ಗೋಣಿಕೊಪ್ಪಲು, ಫೆ. ೬: ಕಾಡಾನೆಯೊಂದು ಕಾಫಿ ತೋಟದಿಂದ ಅರಣ್ಯ ಪ್ರದೇಶಕ್ಕೆ ವಾಪಸ್ಸಾಗುವ ವೇಳೆ ರಸ್ತೆ ಬದಿಯಲ್ಲಿ ಪ್ರಯಾಣಿಕರಿಗೆ ಎದುರು ನೋಡುತ್ತಿದ್ದ ಆಟೋರಿಕ್ಷಾದ ಮೇಲೆ ದಾಳಿ ಮಾಡಿದ ಘಟನೆ ಮತ್ತಿಗೋಡು ಅರಣ್ಯ ವ್ಯಾಪ್ತಿಯ ತಿತಿಮತಿ ಬಳಿಯ ಕಲ್ಲಳ್ಳ ಎಂಬಲ್ಲಿ ನಡೆದಿದೆ. ಕಾಡಾನೆ ದಾಳಿ ವೇಳೆ ಆಟೋ ರಿಕ್ಷಾದಲ್ಲಿದ್ದ ಚಾಲಕ ಕಿರಣ್‌ನ ಕಾಲಿಗೆ ಗಂಭೀರ ಗಾಯವಾಗಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಆಟೋರಿಕ್ಷಾವೂ ಕಾಡಾನೆ ದಾಳಿಗೆ ಸಂಪೂರ್ಣ ಜಖಂಗೊAಡಿದೆ.

ಸೋಮವಾರ ಮುಂಜಾನೆ ೧೦.೩೦ರ ಸುಮಾರಿಗೆ ತಿತಿಮತಿ ಬಳಿಯ ಕಲ್ಲಳ್ಳ ಗ್ರಾಮದ ಕಿರಣ್ ತಮ್ಮ ಆಟೋ ರಿಕ್ಷಾವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿಕೊಂಡು ಪ್ರಯಾಣಿಕರಿಗಾಗಿ ಎದುರು ನೋಡುತ್ತಿದ್ದ ಈ ವೇಳೆ ಸಮೀಪದ ಕಾಫಿ ತೋಟದಿಂದ ಕಾಡಾನೆಯೊಂದು ದಿಢೀರನೆ ರಸ್ತೆಗಿಳಿದು ಆಟೋರಿಕ್ಷಾದ ಮೇಲೆ ದಾಳಿ ನಡೆಸಿದೆ.

ಈ ವೇಳೆ ಆಟೋ ಬಳಿಯಿದ್ದ ಚಾಲಕ ಕಿರಣ್ ತನ್ನನ್ನು ರಕ್ಷಣೆ ಮಾಡಿಕೊಳ್ಳಲು ಆಟೋರಿಕ್ಷಾದ ಒಳಗೆ ಕುಳಿತುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಗಾಬರಿಗೊಂಡಿದ್ದ ಕಾಡಾನೆಯು ಆಟೋ ರಿಕ್ಷಾವನ್ನು ಮಗುಚಿ ಕ್ಷಣಾರ್ಧದಲ್ಲಿ ಸಮೀಪದ ಅರಣ್ಯದತ್ತ ತೆರಳಿದೆ. ಆಟೋ ಚಾಲಕ ಕಿರಣ್ ಜೋರಾಗಿ ಕಿರುಚಿಕೊಂಡ ಹಿನ್ನೆಲೆ ಕಾಡಾನೆಯು ಭಯಗೊಂಡು ಅರಣ್ಯಕ್ಕೆ ಸೇರಿಕೊಂಡಿದೆ. ಕಿರಣ್ ಕಾಲಿಗೆ ಗಂಭೀರವಾದ ಪೆಟ್ಟಾಗಿದ್ದು ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಸುದ್ದಿ ತಿಳಿದ ಮತ್ತಿಗೋಡು ಅರಣ್ಯ ವ್ಯಾಪ್ತಿಯ ಆರ್‌ಎಫ್‌ಒ ದಿಲೀಪ್, ತಿತಿಮತಿ ವಲಯದ ಆರ್‌ಎಫ್‌ಓ ಅಶೋಕ್ ಹುನಗುಂದ, ಡಿಆರ್‌ಎಫ್‌ಒಗಳಾದ ಉಮಾಶಂಕರ್, ಹಾಲೇಶ್, ವಿನೋದ್ ಸೇರಿದಂತೆ ಅನೇಕ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಚಾಲಕ ಕಿರಣ್‌ನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಆಟೋರಿಕ್ಷಾ ಚಾಲಕನ ಕಾಲಿನ ಭಾಗಕ್ಕೆ ಪೆಟ್ಟಾಗಿದ್ದು ಚಿಕಿತ್ಸೆ ಮುಂದುವರೆಸಲಾಗುತ್ತಿದೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು ಜನಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ತೋಟದಲ್ಲಿ ಕಾಡಾನೆಗಳು ಬೀಡು ಬಿಟ್ಟಿವೆ. ಹೊತ್ತಿಲ್ಲದ ಹೊತ್ತಿನಲ್ಲಿ ಕಾಡಾನೆಗಳು ರಸ್ತೆಗಿಳಿಯುತ್ತಿವೆ. ಈ ಭಾಗದಲ್ಲಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.