ಕುಶಾಲನಗರ, ಫೆ. ೩: ಕನ್ನಡ ಭಾಷೆಗೆ ಪುರಾತನ ಹಿನ್ನೆಲೆ, ಶ್ರೀಮಂತ ಭಾಷೆ ಎನ್ನುವ ಅಭಿದಾನವಿದ್ದರೂ, ಜಾಗತಿಕ ಮನ್ನಣೆಯನ್ನು ಪಡೆಯಲು ಸಾಧ್ಯವಾಗಿಲ್ಲ ಎನ್ನುವುದು ವಿಷಾದನೀಯ ಅಂಶವಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಬಿ.ಆರ್. ನಾರಾಯಣ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು, ಕುಶಾಲನಗರ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ಕನ್ನಡ ಭಾಷೆ ಒಂದು ದೀರ್ಘ ಇತಿಹಾಸ ಹೊಂದಿರುವ ಭಾಷೆಯಾಗಿದ್ದು, ಹತ್ತು ಹಲವು ಮಂದಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ಸಾಹಿತ್ಯ ಭಂಡಾರ ಆಳವಾದ ಪ್ರಬುದ್ದ ಕೃತಿಗಳಿಂದ ತುಂಬಿ ತುಳುಕುತ್ತಿದೆ. ಜನ ಮಾನಸದಲ್ಲಿ ನೆಲೆ ನಿಂತ ಸಾಹಿತ್ಯ ಮಿತಿಯೊಳಗೆ ಮಾತ್ರ ಇರುವುದಾಗಿ ತಿಳಿಸಿದರು. ಸಾಮಾಜಿಕ ಅನಿಷ್ಟಗಳನ್ನು ಪಿಡುಗುಗಳನ್ನು, ವಾಸ್ತವಿಕತೆಯ ನೆಲೆಗಟ್ಟಿನಲ್ಲಿ ಎತ್ತಿ ತೋರಿಸುವ ದಲಿತ, ಬಂಡಾಯ ಸಾಹಿತ್ಯಗಳು ಸಮಾಜಕ್ಕೆ ಸಾಕಷ್ಟು ಚುರುಕು ಮುಟ್ಟಿಸಿದೆ. ಕೊಡಗು ಜಿಲ್ಲೆಯ ಕಾರ್ಮಿಕರ ಕೊರತೆಯನ್ನು ನೀಗಿಸಲು ಉತ್ತರ ಭಾರತ ರಾಜ್ಯಗಳಿಂದ ವಲಸೆ ಬರುತ್ತಿರುವ ಕಾರ್ಮಿಕರಿಗೆ ಕನ್ನಡ ಕಲಿಸುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ ಮೂಲಕ ನಡೆಯಬೇಕಾಗಿದೆ, ಬಹುತೇಕ ಕಾರ್ಮಿಕರಿಗೆ ಹಿಂದಿ ಹೊರತಾಗಿ ಯಾವ ಭಾಷೆಯು ತಿಳಿಯದು. ಈ ಹಿನ್ನೆಲೆಯಲ್ಲಿ ಪರಿಷತ್‌ನ ಗಮನ ಅಗತ್ಯವಾಗಿದೆ ಎಂದರು.
ಒಳ್ಳೆಯ ಗುಣಗಳಿರುವ ಮೂರ್ಖರಿಂದ ಸಮಾಜ ಕಟ್ಟಬಹುದೇ ಹೊರತು, ಕೆಟ್ಟು ಹೋದ ಬುದ್ಧಿವಂತರಿAದಲ್ಲ ಎಂದು ಹೇಳಿದ
(ಮೊದಲ ಪುಟದಿಂದ) ನಾರಾಯಣ, ಹಲವಾರು ಮೇರು ಕೃತಿಗಳು ಓದುಗನ ಮೇಲೆ ಆಳವಾದ ಪರಿಣಾಮ ಬೀರಿ ಸಾಹಿತ್ಯದ ನಿಜ ಉದ್ದೇಶವನ್ನು ಸಾಕಾರಗೊಳಿಸುತ್ತವೆ. ನವ್ಯ ಕಾವ್ಯ ಪ್ರಾಕಾರಗಳಲ್ಲಿ ಹಲವಾರು ಕವಿಗಳು ತಮ್ಮ ಉತ್ಕೃಷ್ಟ ಕೃತಿಗಳನ್ನು ನೀಡಿದ್ದಾರೆ. ದಲಿತ, ಬಂಡಾಯ ಸಾಹಿತ್ಯಗಳಲ್ಲೂ ಕಟು ವಾಸ್ತವವನ್ನು ಹೊರಗಿಡುವ ಗದ್ಯ ಪದ್ಯ ಪ್ರಕಾರಗಳಲ್ಲಿ ರಚಿತವಾದ ಉತ್ತಮ ಕೃತಿಗಳಿವೆ ಎಂದು ನಾರಾಯಣ ಹೇಳಿದರು. ೨೦ ರದಶಕದಲ್ಲಿ ಚುಟುಕುಗಳಿಂದಲೇ ಓದುಗರನ್ನು ತಣಿಸಬಹುದು ಎಂದ ನಾರಾಯಣ ಇದೇ ಸಂದರ್ಭಎರಡು ಚುಟುಕುಗಳನ್ನು ವಾಚಿಸಿದರು.
