ಮುಳ್ಳೂರು, ಫೆ. ೩: ಸಮೀಪದ ಹಂಡ್ಲಿ ಗ್ರಾ.ಪಂ. ವ್ಯಾಪ್ತಿಯ ಗುಡುಗಳಲೆಯಲ್ಲಿ ಶ್ರೀ ಜಯದೇವ ಜಾನುವಾರು ಜಾತ್ರೆ ನಡೆಯುತ್ತಿದ್ದು, ಜನರನ್ನು ಆಕರ್ಷಿಸಲು ಜಾತ್ರೆ ಸಮಿತಿಯವರು ಪ್ರತಿ ದಿನ ಸಂಜೆ ಕ್ರೀಡಾ ಸ್ಪರ್ಧೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಈಗಾಗಲೇ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು. ಹಗಲು ವಿವಿಧ ಕ್ರೀಡಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಜಾತ್ರಾ ಮೈದಾನದಲ್ಲಿರುವ ಶ್ರೀ ಜಯದೇವಾ ಜಾತ್ರಾ ಕಲಾ ವೇದಿಕೆಯಲ್ಲಿ ಬುಧವಾರ ಸಂಜೆ ಆಯೋಜಿಸಿದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಮೀಪದ ಆಲೂರುಸಿದ್ದಾಪುರ ಜಾನಕಿ ಕಾಳಪ್ಪ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ವಿದ್ಯಾರ್ಥಿಗಳು ವಿವಿಧ ನೃತ್ಯ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಜಯದೇವ ಜಾನುವಾರು ಜಾತ್ರಾ ಸಮಿತಿ ಅಧ್ಯಕ್ಷ ವಿನಿತ್‌ಕುಮಾರ್, ಕಾರ್ಯದರ್ಶಿ ಅಶೋಕ್, ಜಾನಕಿ ಕಾಳಪ್ಪ ವಿದ್ಯಾಸಂಸ್ಥೆಯ ಮೇನೆಜಿಂಗ್ ಟ್ರಸ್ಟಿ ಎಚ್.ಕೆ. ಶಿವಪ್ರಕಾಶ್, ಶಾಲೆಯ ಶಿಕ್ಷಕರು, ಜಾತ್ರಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.