿ ಅಧ್ಯಕ್ಷ ಉಲ್ಲಾಸ್ ಕೃಷ್ಣ, ಕಾರ್ಯದರ್ಶಿ ಸುನೀತಾ ಮಹೇಶ್, ರೋಟರಿ ಹಿರಿಯ ಸದಸ್ಯರಾದ ಎ.ಎ. ಚಂಗಪ್ಪ, ಶೋಭ ಸತೀಶ್, ಕ್ರಿಜ್ವಲ್ ಕೋಟ್ಸ್, ಎಂ.ಡಿ. ರಂಗಸ್ವಾಮಿ, ಡಾ. ಹರಿ ಶೆಟ್ಟಿ, ಸೇರಿದಂತೆ ಜಿಲ್ಲೆಯ ವಿವಿಧ ರೋಟರಿ ಸಂಸ್ಥೆಗಳ ಪ್ರಮುಖರು, ಸದಸ್ಯರು ಇದ್ದರು.