ಮಡಿಕೇರಿ, ಫೆ. ೪: ಸರ್ಕಾರಿ ಕಚೇರಿಯ ಆವರಣದಲ್ಲಿ ಬಿಜೆಪಿ ಸದಸ್ಯತ್ವ ಪ್ರಚಾರದ ಭಿತ್ತಿ ಪತ್ರ ಅಂಟಿಸಿದ್ದು ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪರಿಣಾಮ ಭಿತ್ತಿ ಪತ್ರ ತೆರವು ಕಾರ್ಯ ಇಂದು ಮಡಿಕೇರಿಯಲ್ಲಿ ನಡೆಯಿತು.
ಮಡಿಕೇರಿಯ ಕೊಹಿನೂರು ರಸ್ತೆಯಲ್ಲಿರುವ ಜಿಲ್ಲಾ ತೋಟಗಾರಿಕೆ ಕಚೇರಿಯ ಗೋಡೆಯಲ್ಲಿ ಶುಕ್ರವಾರದಂದು ಬಿಜೆಪಿ ಪಕ್ಷದ ಸದಸ್ಯತ್ವ ನೋಂದಣಿಯ ಪ್ರಚಾರದ ಸಲುವಾಗಿ ಭಿತ್ತಿ ಪತ್ರಗಳನ್ನು ತಡರಾತ್ರಿಯಲ್ಲಿ ಅಂಟಿಸಲಾಗಿತ್ತು .
ಇದನ್ನು ಗಮನಿಸಿದ ಕೊಡಗು ಕಾಂಗ್ರೆಸ್ ತಂಡ ಶನಿವಾರ ತೋಟಗಾರಿಕೆ ಕಚೇರಿಗೆ ದೌಡಾಯಿಸಿ ಅಧಿಕಾರಿಗಳ ಗಮನ ಸೆಳೆದರು. ಕೊನೆಗೆ ಎಚ್ಚೆತ್ತ ಇಲಾಖಾ ಅಧಿಕಾರಿಗಳು ತಮ್ಮ ಸಿಬ್ಬಂದಿಯವರಿAದ ಭಿತ್ತಿ ಪತ್ರ ತೆರವುಗೊಳಿಸಿದರು.
ಕಾಂಗ್ರೆಸ್ ತಂಡದ ನೇತೃತ್ವ ವಹಿಸಿದ್ದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನ, ಡಿಸಿಸಿ ಸದಸ್ಯ ಕಟ್ರತನ ವೆಂಕಟೇಶ್, ಅಯಿಲಪಂಡ ಪುಷ್ಪ ಪೂಣಚ್ಚ, ಪ್ರಕಾಶ್ ಆಚಾರ್ಯ, ಎಸ್.ಸಿ. ಘಟಕದ ಬ್ಲಾಕ್ ಅಧ್ಯಕ್ಷ ಮುದ್ದುರಾಜ್, ಅಲ್ಪ ಸಂಖ್ಯಾತ ಘಟಕದ ನಗರಾಧ್ಯಕ್ಷ ಕೆ.ಜಿ. ಪೀಟರ್ ಇದ್ದರು.