ಮಡಿಕೇರಿ, ಫೆ. ೯: ಕಾಂಗ್ರೆಸ್ ಮುಖಂಡರುಗಳ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಉಚ್ಚ ನ್ಯಾಯಾಲಯ ವಜಾಗೊಳಿಸಿ ಆದೇಶಿಸಿದೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಯ ಅತಿವೃಷ್ಟಿ ಪ್ರದೇಶ ವೀಕ್ಷಣೆಗೆ ಬಂದಾಗ ಮೊಟ್ಟೆ ಎಸೆತ ಘಟನೆ ನಡೆದಿತ್ತು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಎಸ್. ಪೊನ್ನಣ್ಣ ನೇತೃತ್ವದಲ್ಲಿ ಕೃತ್ಯ ಖಂಡಿಸಿ ಕಾಂಗ್ರೆಸ್ ಮುಖಂಡರು ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ್ದರು.

ಇದೇ ಸಂದರ್ಭ ಮಡಿಕೇರಿ ನಗರ ಸಭೆಯ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಅವರು ಶೌಚಾಲಯ ವೀಕ್ಷಣೆಗೆ ಹೋಗುತ್ತಿದ್ದಾಗ ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಮುಖಂಡರಾದ ಡಾ. ಮಂಥರ್ ಗೌಡ , ತೆನ್ನಿರ ಮೈನಾ, ಮೋಹನ್‌ದಾಸ್ ಸೇರಿದಂತೆ ಹನ್ನೊಂದು ಮಂದಿ ಹಲ್ಲೆ ನಡೆಸಿದರು ಎಂದು ಮಡಿಕೇರಿ ನಗರ ಠಾಣೆಯಲ್ಲಿ ಅನಿತಾ ಪೂವಯ್ಯ ಎಫ್.ಐ.ಆರ್. ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಪೊನ್ನಣ್ಣ ಹೈಕೋರ್ಟ್ ಮೊರೆ ಹೋಗಿ ಎಫ್.ಐ.ಆರ್.ಗೆ ತಡೆಯಾಜ್ಞೆ ತಂದಿದ್ದರು.

ಈ ಪ್ರಕರಣವನ್ನು ತಾ. ೮ ರಂದು ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ಇದೊಂದು ಸುಳ್ಳು ಹಾಗೂ ರಾಜಕೀಯ ದುರುದ್ದೇಶದಿಂದ ಕೂಡಿದ ಪ್ರಕರಣ ಎಂದು ಪರಿಗಣಿಸಿ ವಜಾಗೊಳಿಸಿದೆ.