ಮಡಿಕೇರಿ, ಫೆ. ೭: ಮುಂಬರುವ ವಿಧಾನಸಭಾ ಚುನಾವಣೆಗೆ ರಾಜ್ಯದ ೨೨೪ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ ಎಂದು ಎ.ಎ.ಪಿ. ರಾಜ್ಯ ಕಾರ್ಯಾಧ್ಯಕ್ಷ ಬಿ.ಟಿ. ನಾಗಣ್ಣ ತಿಳಿಸಿದರು.

ಶಿಕ್ಷಣ ಮತ್ತು ಆರೋಗ್ಯ ಒತ್ತು ನೀಡುವ ಸಲುವಾಗಿ ಪ್ರಸ್ತುತ ವರ್ಷದ ಎಂಎಲ್‌ಎ ಚುನಾವಣೆಯಲ್ಲಿ ೨೨೪ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ. ಈಗಾಗಲೇ ೧೯೬ ಕ್ಷೇತ್ರಗಳಿಗೆ ೩೯೦ ಆಕಾಂಕ್ಷಿಗಳಿದ್ದಾರೆ. ಉಳಿದ ಕ್ಷೇತ್ರವನ್ನು ಪೂರ್ಣ ಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಮಾರ್ಚ್ ಮೊದಲ ವಾರ ಮೊದಲ ಪಟ್ಟಿ ಬಿಡುಗಡೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ ಅವರು, ಅರವಿಂದ ಕೇಜ್ರಿವಾಲ್ ಫೆ.೨೬ ರಂದು ದಾವಣಗೆರೆಗೆ ಬರುತ್ತಾರೆ. ಈ ಸಂದರ್ಭ ಬೂತ್ ಮಟ್ಟದ ಕಾರ್ಯಕರ್ತರಿಗೆ ಪ್ರತಿಜ್ಞಾವಿಧಿ ಬೋಧಿಸಲಾಗುವುದು. ಕೊಡಗು ಜಿಲ್ಲೆಯ ಎರಡು ಕ್ಷೇತ್ರದಲ್ಲಿ ೫ ಆಕಾಂಕ್ಷಿಗಳಿದ್ದು, ಮತದಾರರನ್ನು ಹೆಚ್ಚು ಭೇಟಿ ಮಾಡಿದವರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಚನ್ನಪ್ಪಗೌಡ, ಜಿಲ್ಲಾಧ್ಯಕ್ಷ ಬೋಜಣ್ಣ ಸೋಮಯ್ಯ, ರಾಜ್ಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೆಗೌಡ, ಜಿಲ್ಲಾ ಕಾರ್ಯದರ್ಶಿ ಪೃಥ್ವಿ, ಆಕಾಂಕ್ಷಿ ವೆಂಕಟೇಶ ಉಪಸ್ಥಿತರಿದ್ದರು.