ಅಗಸ್ಟಾ ವೆಸ್ಟ್ಲ್ಯಾಂಡ್ ಹಗರಣದ ಆರೋಪಿಗೆ ಜಾಮೀನು ತಿರಸ್ಕಾರ

ನವದೆಹಲಿ, ಫೆ. ೭: ಅಗಸ್ಟಾ ವೆಸ್ಟ್ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣದ ಆರೋಪಿ, ಬ್ರಿಟಿಷ್ ಪ್ರಜೆ ಕ್ರಿಶ್ಚಿಯನ್ ಮೈಕೆಲ್ ಜೇಮ್ಸ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಡಿಸೆಂಬರ್ ೪, ೨೦೧೮ ರಂದು ದುಬೈನಿಂದ ಬಂಧಿಸಿ ಹಸ್ತಾಂತರಿಸಲ್ಪಟ್ಟ ಕ್ರಿಶ್ಚಿಯನ್, ಅವರು ಸಿಆರ್‌ಪಿಸಿ ೪೩೬ಂ ಅನ್ನು ಒಳ ಗೊಂಡಿರುವ ಕಾರಣ ಜಾಮೀನು ನೀಡಲು ನಿರಾಕರಿಸಿದ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ. ಪರ್ದಿವಾಲಾ ಅವರ ಪೀಠ, ಆರೋಪಿಗೆ ಜಾಮೀನು ನಿರಾಕರಿಸಿದೆ. ಫೆ. ೨೦೧೦ ರಲ್ಲಿ, ಆಗಿನ ಯುಪಿಎ ಸರ್ಕಾರ ಅವಧಿಯಲ್ಲಿ ೫೫೬.೨೬೨ ಮಿಲಿ ಯನ್ ಯುರೋ ಮೌಲ್ಯದ ೧೨ ಆಗಸ್ಟಾ ವೆಸ್ಟ್ಲ್ಯಾಂಡ್ ಚಾಪರ್‌ಗಳನ್ನು ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿತ್ತು. ವಿವಿಐಪಿಗಳು ಮತ್ತು ಇತರ ಪ್ರಮುಖ ಗಣ್ಯರನ್ನು ಕರೆದೊಯ್ಯಲು ಈ ಹೆಲಿಕಾಪ್ಟರ್‌ಗಳನ್ನು ಖರೀದಿ ಸಲಾಗುತ್ತಿದೆ. ಆಗಸ್ಟಾ ವೆಸ್ಟ್ಲ್ಯಾಂಡ್‌ಗೆ ಅನುಕೂಲವಾಗುವಂತೆ ಚಾಪರ್ ವಿಶೇಷಣಗಳನ್ನು ಮೂಲ ಒಪ್ಪಂದದಿAದ ಬದಲಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಒಟ್ಟಾರೆ ಒಪ್ಪಂದವು ರೂ. ೩,೬೦೦ ಕೋಟಿ ಆಗಿದೆ.

