ಸೋಮವಾರಪೇಟೆ, ಫೆ. ೭: ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಪ್ರಾರಂಭಿಸಿದ ವಿಶ್ವಮಾನವ ಕುವೆಂಪು ಶಾಲೆಯಲ್ಲಿ ಪ್ರಸಕ್ತ ಸಾಲಿನಿಂದ ಸಿಇಟಿ, ನೀಟ್ ಪರೀಕ್ಷೆ ತಯಾರಿಗೆ ತರಬೇತಿ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಸದುದ್ದೇಶದಿಂದ ಪ್ರಸಕ್ತ ವರ್ಷದಿಂದ ಪಿ.ಯು.ಸಿಯಲ್ಲಿ ವಿಜ್ಞಾನ ವಿಭಾಗವನ್ನು ಪ್ರಾರಂಭಿಸಲಾಗುವುದು ಎಂದರು.

ಗ್ರಾಮೀಣ ಮಕ್ಕಳು ನಗರ ಪ್ರದೇಶಗಳಿಗೆ ತೆರಳಿ ಶಿಕ್ಷಣ ಪಡೆಯಲು ಕಷ್ಟಸಾಧ್ಯವಾಗಿರುವ ಹಿನ್ನೆಲೆ ರೈತಾಪಿ ವರ್ಗದ ಸಮಸ್ಯೆ ಮನಗಂಡು ಪದವಿಪೂರ್ವ ಶಿಕ್ಷಣವನ್ನು ನೀಡಲು ಸಂಘ ತೀರ್ಮಾನಿಸಿದೆ. ಅಲ್ಲದೆ ಹಾಸ್ಟೆಲ್ ಸೌಲಭ್ಯವನ್ನು ಒದಗಿಸಲು ಶ್ರಮ ವಹಿಸಲಾಗಿದೆ ಎಂದು ಮಾಹಿತಿಯಿತ್ತರು.

ಅತೀ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುತ್ತಿದ್ದು ಎಸ್.ಎಸ್.ಎಲ್.ಸಿಯಲ್ಲಿ ಕಳೆದ ೭ ವರ್ಷಗಳಿಂದ ಸತತವಾಗಿ ಶೇ. ೧೦೦ ರಷ್ಟು ಫಲಿತಾಂಶ ಬರುತ್ತಿದೆ. ಶಾಲೆಯ ಎಲ್ಲಾ ತರಗತಿಗಳಿಗೂ ಸ್ಮಾರ್ಟ್ಕ್ಲಾಸ್ ಸೌಲಭ್ಯ ಒದಗಿಸಲಾಗಿದೆ ಎಂದು ಹೇಳಿದರು.

ಪ್ರಸಕ್ತ ಸಾಲಿನಿಂದ ಪಿಸಿಎಂಬಿ, ಪಿಸಿಎಂಸಿ ವಿಷಯಗಳು ಇರುತ್ತವೆ. ಲ್ಯಾಬ್ ಮತ್ತು ಗ್ರಂಥಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಪಿ.ಯು. ಕಾಲೇಜಿನಲ್ಲಿ ಕಲಾ, ವಾಣಿಜ್ಯ ತರಗತಿಗಳು ನಡೆಯುತ್ತಿವೆ ಎಂದರು. ಪೌಢಶಾಲೆಯ ವಿದ್ಯಾರ್ಥಿಗಳು ಪ್ರತಿ ವರ್ಷ ಕೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ.

ಕೇಂದ್ರ ಸರ್ಕಾರ ನೀಡುವ ಮಾನಕ್ ಇನ್ಸ್ಫೆಯರ್ ಅವಾರ್ಡ್ಗೆ ನಮ್ಮ ಶಾಲೆಯ ೫ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ಒಬ್ಬ ವಿದ್ಯಾರ್ಥಿಗೆ ೧೦ ಸಾವಿರ ರೂ.ಗಳಂತೆ ಒಟ್ಟು ೫೦ ಸಾವಿರ ರೂ.ಗಳ ಪ್ರೋತ್ಸಾಹ ಧನವನ್ನು ಸರ್ಕಾರ ನೀಡಿದೆ.

ಒಂದೇ ಶಾಲೆಯ ೫ ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ದೇಶದಲ್ಲೇ ಪ್ರಥಮ ಎಂದು ಮುತ್ತಣ್ಣ ತಿಳಿಸಿದರು.

ಗೋಷ್ಠಿಯಲ್ಲಿ ಶಾಲೆಯ ಭಾತ್ಮೀದಾರರಾದ ಕೆ.ಎಂ. ಜಗದೀಶ್, ಸಂಘದ ಕಾರ್ಯದರ್ಶಿ ಎನ್.ಬಿ. ಗಣಪತಿ, ಪದಾಧಿಕಾರಿ ಕೆ.ಕೆ. ಮಂಜುನಾಥ್ ಕುಮಾರ್, ಉಪನ್ಯಾಸಕ ಲಾಂಚನ್ ಇದ್ದರು.