ಕುಶಾಲನಗರ, ಫೆ. ೬: ರೋಟರಿ ಜಿಲ್ಲೆ ೩೧೮೧ ವಲಯ ೬ರ ಮೂಲಕ ಈ ಸಾಲಿನಲ್ಲಿ ಜಲಮೂಲ, ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ಕಲ್ಪಿಸಲಾಗಿದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ಪ್ರಕಾಶ್‌ಕಾರಂತ್ ತಿಳಿಸಿದ್ದಾರೆ.
ಅವರು, ಕುಶಾಲನಗರ ರೋಟರಿಗೆ ಅಧಿಕೃತ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ವಿದ್ಯಾಸಿರಿ, ಆರೋಗ್ಯ ಸಿರಿ ಕಾರ್ಯಕ್ರಮಗಳು ನಡೆದಿದ್ದು, ಇದೀಗ ಜಲಸಿರಿ, ವನಸಿರಿ ಎಂಬ ಹೆಸರಿನ ಜಿಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕ ಜಾಗಗಳಲ್ಲಿ ಹೊಸ ತಾಂತ್ರಿಕತೆಯೊAದಿಗೆ ಹೆಚ್ಚು ಹಣ್ಣಿನ ಫಲ ನೀಡುವ ಗಿಡಗಳನ್ನು ಬೆಳೆಸಲಾಗುವುದು. ಆ ಮೂಲಕ ಪ್ರಾಣಿ, ಪಕ್ಷಿಗಳಿಗೆ ಆವಾಸಸ್ಥಾನ ಕಲ್ಪಿಸಲಾಗುವುದು ಎಂದರು.
ಜಲಸಿರಿ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಶುದ್ಧಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಪ್ರಾಮುಖ್ಯತೆ ನೀಡಲಾಗುವುದು. ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ಲಾಭಾಂಶದ ಒಂದು ಭಾಗ ಪಡೆದು ಕೆಲವೆಡೆ ಕೆರೆ ಅಭಿವೃದ್ಧಿ, ಚೆಕ್‌ಡ್ಯಾಂ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ನದಿ ನೀರು ಕಲುಷಿತವಾಗದಂತೆ ಜಾಗೃತಿ ಮೂಡಿಸುವುದು. ಜನರ ಹೃದಯದಿಂದ ಬದಲಾವಣೆ ಆದಲ್ಲಿ ಮಾತ್ರ ಇಂತಹ ಸಮಸ್ಯೆಗಳಿಗೆ ಪರಿಹಾರ ತರಲು ಸಾಧ್ಯ ಎಂದರು.
ರೋಟರಿ ಸಂಸ್ಥೆಗಳ ಮೂಲಕ ಕೆಲಸ ಕಾರ್ಯಗಳನ್ನು ಮಾಡಿ ಜನರನ್ನು ಪ್ರೇರೇಪಿಸುವುದು ಸಂಸ್ಥೆಯ ಉದ್ದೇಶವಾಗಿದೆ ಎಂದ ಪ್ರಕಾಶ್‌ಕಾರಂತ್, ಪ್ರತಿಯೊಬ್ಬರಿಗೂ ಕಾರ್ಯಕ್ರಮಗಳ ಅಗತ್ಯತೆಯ ಬಗ್ಗೆ ಅರಿವು ಮೂಡಬೇಕು ಎಂದರು. ಕೊಡಗು ಜಿಲ್ಲೆಯಲ್ಲಿ ರೋಟರಿ ಸಂಸ್ಥೆಯ ಮೂಲಕ ಹಲವಾರು ಕಾರ್ಯಕ್ರಮಗಳು ನಡೆಯುತ್ತಿದ್ದು, ಇದರ ಸದುಪಯೋಗವನ್ನು ಅರ್ಹ ಫಲಾನುಭವಿಗಳು ಪಡೆಯಬೇಕಿದೆ ಎಂದರು.
ಸಹಾಯಕ ರಾಜ್ಯಪಾಲ ಎಸ್.ಕೆ. ಸತೀಶ್ ಮಾತನಾಡಿ, ಕುಶಾಲನಗರದಲ್ಲಿ ರೋಟರಿ ಸಂಸ್ಥೆಯ ಮೂಲಕ ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರ ಅಳವಡಿಸಲು ಯೋಜನೆ ರೂಪಿತಗೊಂಡಿದೆ. ಬೆಂಗಳೂರು ರೋಟರಿ ಸೌತ್‌ಕ್ಲಬ್‌ನ ಸಹಯೋಗದೊಂದಿಗೆ ಈ ಯೋಜನೆ ನಿರ್ಮಾಣಗೊಳ್ಳಲಿದೆ ಎಂದರು.
ಈ ಸಂದರ್ಭ ವಲಯ ಅಧ್ಯಕ್ಷ ಲಿಖಿತ್, ಕುಶಾಲನಗರ ರೋಟರಿ ಅಧ್ಯಕ್ಷ ಉಲ್ಲಾಸ್ ಕೃಷ್ಣ ಇದ್ದರು.