೧೦೮ ‘ನಮ್ಮ ಕ್ಲಿನಿಕ್'ಗಳಿಗೆ ಚಾಲನೆ

ಬೆಂಗಳೂರು, ಫೆ. ೭: ಬಿಬಿಎಂಪಿ ವ್ಯಾಪ್ತಿಯಲ್ಲಿ ೧೦೮ ‘ನಮ್ಮ ಕ್ಲಿನಿಕ್'ಗಳಿಗೆ ಚಾಲನೆ ದೊರೆಯಿತು. ಬಿಬಿಎಂಪಿ ಸಹಯೋಗದಲ್ಲಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ರಾಣಿ ಅಬ್ಬಕ್ಕ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ “ನಮ್ಮ ಕ್ಲಿನಿಕ್” ಉದ್ಘಾಟಿಸಿದರು. ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಅಬಕಾರಿ ಸಚಿವ ಗೋಪಾಲಯ್ಯ ಮತ್ತಿತರರು ಉಪಸ್ಥಿತರಿದ್ದರು. ನಂತರ ಮಾತನಾಡಿದ ಮುಖ್ಯಮಂತ್ರಿ, ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಉತ್ತಮ ವೈದ್ಯಕೀಯ ಸೌಲಭ್ಯ ನೀಡುವ ಸಲುವಾಗಿ ಸರ್ಕಾರ ೧೦೮ "ನಮ್ಮ ಕ್ಲಿನಿಕ್"ಗಳನ್ನು ಆರಂಭಿಸಿದೆ. ಬರುವ ದಿನಗಳಲ್ಲಿ ನಮ್ಮ ಕ್ಲಿನಿಕ್‌ಗಳ ಸಂಖ್ಯೆಗಳನ್ನು ಹೆಚ್ಚಿಸಲಾಗುವುದು, ಎಲ್ಲರಿಗೂ ಆರೋಗ್ಯ ಎಲ್ಲೆಡೆಯೂ ಆರೋಗ್ಯ ಎಂಬುದು ನಮ್ಮ ಸರ್ಕಾರದ ಸಂಕಲ್ಪವಾಗಿದೆ ಎಂದರು. ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಡಾ. ಕೆ. ಸುಧಾಕರ್, ನಮ್ಮ ಕ್ಲಿನಿಕ್‌ಗೆ ಭೇಟಿ ನೀಡಿ, ಸಲಕರಣೆಗಳು, ಸೌಲಭ್ಯಗಳನ್ನು ವೀಕ್ಷಿಸಿದರು. ವೈದ್ಯರಿಂದ ಮಾಹಿತಿ ಪಡೆದುಕೊಂಡು ಅಗತ್ಯ, ಸಲಹೆ, ಸೂಚನೆಗಳನ್ನು ನೀಡಿದರು.

ಮೆಟ್ರೋ ಹಳಿಯಲ್ಲಿ ಬಿರುಕು

ಬೆಂಗಳೂರು, ಫೆ. ೭: ಬೆಂಗಳೂರಿನ ನಮ್ಮ ಮೆಟ್ರೋದ ನೇರಳೆ ಮಾರ್ಗದ ಮೆಟ್ರೋ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ತಡವಾಗಿ ಈ ವಿಚಾರ ಬೆಳಕಿಗೆ ಬಂದಿದೆ. ಮೆಜೆಸ್ಟಿಕ್‌ನಿಂದ ಕೆಂಗೇರಿ ಕಡೆಗೆ ಸಾಗುವ ನೇರಳೆ ಮಾರ್ಗದ ಮೈಸೂರು ರಸ್ತೆಯಲ್ಲಿ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಪಟ್ಟಣಗೆರೆ ಮೆಟ್ರೋ ನಿಲ್ದಾಣದ ಕೂಗಳತೆ ದೂರದ ಹಳಿಯಲ್ಲಿ ಬಿರುಕು ಬಿಟ್ಟಿರುವುದು ಪತ್ತೆಯಾಗಿದೆ. ಹಳಿ ಹಾಕಿದ ಮೂರು ವರ್ಷದೊಳಗೆ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿರುವುದು ಶಂಕೆಗೆ ಕಾರಣವಾಗಿದೆ. ಇನ್ನು ಹಳಿ ಬಿರುಕು ಕಾಣಿಸಿಕೊಂಡಿದ್ದನ್ನು ಮೆಟ್ರೋ ಪೈಲೆಟ್ ಹಾಗೂ ಕೆಳಮಟ್ಟದ ಸಿಬ್ಬಂದಿ ಗಮನಿಸಿದ್ದಾರೆ. ಹಳಿ ಬಿರುಕು ಹಿನ್ನೆಲೆಯಲ್ಲಿ ಹಳಿಯ ಶಬ್ದ, ವೇಗದಲ್ಲಿ ಬದಲಾವಣೆ ಆಗಿದೆ. ಮೆಟ್ರೋ ಲೈನ್‌ನ ಟ್ರ‍್ಯಾಕ್‌ನಲ್ಲಿ ಬಿರುಕು ಬಿಟ್ಟುಕೊಂಡಿದ್ದು, ಅದನ್ನು ಸಾರ್ವಜನಿಕರ ಗಮನಕ್ಕೆ ತರದೇ ಬೆಂಗಳೂರು ಮೆಟ್ರೋ ರೇಲ್ ಕಾರ್ಪೋರೇಷನ್ ಲಿ. (ಬಿಎಂಆರ್‌ಸಿಎಲ್) ದುರಸ್ತಿ ಮಾಡಿದೆ. ಇನ್ನು ಇದೇ ಟ್ರಾö್ಯಕ್‌ನಲ್ಲಿ ಮೆಟ್ರೋ ರೈಲು ಸಂಚಾರ ಮಾಡಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು ಎಂದು ನಿಗಮದ ಸಿಬ್ಬಂದಿ ತಿಳಿಸಿದ್ದಾರೆ.

