ಮಡಿಕೇರಿ, ಫೆ. ೭: ಜೆಡಿಎಸ್ ಪಕ್ಷದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಜೆಡಿಎಸ್ ರಾಜ್ಯ ವಕ್ತಾರ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.
ಜೆಡಿಎಸ್ ಯುವ ಘಟಕ ವತಿಯಿಂದ ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಆಯೋಜಿಸಿದ್ದ ಯುವ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯುವಕರ ಪಾಲು ಹೆಚ್ಚಾಗಿದೆ. ಆದರೆ, ಕೆಲವು ಪಕ್ಷದಲ್ಲಿ ಯುವ ಜನತೆಗೆ ಹೆಚ್ಚಿನ ಆದ್ಯತೆ ನೀಡದೇ ಕೇವಲ ಪ್ರಚಾರಕ್ಕೆ ಮಾತ್ರ ಬಳಕೆ ಮಾಡಿಕೊಳ್ಳುತ್ತಿರುವುದು ದುರಾದೃಷ್ಟಕರ. ಜೆಡಿಎಸ್ ಪಕ್ಷದಲ್ಲಿ ಮೊದಲು ಯುವಕರಿಗೆ ಆದ್ಯತೆ ನೀಡಲಾಗುತ್ತಿದ್ದು, ಮುಂಬರುವ ವಿಧಾನಸಭಾ ಚುನಾವಣೆಗೆ ಜಿಲ್ಲೆಯ ಯುವ ಘಟಕದ ಪದಾಧಿಕಾರಿಗಳು ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಜಿಲ್ಲೆಯಲ್ಲಿ ಅಧಿಕಾರದಲ್ಲಿರುವ ಶಾಸಕರುಗಳು ೨೫ ವರ್ಷಗಳಿಂದ ಆಯ್ಕೆ ಆಗುತ್ತಿದ್ದರೂ ಕೂಡ ಇದುವರೆಗೆ ಸಚಿವ ಸ್ಥಾನ ನೀಡಿಲ್ಲ. ಕೊಡಗಿನವರಿಗೆ ರಾಷ್ಟಿçÃಯ ಪಕ್ಷಗಳು ಪ್ರಾತಿನಿಧ್ಯ ನೀಡುತ್ತಿಲ್ಲ. ಜಿಲ್ಲೆಯ ಸಮಸ್ಯೆ ಸಂಪುಟದಲ್ಲಿ ಚರ್ಚೆಯಾಗುತ್ತಿಲ್ಲ. ಇದಕ್ಕೆ ಪರಿಹಾರವಾಗಿ ಜೆಡಿಎಸ್ ಅಧಿಕಾರಕ್ಕೆ ಬರಬೇಕಿದೆ ಎಂದು ಹೇಳಿದರು.
ಯುವ ಘಟಕದ ಅಧ್ಯಕ್ಷ ಸಿ.ಎಲ್.ವಿಶ್ವ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಚುನಾವಣೆಗೆ ಅಭ್ಯರ್ಥಿ ಯಾರೇ ಆದರೂ ಸಂಘಟನೆ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು. ಪ್ರತಿಯೊಬ್ಬರು ಜಾತ್ಯತೀತವಾಗಿ ಕೆಲಸ ಮಾಡಬೇಕಾಗಿದ್ದು, ಅಗತ್ಯ ಸಹಕಾರ ನೀಡಬೇಕು ಎಂದು ಹೇಳಿದರು.
ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಇಸಾಕ್ ಖಾನ್, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಜಾಸೀರ್, ಘಟಕದ ವಕ್ತಾರರಾದ ರವಿಕಿರಣ್, ಜಿನಾಸ್, ವಿರಾಜಪೇಟೆ ತಾಲೂಕು ಅಧ್ಯಕ್ಷ ಸೈಫುದ್ಧೀನ್, ಮಡಿಕೇರಿ ತಾಲೂಕು ಅಧ್ಯಕ್ಷ ಉಮೇಶ್, ಪ್ರಮುಖರಾದ ಮೋನಿಶ್ ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.