೮ ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆ ಕನ್ನಡವಾಗಿದ್ದು, ಪ್ರಬಲವಾಗಿರುವ ಹಿಂದಿ ೧೧ ಬಾರಿ ಪ್ರಶಸ್ತಿ ಗಳಿಸಿದೆ. ಕನ್ನಡದಲ್ಲಿ ಹಲವು ಕವಿಗಳು ರಾಷ್ಟç ಕವಿ ಪ್ರಶಸ್ತಿಗೆ ಭಾಜನರಾಗಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಕೊಡಗಿನ ಸಾಹಿತಿಗಳನ್ನು ಸ್ಮರಿಸಿದ ನಾರಾಯಣ ಅವರು ಜಿಲ್ಲೆಯ ಕವಿಗಳಿಂದ ಸಾಹಿತ್ಯಕ್ಕೆ ಅಪಾರ ಪ್ರಮಾಣದ ಕೊಡಗೆ ನೀಡಿದ್ದಾರೆ ಎಂದು ಹೇಳಿದರು. ನಿಜ ಜೀವನದ ಎಲ್ಲ ಘಟನೆಗಳು ಸಾಹಿತ್ಯವೇ ಆಗಿದ್ದು, ಓದು ಬರಹ ಅರಿಯದ ನಿಷ್ಕಳಂಕ ಶ್ರಮ ಜೀವಿಗಳ ಬದುಕು ಕೂಡ ಸಾಹಿತ್ಯ ಜೀವನದ ಪ್ರತಿಬಿಂಬವಾಗಿದೆ ಎಂದರು. ಕನ್ನಡಕ್ಕೆ ಕೆಲವು ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆಯಲ್ಲಿ ಅಪಮಾನವಾಗುತ್ತಿದ್ದು, ಅಲ್ಲಿನ ವಿದ್ಯಾರ್ಥಿಗಳು ಆಂಗ್ಲ ಭಾಷೆಯಲ್ಲಿ ಮಾತನಾಡಬೇಕು, ತಪ್ಪಿ ಕನ್ನಡದಲ್ಲಿ ಮಾತನಾಡಿದರೆ ದಂಡ ವಿಧಿಸಲಾಗುವ ನಿಯಮಗಳನ್ನು ನಿರ್ಬಂಧಿಸಬೇಕಾಗಿದೆ ಎಂದರು.
ತನ್ನ ವ್ಯಕ್ತಿತ್ವದ ಪ್ರಾತಿನಿಧಿಕ ಅಂಶವಾದ ಹಸ್ತಾಕ್ಷರವನ್ನು ಕನ್ನಡದಲ್ಲಿಯೇ ಹಾಕುವ ಪರಿಪಾಠ ಭಾಷೆಗೆ ನೀಡುವ ಅತೀ ದೊಡ್ಡ ಗೌರವ ಎಂದು ಹೇಳಿದ ನಾರಾಯಣ, ತೀವ್ರಗತಿಯಲ್ಲಿ ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ನಾಡು, ನುಡಿಯ ಸಂರಕ್ಷಣೆ ಮತ್ತು ಬೆಳವಣಿಗೆಗೆ ಶ್ರಮಿಸುತ್ತಿರುವ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯಕ್ರಮಗಳು ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.