ಕಾಶ್ಮೀರಿ ಯುವತಿಯರ ಮೇಲೆ ಅತ್ಯಾಚಾರ ಯತ್ನ

ಬೆಂಗಳೂರು, ಫೆ. ೭: ಕುಡಿದ ನಶೆಯಲ್ಲಿ ಸ್ನೇಹಿತೆಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಇಬ್ಬರನ್ನು ವಿವೇಕನಗರ ಪೊಲೀಸರು ಬಂಧಿಸಿದ್ದಾರೆ. ಪಾರ್ಟಿ ನೆಪದಲ್ಲಿ ಕಾಶ್ಮೀರಿ ಮೂಲದ ಸ್ನೇಹಿತೆಯರನ್ನು ಕರೆಸಿಕೊಂಡಿದ್ದ ವಿಶಾಖಪಟ್ಟಣಂ ಮೂಲದ ಅಜಯ್ ಹಾಗೂ ಆತನ ಸ್ನೇಹಿತ ಆದಿತ್ಯ ಎಂಬಾತ ಯುವತಿಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿಯರು ಹಾಗೂ ಆರೋಪಿಗಳು ಒಂದೇ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿದ್ದರು. ವಿದ್ಯಾಬ್ಯಾಸ ಮುಗಿದ ನಂತರ ಕಾಶ್ಮೀರಿ ಯುವತಿಯರು ಬೆಂಗಳೂರಿನ ಖಾಸಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಬೆಂಗಳೂರಿಗೆ ಬಂದಾಗಲೆಲ್ಲಾ ಅಜಯ್ ಯುವತಿಯರ ಜೊತೆ ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ. ಇನ್ನು ಕುಡಿದ ನಶೆಯಲ್ಲಿ ಅಜಯ್ ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದಕ್ಕೆ ಆದಿತ್ಯ ಸಹಕಾರ ನೀಡಿದ್ದ ಎನ್ನಲಾಗಿದೆ. ಇನ್ನು ಈ ಸಂಬAಧ ಪೊಲೀಸರು ಯುವತಿಯರು ಪೊಲೀಸರಿಗೆ ದೂರು ನೀಡಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಸಾಲಗಾರರ ಕಾಟಕ್ಕೆ ಬೇಸತ್ತು ವೀಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ

ಬೆಂಗಳೂರು, ಫೆ. ೭: ಸಾಲಗಾರರ ಕಿರುಕುಳದಿಂದ ಬೇಸತ್ತ ೩೪ ವರ್ಷದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ಕಗ್ಗಲೀಪುರದ ಬನ್ನೇರುಘಟ್ಟ ರಸ್ತೆ ನಿವಾಸಿ ಶಿವರಾಜ್ ಅಲಿಯಾಸ್ ಅಪ್ಪಿ ಎಂದು ಗುರುತಿಸಲಾಗಿದ್ದು, ಸಲೂನ್ ನಡೆಸುತ್ತಿದ್ದರು. ಶಿವರಾಜ್ ಅವರ ಸ್ನೇಹಿತ ರೇಣುಕಾರಾಧ್ಯ ಅವರು ಧನು ಅವರಿಂದ ೩೦,೦೦೦ ರೂಪಾಯಿ ಸಾಲ ಪಡೆದಿದ್ದರು ಮತ್ತು ವೆಂಕಟೇಶ್ ಮತ್ತು ಶಿವರಾಜ್ ಅದಕ್ಕೆ ಶ್ಯೂರಿಟಿ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ರೇಣುಕಾರಾಧ್ಯ ಸಾಲದ ಹಣವನ್ನು ಮರುಪಾವತಿ ಮಾಡದಿದ್ದಾಗ, ಸಾಲ ನೀಡಿದವರು ಶಿವರಾಜ್ ನಿಂದ ಹಲವಾರು ಸಾವಿರ ರೂಪಾಯಿ ಬಡ್ಡಿ ತೆಗೆದುಕೊಂಡಿದ್ದರೂ ಕಿರುಕುಳ ನೀಡಲು ಪ್ರಾರಂಭಿಸಿದರು ಮತ್ತು ಅವರ ಬೈಕ್‌ಅನ್ನು ವಶಪಡಿಸಿಕೊಂಡಿದ್ದರು. ಸಾಲಗಾರರ ಕಿರುಕುಳವನ್ನು ಸಹಿಸಲಾಗದ ಶಿವರಾಜ್ ಅವರು ತಮ್ಮ ಸಾವಿಗೆ ಸಾಲ ಕೊಟ್ಟವರು ಮತ್ತು ರೇಣುಕಾರಾಧ್ಯ ಅವರನ್ನು ಹೊಣೆಗಾರರನ್ನಾಗಿ ಮಾಡುವ ವೀಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ತಮ್ಮ ನಿವಾಸದಲ್ಲಿ ನೇಣು ಹಾಕಿಕೊಳ್ಳುವ ಮೊದಲು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಧನು, ವೆಂಕಟೇಶ್ ಮತ್ತು ರೇಣುಕಾರಾಧ್ಯ ಅವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಎಟಿಎಂಗೆ ತುಂಬಬೇಕಿದ್ದ ರೂ. ೧.೩ ಕೋಟಿ ಹಣದೊಂದಿಗೆ ಪರಾರಿ

