ಸೋಮವಾರಪೇಟೆ, ಫೆ. ೬: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಜಲಜೀವನ್ ಮಿಷನ್ ಯೋಜನೆಯಡಿ ಶಾಂತಳ್ಳಿ ಗ್ರಾ.ಪಂ.ನ ಅನೇಕ ಗ್ರಾಮಗಳು ಸೇರಿದಂತೆ ಗೌಡಳ್ಳಿ ಗ್ರಾ.ಪಂ.ನ ಶುಂಠಿ ಗ್ರಾಮದಲ್ಲಿ ಅಸಮರ್ಪಕ ಕಾಮಗಾರಿ ನಡೆಸಲಾಗಿದ್ದು, ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾ ಪಂಚಾಯತ್ ಇಂಜಿನಿಯರಿAಗ್ ವಿಭಾಗದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರಗ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಪೈಪ್‌ಲೈನ್ ಅಳವಡಿಸಿ ೨ ವರ್ಷ ಕಳೆದರೂ ಈವರೆಗೆ ನೀರಿನ ವ್ಯವಸ್ಥೆಯಾಗಿಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಿಸುವಂತಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದ ಕಾಮಗಾರಿಯಲ್ಲಿ ಅವ್ಯವಹಾರವಾಗಿದೆ ಎಂದು ಶರಣ್ ಗೌಡ, ಡಾಲಿ ಪ್ರಕಾಶ್ ಸೇರಿದಂತೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ತಲ್ತರೆಶೆಟ್ಟಳ್ಳಿಯ ಹಳೆಯೂರು ಗ್ರೂಪ್‌ನಲ್ಲಿ ಹೊಳೆಯ ನೀರು ಕುಡಿಯುವ ಪರಿಸ್ಥಿತಿ ಬಂದೊದಗಿದೆ.
ತಲ್ತರೆಶೆಟ್ಟಳ್ಳಿಯ ಉದ್ರಳ್ಳಿಯಲ್ಲೂ ಇದೇ ಪರಿಸ್ಥಿತಿ ಬಂದಿದೆ. ಕಳೆದ ೨ ವರ್ಷಗಳಿಂದ ಮನವಿ ಮಾಡುತ್ತಾ ಬಂದಿದ್ದರೂ ಈವರೆಗೆ ಕ್ರಮವಹಿಸಿಲ್ಲ. ಅಳವಡಿಸಿರುವ ಪೈಪ್‌ಲೈನ್ ಕಾಮಗಾರಿಯೂ ಕಳಪೆಯಾಗಿದೆ. ಟ್ಯಾಂಕ್‌ಗೆ ನೀರು ಹತ್ತುತ್ತಿಲ್ಲ ಎಂದು ಬಗ್ಗನ ಅನಿಲ್‌ಕುಮಾರ್, ಡಾಲಿ ಪ್ರಕಾಶ್, ಜೀವನ್, ಸುಖಾಂತ್, ರವಿ, ಚನ್ನಕೇಶವ ಅವರುಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಗೌಡಳ್ಳಿಯ ಶುಂಠಿ ಗ್ರಾಮದಲ್ಲಿ ನಿರ್ಮಿಸಿರುವ ನೀರಿನ ಟ್ಯಾಂಕ್‌ನಲ್ಲಿ ಈಗಲೇ ನೀರು ಸೋರಿಕೆಯಾಗುತ್ತಿದೆ. ಕಾಮಗಾರಿ ನಡೆಯುವ ಸಂದರ್ಭ ಯಾವೊಬ್ಬ ಅಭಿಯಂತರರೂ ಭೇಟಿ ನೀಡಿ ಪರಿಶೀಲಿಸಿಲ್ಲ. ಸೋರಿಕೆಯಾಗುತ್ತಿರುವ ಟ್ಯಾಂಕ್‌ನ್ನು ಒಡೆದು ಹಾಕಿ ನೂತನ ಟ್ಯಾಂಕ್ ನಿರ್ಮಿಸಬೇಕು. ಕಾಮಗಾರಿ ನಡೆಸಿದ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಗ್ರಾಮಸ್ಥರಾದ ಚರಣ್ ಸೇರಿದಂತೆ ಇತರರು ಆಗ್ರಹಿಸಿದರು.
ಹರಗ, ತಲ್ತರೆಶೆಟ್ಟಳ್ಳಿಯ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗ್ರಾಮಸಭೆಯಲ್ಲಿ ಪ್ರಸ್ತಾಪಿಸಿದರೆ ಸೆಸ್ಕ್ಗೆ ಹಣ ಕಟ್ಟಬೇಕೆಂದು ಮಾಹಿತಿ ನೀಡಿದ್ದಾರೆ. ಗುತ್ತಿಗೆದಾರರು ಹಣ ಕಟ್ಟದೇ ನಮಗೆ ಕುಡಿಯುವ ನೀರು ಸರಬರಾಜು ಆಗುವುದಿಲ್ಲ. ಕಾಮಗಾರಿಯ ಬಹುತೇಕ ಬಿಲ್ ಪಾವತಿಸಲಾಗಿದ್ದರೂ ಹಣ ಕಟ್ಟದೇ ಇರುವುದು ಯಾಕೆ? ಎಂದು ಪ್ರಶ್ನಿಸಿದರು.
ಗ್ರಾಮಸ್ಥರ ಅಹವಾಲು ಮತ್ತು ಆಕ್ರೋಶದ ಮಾತುಗಳನ್ನು ಆಲಿಸಿದ ನಂತರ ಪ್ರತಿಕ್ರಿಯೆ ನೀಡಿದ ಜಿ.ಪಂ. ಕಾರ್ಯಪಾಲಕ ಅಭಿಯಂತರ ದೇವಾನಂದ್ ಅವರು, ಜಲಜೀವನ್ ಮಿಷನ್ ಯೋಜನೆಯಡಿ ಸಮಸ್ಯೆಗಳು ಬಂದಿರುವ ಕಡೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಶುಂಠಿ ಗ್ರಾಮದ ಟ್ಯಾಂಕ್‌ಗೆ ನೀರು ತುಂಬಿಸಿ ಸೋರಿಕೆ ಕಂಡುಬAದರೆ ಟ್ಯಾಂಕ್‌ನ್ನು ಒಡೆದು ನೂತನ ಟ್ಯಾಂಕ್ ನಿರ್ಮಿಸಲು ಕ್ರಮ ವಹಿಸಲಾಗುವುದು. ಹರಗ, ತಲ್ತರೆಶೆಟ್ಟಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಕಾಮಗಾರಿಯನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಮುಂದಿನ ೧೦ ದಿನಗಳ ಒಳಗೆ ಹರಗದ ನೀರಿನ ಸಮಸ್ಯೆ ಬಗೆಹರಿಸಲಾಗುವುದು. ೩ ದಿನದೊಳಗೆ ಹಳೆಯೂರು ಗ್ರಾಮದ ಮನೆಗಳಿಗೆ ನೀರಿನ ಸೌಕರ್ಯ ಕಲ್ಪಿಸಲಾಗುವುದು ಎಂದು ದೇವಾನಂದ್ ಅವರು ಭರವಸೆ ನೀಡಿದ ನಂತರ ಗ್ರಾಮಸ್ಥರು ಸಮಾಧಾನಗೊಂಡರು.