ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ

ಗೋಣಿಕೊಪ್ಪಲು, ಫೆ. ೩: ಕೊಟ್ಟಿಗೆ ಬಳಿ ಕಟ್ಟಲಾಗಿದ್ದ ಹಸುವಿನ ಮೇಲೆ ದಾಳಿ ನಡೆಸಿರುವ ಹುಲಿಯು ಹಸುವನ್ನು ಕೊಂದು ಹಾಕಿದ ಘಟನೆ ದಕ್ಷಿಣ ಕೊಡಗಿನ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರುದ್ರಬೀಡು ಗ್ರಾಮದ ರೈತರಾದ ಸಿ.ಎಸ್. ಶೈಲ ಎಂಬವರ ಮನೆಯಲ್ಲಿ ನಡೆದಿದೆ. ತಡರಾತ್ರಿಯ ವೇಳೆ ಹುಲಿಯೊಂದು ಕೊಟ್ಟಿಗೆ ಬಳಿ ತೆರಳಿ ಅಲ್ಲಿದ್ದ ಹಸುವಿನ ಮೇಲೆರಗಿದೆ.

ಹಸುವನ್ನು ಕಟ್ಟಿ ಹಾಕಿದ್ದ ಹಿನ್ನೆಲೆಯಲ್ಲಿ ಇದನ್ನು ಎಳೆದೊಯ್ಯಲು ಹುಲಿಗೆ ಸಾಧ್ಯವಾಗಲಿಲ್ಲ. ಮುಂಜಾನೆ ವೇಳೆ ಮನೆಯ ಮಾಲೀಕರು ಕೊಟ್ಟಿಗೆ ಬಳಿ ತೆರಳಿದಾಗ ಹಸು ಹುಲಿ ದಾಳಿಯಿಂದ ಮೃತಪಟ್ಟಿರುವ ಬಗ್ಗೆ ಮಾಹಿತಿ ದೊರೆತಿದೆ. ಸುದ್ದಿ ತಿಳಿದ ತಿತಿಮತಿ ವಲಯದ ಎಸಿಎಫ್ ಹೆಚ್. ಸೀಮಾ, ಆರ್‌ಎಫ್‌ಓ ಅಶೋಕ್ ಹುನಗುಂದ ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಹುಲಿಯ ಸಂಚಾರದ ಬಗ್ಗೆ ಮಾಹಿತಿ ತಿಳಿಯುವ ಸಲುವಾಗಿ ಕ್ಯಾಮರಾಗಳನ್ನು ಸ್ಥಳದಲ್ಲಿ ಅಳವಡಿಸಲಾಗಿದೆ.

ಹಸುವನ್ನು ಕಳೆದುಕೊಂಡ ಮಾಲೀಕರಿಗೆ ಸರ್ಕಾರದ ನಿಯಮದಂತೆ ಪರಿಹಾರ ಒದಗಿಸುವುದಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿದರು. ಇತ್ತೀಚೆಗೆ ದಕ್ಷಿಣ ಕೊಡಗಿನೆಲ್ಲೆಡೆ ಹುಲಿಯ ಹಾವಳಿ ಹೆಚ್ಚಾಗುತ್ತಿರುವುದರಿಂದ ಸಹಜವಾಗಿಯೇ ನಾಗರಿಕರು ಭಯ ಭೀತರಾಗಿದ್ದಾರೆ.