ಮಡಿಕೇರಿ,ಫೆ.೬: ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್ ವತಿಯಿಂದ ವರ್ಷಂಪ್ರತಿ ಏರ್ಪಡಿಸಿಕೊಂಡು ಬರಲಾಗುತ್ತಿರುವ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿ ಮಾರ್ಚ್ ೪ರಿಂದ ೧೨ರವರೆಗೆ ನಾಪೋಕ್ಲು ಬಳಿಯ ಚೆರಿಯಪರಂಬುವಿನ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸ್ಪೋರ್ಟ್ಸ್ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಆದಂ ಕುಶಾಲನಗರ; ೧೯ನೇ ವರ್ಷದ ಕ್ರಿಕೆಟ್ ಪಂದ್ಯಾವಳಿ ಇದಾಗಿದ್ದು, ಈ ಬಾರಿ ಹೊದವಾಡದ ಒಯಸಿಸ್ ಅರ್ಟ್ಸ್ ಅಂಡ್ ಸ್ಪೋರ್ಟ್ಸ್ ಕ್ಲಬ್ನ ಆಶ್ರಯದಲ್ಲಿ ನಡೆಯಲಿದೆ. ಸುಮಾರು ೧೫೦ಕ್ಕೂ ಹೆಚ್ಚು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಕಳೆದ ೧೮ ವರ್ಷಗಳಿಂದ ಪಂದ್ಯಾವಳಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಇತರ ಕ್ರಿಡಾಕೂಟಗಳಿಗೆ ಸರಕಾರದಿಂದ ಅನುದಾನ ನೀಡಲಾಗುತ್ತಿದ್ದು, ಮುಸ್ಲಿಂ ಕ್ರೀಡಾಕೂಟಕ್ಕೂ ಅನುದಾನ ಒದಗಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಯಾವದೇ ಸ್ಪಂದನ ದೊರೆತ್ತಿಲ್ಲ. ನಮ್ಮ ಕ್ರಿಡಾಕೂಟಕ್ಕೂ ಕೂಡ ಅನುದಾನ ಒದಗಿಸುವಂತೆ ಇದೇ ಸಂದರ್ಭದಲ್ಲಿ ಸರಕಾರವನ್ನು ಆಗ್ರಹಿಸಿದರು.
ಗೌರವ ಕಾರ್ಯದರ್ಶಿ ಅಬ್ದುಲ್ ರಶೀದ್ ಮಾತನಾಡಿ; ಕ್ರಿಡಾಕೂಟದಲ್ಲಿ ರಾಜ್ಯ-ರಾಷ್ಟçಮಟ್ಟದ ಆಟಗಾರರು ಸೇರಿದಂತೆ ರಾಜ್ಯ ನಾಯಕರುಗಳು ಭಾಗವಹಿಸಲಿದ್ದಾರೆ. ಅಲ್ಲದೆ, ಸಮುದಾಯದಲ್ಲಿ ಸಾಧನೆ ಮಾಡಿದವರನ್ನು ಇದೇ ಸಂದರ್ಭದಲ್ಲಿ ಸನ್ಮಾನ ಮಾಡಲಾಗುವದೆಂದು ತಿಳಿಸಿದರು.
ಒಯಸಿಸ್ ಟ್ರಸ್ಟ್ನ ಕಾರ್ಯದರ್ಶಿ ಶಿಯಾಬುದ್ದಿನ್ ಮಾತನಾಡಿ; ಈಗಾಗಲೇ ೮೦ ತಂಡಗಳು ನೋಂದಾಯಿಸಿ ಕೊಂಡಿವೆ. ಪಂದ್ಯಾಟದಲ್ಲಿ ವಿಜೇತರಾಗುವ ತಂಡಕ್ಕೆ ರೂ. ೬೬,೬೬೬ ನಗದು, ದ್ವಿತೀಯ ಸ್ಥಾನಕ್ಕೆ ರೂ.೩೩,೩೩೩, ತೃತೀಯ ಸ್ಥಾನ ಪಡೆದವರಿಗೆ ೨೨,೨೨೨, ನಾಲ್ಕನೇ ಸ್ಥಾನಕ್ಕೆ ರೂ.೧೧,೧೧೧ ನಗದು ಹಾಗೂ ಟ್ರೋಫಿ ನೀಡಲಾಗುವದೆಂದು ಮಾಹಿತಿ ನೀಡಿದರು.
(ಮೊದಲ ಪುಟದಿಂದ) ತಂಡದ ನೋಂದಣಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊ.೯೮೪೫೨೫೫೦೩೫, ೮೦೮೮೦೬೧೫೪೯ ಸಂಪರ್ಕಿ ಸಬಹುದೆಂದು ಆಯೋಜಕರು ತಿಳಿಸಿದರು. ಇದೇ ಸಂದರ್ಭದಲ್ಲಿ ಕ್ರೀಡಾಕೂಟದ ಧ್ವಜವನ್ನು ಒಯಸಿಸ್ ಟ್ರಸ್ಟ್ನ ಪದಾಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಗೋಷ್ಠಿಯಲ್ಲಿ ಸ್ಪೋರ್ಟ್ಸ್ ಟ್ರಸ್ಟ್ನ ಅಧ್ಯಕ್ಷ ಅಬ್ದುಲ್ ಕಾದರ್, ಉಪಾಧ್ಯಕ್ಷ ಷರ್ಪುದ್ದಿನ್, ಒಯಸಿಸ್ನ ಸುಹೈಲ್ ಇದ್ದರು.