ಟರ್ಕಿ/ಸಿರಿಯಾ, ಫೆ. ೬: ಏಷಿಯಾ - ಯೂರೋಪ್ ಖಂಡದ ಗಡಿಯಲ್ಲಿನ ಏಷಿಯಾಗೆ ಸೇರಿರುವ ಟರ್ಕಿ ಹಾಗೂ ಅದರ ನೆರೆಯ ಸಿರಿಯಾ ರಾಷ್ಟçದಲ್ಲಿ ಭಾರೀ ಭೂಕಂಪನದ ಪರಿಣಾಮ ಸುಮಾರು ೨೩೦೦ ಮಂದಿ ಮೃತರಾಗಿದ್ದು, ೨,೦೦೦ ಕ್ಕೂ ಅಧಿಕ ಕಟ್ಟಡಗಳು ನೆಲಸಮಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ನೂರಾರು ಮಂದಿ ಇನ್ನೂ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಗಳಿವೆ.

ತಾ.೬ ರ ಬೆಳಿಗ್ಗೆ ಸುಮಾರು ೪:೧೭ಕ್ಕೆ ರಿಕ್ಟರ್ ಮಾಪಕದಲ್ಲಿ ೭.೮ ಮ್ಯಾಗ್ನಿಟ್ಯೂಡ್ ಭೂಕಂಪನ ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದರೆ, ಇದಾದ ಕೆಲವೇ ಗಂಟೆಗಳಲ್ಲಿ ೭.೭ ಮ್ಯಾಗ್ನಿಟ್ಯೂಡ್ ಭೂಕಂಪನ ದಕ್ಷಿಣ ಟರ್ಕಿಯಲ್ಲಿ ಸಂಭವಿಸಿದ್ದು ಕಳೆದ ಶತಮಾನದಲ್ಲಿಯೇ ಈ ಭಾಗದಲ್ಲಿ ಸಂಭವಿಸಿದ ಭೂಕಂಪನಗಳ ಪೈಕಿ ಇದು ಗರಿಷ್ಠ ಪ್ರಮಾಣದ ಭೂಕಂಪವಾಗಿದೆ.

ಮೊದಲ ಕಂಪನದ ಕೇಂದ್ರ ಬಿಂದು ಟರ್ಕಿ ರಾಷ್ಟçದ ಗಾಜಿಯಾನ್‌ಟೆಪ್ ಎಂದು ಗುರುತಿಸಲಾಗಿದೆ. ಸಿರಿಯಾ-ಟರ್ಕಿ ಗಡಿಯಿಂದ ಸುಮಾರು ೯೦ ಕಿ.ಮಿ ದೂರದಲ್ಲಿರುವ ಸಿರಿಯಾ ಯುದ್ಧ ಸಂತ್ರಸ್ತರಾಗಿರುವ ಲಕ್ಷಾಂತರ ಮಂದಿಗೆ ಆಶ್ರಯ ನೀಡುತ್ತಿರುವ ಈ ಸ್ಥಳದಲ್ಲಿ

(ಮೊದಲ ಪುಟದಿಂದ) ಸಂಭವಿಸಿದ ಭೂಕಂಪನ ಆಫ್ರಿಕಾದ ಈಜಿಪ್ಟ್ವರೆಗೂ ಪರಿಣಾಮ ಬೀರಿದೆ. ಎರಡನೆಯ ಕಂಪನದ ಕೇಂದ್ರ ಬಿಂದು ದಕ್ಷಿಣ ಟರ್ಕಿಯ ಖಹ್ರಮನಮರಾಸ್ ಎಂಬ ಸ್ಥಳದಿಂದ ೬೭ ಕಿ.ಮೀ ದೂರದಲ್ಲಿ ಸುಮಾರು ೨.ಕಿಮೀ ಆಳದಲ್ಲಿ ಎಂದು ಅಂದಾಜಿಸಲಾಗಿದೆ.

ಟರ್ಕಿ ಅಧಿಕೃತವಾಗಿ ಘೋಷಣೆ ಮಾಡಿರುವ ಮಾಹಿತಿ ಪ್ರಕಾರ ೧,೪೯೮ ಮಂದಿ ಸಾವನ್ನಪ್ಪಿದ್ದು, ೭,೬೦೦ ಮಂದಿಗೆ ಗಾಯಗಳಾಗಿವೆ. ೨,೮೧೮ ಕಟ್ಟಡಗಳು ನೆಲಸಮಗೊಂಡಿವೆ. ಸಿರಿಯಾ ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ ಅಲ್ಲಿ ೪೩೦ ಮಂದಿ ಮೃತಪಟ್ಟಿದ್ದು, ೧,೨೮೦ ಮಂದಿ ಗಾಯಗೊಂಡಿದ್ದಾರೆ. ಇದಲ್ಲದೆ ಸಿರಿಯಾದ ಸರಕಾರದ ಆಡಳಿತವಿಲ್ಲದ, ಐಸಿಸ್ ಆಡಳಿತ ಪ್ರದೇಶದಲ್ಲಿ ಸುಮಾರು ೩೮೦ ಮಂದಿ ಬಲಿಯಾಗಿರುವುದಾಗಿ ತಿಳಿದುಬಂದಿದ್ದು, ಒಟ್ಟು ೨,೩೦೦ ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಟರ್ಕಿ ರಕ್ಷಣಾ ಪಡೆಯು ಟರ್ಕಿಯ ಮೇಲೆ ಯಾವುದೇ ಖಾಸಗಿ ವಿಮಾನ ಹಾರದಂತೆ ನಿಷೇಧಾಜ್ಞೆ ಹೊರಡಿಸಿದ್ದು, ರಕ್ಷಣೆ ಕಾರ್ಯಾಚರಣೆಯಲ್ಲಿ ತೊಡಗಿದೆ. ಯೂರೋಪಿಯನ್ ಯೂನಿಯನ್‌ಗೆ ಸೇರಿರುವ ೧೦ ರಾಷ್ಟçಗಳಲ್ಲದೆ ಉಳಿದ ರಾಷ್ಟçಗಳಾದ ಬ್ರಿಟನ್, ಅಮೇರಿಕಾ, ಇಸ್ರೇಲ್, ರಷ್ಯಾ ಹಾಗೂ ಚೈನಾ ದೇಶಗಳು ಭೂಕಂಪನ ಪೀಡಿತ ದೇಶಗಳಿಗೆ ನೆರವಿಗೆ ಮುಂದಾಗಿವೆ. ಇದರೊಂದಿಗೆ ಭಾರತದಿಂದ ರಕ್ಷಣಾ ತಂಡ, ಪರಿಹಾರ, ಔಷಧೀಯ ತಂಡಗಳನ್ನು ಟರ್ಕಿಗೆ ಕಳುಹಿಸುವುದಾಗಿ ಪ್ರಧಾನಿ ಮೋದಿ ಅವರು ಭರವಸೆ ನೀಡಿದ್ದಾರೆ.