ಬೆಂಗಳೂರು, ಫೆ. ೭: ಎಟಿಎಂ ಯಂತ್ರಕ್ಕೆ ತುಂಬಬೇಕಿದ್ದ ೧.೦೩ ಕೋಟಿ ರೂಪಾಯಿ ಹಣದೊಂದಿಗೆ ಪರಾರಿಯಾಗಿರುವ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಬೆಂಗಳೂರು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಆರೋಪಿಯನ್ನು ಉತ್ತರ ಕನ್ನಡ ಜಿಲ್ಲೆಯ ಚಿನ್ನಮ್ಮ ಲೇಔಟ್ ನಿವಾಸಿ ರಾಜೇಶ್ ಮೇಸ್ತ ಎಂದು ಗುರುತಿಸಲಾಗಿದೆ. ಖಾಸಗಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಪತ್ನಿ ಸಮೇತ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಲಿಮಿಟೆಡ್‌ನಲ್ಲಿ ಕೆಲಸ ಮಾಡುತ್ತಿದ್ದರು. ಬ್ಯಾಂಕ್‌ಗಳಿAದ ಹಣವನ್ನು ಸಂಗ್ರಹಿಸಿ ಎಟಿಎಂಗೆ ಜಮಾ ಮಾಡುವ ಒಪ್ಪಂದವನ್ನು ಏಜೆನ್ಸಿ ಹೊಂದಿದೆ. ಆರೋಪಿ ರಾಜೇಶ್ ಮೇಸ್ತಾ ಅದಕ್ಕೆ ಪ್ರಭಾರಿಯಾಗಿದ್ದ. ೨೦೨೨ರ ಡಿಸೆಂಬರ್ ೨೮ ರಿಂದ ಬಿಟಿಎಂ ಲೇಔಟ್, ಕೋರಮಂಗಲ ಮತ್ತು ಬನ್ನೇರುಘಟ್ಟ ರಸ್ತೆಯ ಎಟಿಎಂಗಳಿಗೆ ಹಣವನ್ನು ತುಂಬುವ ಜವಾಬ್ದಾರಿಯನ್ನು ಅವರು ಹೊಂದಿದ್ದರು. ಆರೋಪಿಗಳು ಫೆಬ್ರವರಿ ೧ ರಿಂದ ಕಚೇರಿಗೆ ತಿಳಿಸದೆ ಗೈರು ಹಾಜರಾಗಿದ್ದರು. ಅವರ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಕಚೇರಿಯಲ್ಲಿ ಅನುಮಾನ ಮೂಡಿತು. ಎಟಿಎಂಗಳಲ್ಲಿ ತುಂಬಲಾದ ಹಣದ ಖಾತೆಗಳನ್ನು ಪರಿಶೀಲಿಸಿದಾಗ ಅವರು ೧.೦೩ ಕೋಟಿ ರೂಪಾಯಿಗಳನ್ನು ಸ್ವತಃ ತೆಗೆದುಕೊಂಡು ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬAಧ ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಏಜೆನ್ಸಿಯ ಉಪನಿರ್ದೇಶಕ ಎಸ್.ಎ. ರಾಘವೇಂದ್ರ ಅವರು ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ.