ಕೂಡಿಗೆ, ಫೆ. ೭: ಕುಶಾಲನಗರ ತಾಲೂಕು ಮಟ್ಟದ ಬಿಜೆಪಿ ಮಂಡಲ ಸಭೆ ಕುಶಾಲನಗರದ ರೈತ ಭವನದ ಸಭಾಂಗಣದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮ ಪಂಚಾಯಿತಿಗಳ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರುಗಳ ಮತ್ತು ವಿವಿಧ ಘಟಕಗಳ ಅಧ್ಯಕ್ಷರ ಸಭೆಯನ್ನು ಕರೆಯಲಾಗಿತ್ತು.
ಗ್ರಾಮ ವ್ಯಾಪ್ತಿಯಲ್ಲಿ ಕೈಗೊಂಡ ವಿಜಯ ಸಂಕಲ್ಪ ಯಾತ್ರೆಯ ವಿಷಯದ ಬಗ್ಗೆ ಶಾಸಕರು ಮಾಹಿತಿಯನ್ನು ಪಡೆದರು. ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಘಟಕಗಳ ಬೂತ್ ಸಮಿತಿಯ ಕಾರ್ಯವೈಖರಿಗಳ ಮಾಹಿತಿಯನ್ನು ಪಡೆದು ಆಯಾ ಬೂತ್ ಸಮಿತಿಯವರು ಗ್ರಾಮ ಎಲ್ಲಾ ಮನೆಗಳಿಗೆ ಭೇಟಿ ನೀಡಿ ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳ ಬಗ್ಗೆ ಸಮಗ್ರವಾಗಿ ತಿಳಿಸುವಂತೆ ಹಾಜರಿದ್ದ ಶಕ್ತಿ ಕೇಂದ್ರದ ಅಧ್ಯಕ್ಷರಿಗೆ, ಮತ್ತು ಬೂತ್ ಸಮಿತಿಯ ಅಧ್ಯಕ್ಷರಿಗೆ ತಿಳಿಸಿದರು.
ಸಭೆಯಲ್ಲಿ ಕುಶಾಲನಗರ ಪುರಸಭೆ ಅಧ್ಯಕ್ಷ ಜೈವರ್ಧನ್, ತಾಲೂಕು ಬಿಜೆಪಿ ಅಧ್ಯಕ್ಷ ಮನುಕುಮಾರ್ ರೈ, ಕುಶಾಲನಗರ ವ್ಯವಸಾಯೋತ್ಪನ ಸಹಕಾರ ಸಂಘದ ಅಧ್ಯಕ್ಷ ಕುಮಾರಪ್ಪ, ಬೂತ್ ವಿಜಯ ಸಂಕಲ್ಪ ಯಾತ್ರೆ ಸಂಚಾಲಕ ಮಹೇಶ್ ತಿಮ್ಮಯ್ಯ, ಯುವ ಮೋರ್ಚಾದ ಕಾರ್ಯದರ್ಶಿ ಗೌತಮ್, ಕೃಷ್ಣಪ್ಪ, ಪುರಸಭೆ ಸದಸ್ಯ ಅಮೃತರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮಂಜುಳ, ಮಹಿಳಾ ಘಟಕದ ಜಿಲ್ಲಾ ಕಾರ್ಯದರ್ಶಿ ಪುಷ್ಪ ನಾಗೇಶ್, ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ದರ್ಶನ್, ತಾಲೂಕು ಯುವ ಮೋರ್ಚಾದ ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಗ್ರಾಮ ಪಂಚಾಯಿತಿಯ ಶಕ್ತಿ ಕೇಂದ್ರ ಮತ್ತು ಬೂತ್ ಸಮಿತಿಯ ಕಾರ್ಯಕರ್ತರು ಭಾಗವಹಿಸಿದ್ದರು.