ಸುಂಟಿಕೊಪ್ಪ, ಫೆ. ೭: ಹಲವು ಗಂಭೀರ ಸಮಸ್ಯೆಗಳು ಹಾಗೂ ಪಂಚಾಯಿತಿಯ ಕ್ರಮಗಳಿಗೆ ಗ್ರಾಮ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು. ಇದರಿಂದ ಸಭೆಯಲ್ಲಿ ಗದ್ದಲ್ಲ ಸೃಷ್ಟಿಯಾಗಿ ಗೊಂದಲದ ಗೂಡಾಗಿ ಪರಿವರ್ತನೆಗೊಂಡಿತು.
ಮಾದಾಪುರ ರಸ್ತೆಯ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಅವರ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಿತು. ಸಭೆಗೆ ನೋಡೆಲ್ ಅಧಿಕಾರಿಯಾಗಿ ಸೋಮವಾರಪೇಟೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೆೆÃಶಕ ಚಂದ್ರಪ್ಪ ಅವರು ಆಗಮಿಸಬೇಕಾಗಿತ್ತು. ಆದರೆ, ಅವರು ಗೈರಾದ ಹಿನ್ನೆಲೆ ಕೊನೆಘಳಿಗೆಯಲ್ಲಿ ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪಿ.ಎಸ್.ಜಾನ್ ಅವರನ್ನು ನೋಡೆಲ್ ಅಧಿಕಾರಿಯಾಗಿ ನೇಮಿಸಲಾಯಿತು.
ಕಳೆದ ಸಾಲಿನ ವರದಿ ಮಂಡನೆಯಾದ ನಿರ್ಣಯಗಳಲ್ಲಿ ಎಷ್ಟು ಕೆಲಸಗಳು ಅನುಷ್ಠಾನ ಗೊಂಡಿವೆ. ಗ್ರಾಮ ಪಂಚಾಯಿತಿ ಕಚೇರಿ ಎದುರಿನ ರಾಷ್ಟಿçÃಯ ಹೆದ್ದಾರಿ ಬದಿಯ ಫುಟ್ಪಾತ್ನಲ್ಲಿ ನಡೆದಾಡಲು ಸಾಧ್ಯವಾಗುತ್ತಿಲ್ಲ. ಹೆದ್ದಾರಿ ಬದಿಯ ಚರಂಡಿಯನ್ನೇ ಒತ್ತುವರಿ ಮಾಡಿ ಕೆಲವರು ಅಂಗಡಿಗಳನ್ನು ನಿರ್ಮಿಸಿದ್ದಾರೆ, ಅಲ್ಲದೆ ರಸ್ತೆ ಬದಿ ವ್ಯಾಪಾರಗಳಿಂದ ಕಾನೂನು ಬಾಹಿರವಾಗಿ ಸುಂಕ ವಸೂಲಿ ಮಾಡಲಾಗುತ್ತಿದೆ. ಬಡವರಿಗೊಂದು ನ್ಯಾಯ ಶ್ರೀಮಂತರಿಗೊAದು ನ್ಯಾಯ ಎಂದು ನಾಗೇಶ್ ಪೂಜಾರಿ, ಪ್ರಶಾಂತ್, ಇಬ್ರಾಹಿಂ, ಈಶ್ವರ, ಇತರರು ಅಸಮಾಧಾನ ವ್ಯಕ್ತಪಡಿಸಿದರು. .
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಮಾತನಾಡಿ, ಫುಟ್ಪಾತ್ ಕಾಮಗಾರಿ ಶೀಘ್ರದಲ್ಲಿ ನಡೆಸಲಾಗುವುದು ಎಂದರು.
ವಿದ್ಯುತ್ ಹಣ ಪಾವತಿಸದೆ ಪಂಚಾಯಿತಿ ಕತ್ತಲೆಯಲ್ಲಿ ಮುಳುಗಿದೆ. ಕೆಲಸ ಕಾರ್ಯಗಳು ನಿಧಾನವಾಗಿ ನಡೆಯುತ್ತಿವೆ. ಗ್ರಾಮ ಪಂಚಾಯಿತಿ ನೂತನ ಕಟ್ಟಡಕ್ಕೆ ಲಕ್ಷಾಂತರ ರೂಪಾಯಿ ವ್ಯಯಿಸಲಾಗಿದೆ. ಕುರಿ, ಕೋಳಿ, ಮೀನು ಮಳಿಗೆಯಿಂದ ಮತ್ತು ಅಂಗಡಿ ಮಳಿಗೆಯಿಂದ ಲಕ್ಷಾಂತರ ಆದಾಯ ಬರುತ್ತಿದ್ದರೂ ವಿದ್ಯುತ್ ಹಣ ಏಕೆ ಪಾವತಿಸಿಲ್ಲ ಎಂದು ಇಸಾಕ್ ಖಾನ್ ಪ್ರಶ್ನಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಶಬೀರ್ ಪ್ರತಿಕ್ರಿಯಿಸಿ, ಕುರಿ, ಕೋಳಿ, ಮೀನು ಮಳಿಗೆಯವರಿಂದ ದೊಡ್ಡ ಮಟ್ಟದ ಆದಾಯ ಬರುತ್ತಿದೆ. ಆದರೆ ಕಳೆದ ೪ ವರ್ಷದಿಂದ ಮಳಿಗೆಯವರು ಹಣ ಪಾವತಿಸದೆ ಇರುವುದರಿಂದ ಪಂಚಾಯಿತಿಗೆ ಆದಾಯ ಕ್ಷೀಣಿಸಿದೆ ಎಂದು ಸಮರ್ಥಿಸಿಕೊಂಡರು.
ಗ್ರಾಮಸ್ಥ ರಫೀಕ್ ಸಿರಾಜ್ ಖಾನ್ ಇಬ್ರಾಹಿಂ ಮಾತನಾಡಿ, ಗ್ರಾಮಸ್ಥರ ಪ್ರಶ್ನೆಗೆ ಅಧ್ಯಕ್ಷರು ಮೌನವಹಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅಧ್ಯಕ್ಷರು ಉತ್ತರಿಸಲಿ ಎಂದು ಪಟ್ಟು ಹಿಡಿದು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಗೆ ಧಿಕ್ಕಾರ ಕೂಗಿದ ಪ್ರಸಂಗ ನಡೆಯಿತು.
‘ಅಧ್ಯಕ್ಷರೆ ಉತ್ತರಿಸಲಿ ಇಲ್ಲದಿದ್ದರೆ ಮನೆಗೆ ಹೋಗಲಿ’ ಎಂದು ಗ್ರಾಮಸ್ಥ ಈಶ್ವರ ಹೇಳಿದಾಗ ಗ್ರಾಮಸ್ಥರು ಅವರ ವಿರುದ್ಧ ತಿರುಗಿ ಬಿದ್ದರು. ಇದು ಕೈ-ಕೈ ಮಿಲಾಯಿಸಲು ಹಂತಕ್ಕೆ ತಲುಪಿತ್ತು. ಬಳಿಕ ಪರಿಸ್ಥಿತಿ ತಿಳಿಗೊಂಡಿತು.
ಗುಡ್ಡಪ್ಪ ರೈ ಬಡಾವಣೆಯಲ್ಲಿ ರಸ್ತೆ, ಚರಂಡಿ ಮೂಲಭೂತ ಸೌಕರ್ಯ ಇಲ್ಲದೆ ಮಳೆಗಾಲದಲ್ಲಿ ಚರಂಡಿ ನೀರು ಮನೆಗೆ ನುಗ್ಗುತ್ತಿದೆ ಎಂದು ಗೀತಾ ಹಾಗು ಅಪ್ಸತ್ ನಾಗರಾಜು ಗಮನ ಸೆಳೆದರು. ಬಡಾವಣೆಗಳಲ್ಲಿ ಮನೆ ನಿರ್ಮಿಸುವವರಿಗೆ ಎಲ್ಲಾ ದಾಖಲೆ ಸರಿ ಇದ್ದರೂ ಪಂಚಾಯಿತಿ ಕೆಲ ಸದಸ್ಯರುಗಳು ನೋಂದಾಣಿಗೆ ತಡೆ ಹಿಡಿಯುತ್ತಿದ್ದಾರೆ ಎಂದು ಇಬ್ರಾಹಿಂ ಆರೋಪಿಸಿದರು.
ಸುಂಟಿಕೊಪ್ಪ ಪಟ್ಟಣದ ನಡುವೆ ರಾಷ್ಟಿçÃಯ ಹೆದ್ದಾರಿಯು ಹಾದು ಹೋಗಿದ್ದು ಠಾಣಾಧಿಕಾರಿ ಎಂ.ಸಿ.ಶ್ರೀಧರ್ ಮಾತನಾಡಿ, ಮುಂದಿನ ದಿನಗಳಲ್ಲಿ ಗ್ರಾ.ಪಂ.ಆಡಳಿತ ಮಂಡಳಿಯೊAದಿಗೆ ಚರ್ಚಿಸಿ ವಾಹನಗಳ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖೆಯಲ್ಲಿರುವ ಮೂಲ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಪಿ.ಎಫ್. ಸಬಾಸ್ಟೀನ್, ರಫೀಕ್ಖಾನ್, ಆಲಿಕುಟ್ಟಿ, ಪಿ.ಆರ್.ಸುನಿಲ್ಕುಮಾರ್, ಬಿ.ಎಂ.ಸುರೇಶ್, ಶಬೀರ್, ಸೋಮನಾಥ್, ಜೀನಾಸುದ್ದೀನ್, ಮಂಜುನಾಥ, ನಾಗರತ್ನ ಸುರೇಶ್, ಮಂಜುಳ, ಶಾಂತಿ, ವಸಂತಿ, ಹಸೀನಾ, ರೇಷ್ಮ ಗ್ರಾಮ ಪಂಚಾಯಿತಿ ಲೆಕ್ಕಾಧಿಕಾರಿ ಚಂದ್ರಕಲಾ ಸಿಬ್ಬಂದಿಗಳಾದ ಡಿ.ಎಂ. ಮಂಜುನಾಥ್, ಬಿಲ್ ಕಲೆಕ್ಟರ್ ಶ್ರೀನಿವಾಸ್, ಸಂಧ್ಯಾ ಹಾಗೂ ಪೌರಕಾರ್ಮಿಕರು ಇದ್ದರು.