ಕೂಡಿಗೆ, ಫೆ. ೭: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧಲಿಂಗಪುರ ಗ್ರಾಮದ ಅರಿಸಿನಗುಪ್ಪೆ ಗ್ರಾಮದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್, ಹೆಬ್ಬಾಲೆ ವಲಯದ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿ ಹಾಗೂ ಪ್ರಗತಿ ಬಂಧು ಸ್ವ-ಸಹಾಯ ಸಂಘ ಒಕ್ಕೂಟ ಹೆಬ್ಬಾಲೆ ವಲಯದ ಜಂಟಿ ಆಶ್ರಯದಲ್ಲಿ ಕೌಟುಂಬಿಕ ಸೌಹಾರ್ದತೆ ಹಾಗೂ ಗ್ರಾಮ ಸುಭಿಕ್ಷೆಗಾಗಿ ವಲಯ ಮಟ್ಟದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಸ್ವ-ಸಹಾಯ ತಂಡಗಳ ಸಾಧನ ಸಮಾವೇಶ ಮಂಜುನಾಥಸ್ವಾಮಿ ದೇವಾಲಯ ಆವರಣದಲ್ಲಿ ನಡೆಯಿತು.
ಮಂಜುನಾಥಸ್ವಾಮಿ ದೇವಾಲಯದ ಶ್ರೀ ರಾಜೇಶನಾಥ್ ಜೀ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಂಸ್ಕೃತಿ ಜೀವನದ ಮೌಲ್ಯವನ್ನು ಅರ್ಥೈಸಿಕೊಳ್ಳಲು ಇಂತಹ ಧಾರ್ಮಿಕ ಪೂಜಾ ಕೈಂಕರ್ಯಗಳು ಸಹಕಾರಿ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಪಂಡ ಮುತ್ತಪ್ಪ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಈ ಪೂಜಾ ಕಾರ್ಯಕ್ರಮವು ಎಲ್ಲರನ್ನು ಒಗ್ಗೂಡಿಸುವ ಚಿಂತನೆಯಾಗಿದೆ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು.
ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಯೋಜನೆಗಳ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.
ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಹೆಚ್. ರೋಹಿತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಪಿ.ಡಿ. ರವಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಧಾರ್ಮಿಕ ಆಚರಣೆಗಳು ಜನರ ಬದುಕಿಗೆ ದಾರಿ ದೀಪವಾಗಿವೆ ಎಂದರು.
ಇದೇ ಸಂದರ್ಭ ಯೋಜನೆಯ ಫಲಾನುಭವಿಗಳಿಗೆ, ಸದಸ್ಯರಿಗೆ ಸಂಘದ ವತಿಯಿಂದ ಒದಗಿಸುವ ಮಾಸಾಶನ, ಎಲ್ಐಸಿ, ಸಹಾಯಧನ, ಸ್ಕಾಲರ್ಶಿಪ್ ಮತ್ತಿತರ ಸೌಲಭ್ಯಗಳನ್ನು ವಿತರಿಸಲಾಯಿತು.
ವಿವಿಧ ಒಕ್ಕೂಟದ ವಿವಿಧ ಸ್ವಸಹಾಯ ಸಂಘದವರಿಗೆ ವಿವಿಧ ಯೋಜನೆಯ ಸವಲತ್ತುಗಳನ್ನು ಪಡೆಯಲು ಅನುಮತಿ ಪತ್ರಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಎಂ.ಸಿ. ಮೋಹನ್, ಗೋಣಿಮರೂರು ಬಸವೇಶ್ವರ ದೇವಾಲಯ ಸಮಿತಿಯ ಅಧ್ಯಕ್ಷ ಹೆಚ್.ಸಿ. ಸಿದ್ದಪ್ಪ, ಪ್ರಮುಖರಾದ ಧರ್ಮಪ್ಪ, ಅರ್ಜನ್ ಸೇರಿದಂತೆ ೯ ಒಕ್ಕೂಟದ ಅಧ್ಯಕ್ಷರು ಹಾಜರಿದ್ದರು.
ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ೧೫ ಗ್ರಾಮಗಳ ನೂರಾರು ಕಾರ್ಯಕರ್ತರಿಗೆ ಅನ್ನಸಂತರ್ಪಣೆ ನಡೆಯಿತು.