ಕೊಡ್ಲಿಪೇಟೆ, ಫೆ. ೮: ಕಳೆದ ತಾ. ೫ ರಂದು ಕೊಡ್ಲಿಪೇಟೆ ಸಮೀಪದ ಶಾಂತಪುರ ಗ್ರಾಮದಲ್ಲಿ ನಡೆದ ಕಾಡಾನೆ ದಾಳಿಗೆ ಕುಮಾರ್ ಎಂಬವರು ಮೃತಪಟ್ಟಿದ್ದು, ಸರ್ಕಾರದಿಂದ ನೀಡಲಾಗುವ ಪರಿಹಾರ ಧನದ ಚೆಕ್ನ್ನು ಶಾಸಕ ಅಪ್ಪಚ್ಚು ರಂಜನ್ ಅವರು ಮೃತನ ಕುಟುಂಬಕ್ಕೆ ಹಸ್ತಾಂತರಿಸಿದರು. ಮೃತನ ಮನೆಗೆ ತೆರಳಿದ ಶಾಸಕರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಮೃತ ಕುಮಾರ್ ಅವರ ಪತ್ನಿ ರಾಣಿ ಅವರಿಗೆ ಪ್ರಥಮ ಹಂತದಲ್ಲಿ ರೂ. ೨.೫೦ ಲಕ್ಷ ಮೌಲ್ಯದ ಚೆಕ್ ಹಸ್ತಾಂತರಿಸಿದರು. ಮೃತರ ಮರಣ ದೃಢೀಕರಣ ಪತ್ರ, ಮರಣೋತ್ತರ ಪರೀಕ್ಷಾ ವರದಿ ಸೇರಿದಂತೆ ಇನ್ನಿತರ ದಾಖಲಾತಿಗಳು ಲಭಿಸಿದ ನಂತರ ಉಳಿದ ಪರಿಹಾರದ ಮೊತ್ತವನ್ನು ವಿತರಿಸಲಾಗುವುದು ಎಂದು ಶಾಸಕರು ತಿಳಿಸಿದರು. ಈ ಸಂದರ್ಭ ಎಸಿಎಫ್ ಗೋಪಾಲ್, ಶನಿವಾರಸಂತೆ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ, ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್, ಸೇರಿದಂತೆ ಇತರರು ಉಪಸ್ಥಿತರಿದ್ದರು.