ಕಡಂಗ, ಫೆ. ೮: ಕಡಂಗ ಪ್ರೀಮಿಯರ್ ಕ್ರಿಕೆಟ್ ಲೀಗ್-೨೦೨೩ ತಾ. ೯ ರಿಂದ ೧೨ ರವರೆಗೆ ಕಡಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಕಾರ್ಯದರ್ಶಿ ಎಂ.ಬಿ. ನೌಫಲ್ ಈ ಬಗ್ಗೆ ಮಾಹಿತಿ ನೀಡಿದರು. ಕಳೆದ ೮ ವರ್ಷಗಳ ಹಿಂದೆ ೨೦೧೬ರಲ್ಲಿ ಕೆಪಿಎಲ್ ಕ್ರಿಕೆಟ್ ಕ್ರೀಡಾಕೂಟ ಆಯೋಜಿಸಲಾಗಿದ್ದು, ಇದೀಗ ಎಂಟನೇ ವರ್ಷಕ್ಕೆ ಕಾಲಿರಿಸಿದೆ.
ಉದ್ಘಾಟನಾ ಸಮಾರಂಭ ಕ್ರೀಡಾಕೂಟದ ಅಧ್ಯಕ್ಷ ಅಸ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಉದ್ಘಾಟನೆಯನ್ನು ಗುರುವಾರ ಬೆಳಿಗ್ಗೆ ೧೦ ಗಂಟೆಗೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಲಾ ಮುಖ್ಯ ಶಿಕ್ಷಕಿ ಶಾಂತಕುಮಾರಿ, ನೆಲ್ಲಚಂಡ ಕಿರಣ್ ಕಾರ್ಯಪ್ಪ, ಸುಲೇಮಾನ್, ಅಬ್ದುಲ್ಲಾ, ಜುನಿದ್, ಕೆ.ಎಂ. ಗಣು ಕುಶಾಲಪ್ಪ ಭಾಗವಹಿಸಲಿದ್ದಾರೆ. ಎಂಟು ಬಲಿಷ್ಠ ತಂಡಗಳ ನಡುವೆ ಪಂದ್ಯ ನಡೆಯಲಿದ್ದು, ನಾಲ್ಕು ದಿನಗಳ ಪಂದ್ಯಾಟವಾಗಿದೆ.
ಕಡAಗ ಸುತ್ತಮುತ್ತಲಿನ ಗ್ರಾಮದ ಯುವ ಕ್ರೀಡಾಪಟುಗಳ ಪ್ರತಿಭೆಗಳನ್ನು ಹೊರ ತರುವುದು ಕ್ರೀಡಾಕೂಟದ ಮುಖ್ಯ ಉದ್ದೇಶವಾಗಿದೆ ಎಂದರು. ಕಳೆದ ಎಂಟು ವರ್ಷಗಳಿಂದ ಕ್ರೀಡಾಕೂಟದ ಆಯೋಜಕರು ಬಡ ವಿದ್ಯಾರ್ಥಿಗಳಿಗೆ ಬುಕ್ ವಿತರಣೆ, ಊರಿನಲ್ಲಿರುವ ಬಡ ರೋಗಿಗಳಿಗೆ ಸಹಾಯ ನೀಡುವುದು, ಅದೇ ರೀತಿ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಗಿದ್ದು, ಈ ವರ್ಷವೂ ನಡೆಯಲಿದೆ.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೆಪಿಎಲ್ ಸಂಸ್ಥಾಪಕ ಜುನಿದ್ ಕೆ.ಎಂ. ವಹಿಸಲಿದ್ದು, ಉದ್ಘಾಟನೆಯನ್ನು ವಕೀಲ ಎ.ಎಸ್. ಪೊನ್ನಣ್ಣ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಂಕಿತ್ ಪೊನ್ನಪ್ಪ, ಕೋಡಿರ ವಿನೋದ್ ನಾಣಯ್ಯ, ಕೋಡಿರ ಪ್ರಸನ್ನ ತಮ್ಮಯ್ಯ, ಸುಬೀರ್ ಸಿ.ಇ., ಜುನೈದ್ ಸಿ.ಎ. ಮತ್ತಿತರರು ಪಾಲ್ಗೊಳ್ಳಲಿದ್ದಾರೆ. ಶನಿವಾರ ಮತ್ತು ಭಾನುವಾರ ಅಪರಾಹ್ನ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಕೆಪಿಎಲ್ ಎಂಟನೇ ಆವೃತ್ತಿಯ ಅಧ್ಯಕ್ಷ ಅಸ್ಕರ್, ಸಹಕಾರ್ಯದರ್ಶಿಗಳಾದ ಶಮೀರ್ ಪಿ.ಹೆಎಚ್., ಕರಿಂ, ಜಲೀಲ್, ಯೂನಸ್ ಹಾಜರಿದ್ದರು.