ಕುಶಾಲನಗರ, ಫೆ. ೩: ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ನಿರ್ಣಯಗೊಳ್ಳುವ ಠರಾವುಗಳನ್ನು ವರ್ಷದ ಅವಧಿಯೊಳಗೆ ಅನುಷ್ಠಾನಗೊಳಿಸುವ ಕೆಲಸವಾಗಬೇಕು ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಅವರು ಕುಶಾಲನಗರ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ನಾಗರಿಕರಿಂದ ಸದಾಭಿಪ್ರಾಯ ಗಳಿಸಲು ಸಾಧ್ಯ. ಈ ಬಗ್ಗೆ ಸರ್ಕಾರದ ಮೂಲಕ ತಾನು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಘೋಷಿಸಿದರು.
(ಮೊದಲ ಪುಟದಿಂದ) ಇತರ ರಾಜ್ಯಗಳಲ್ಲಿ ಮಾತೃಭಾಷೆಗೆ ಪ್ರಥಮ ಆದ್ಯತೆ ಇದ್ದು, ನಮ್ಮ ರಾಜ್ಯದಲ್ಲಿ ಆಂಗ್ಲ ಭಾಷೆಯ ವ್ಯಾಮೋಹ ಅಧಿಕವಾಗಿದೆ ಎಂದರಲ್ಲದೆ. ಕನ್ನಡ ನಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸುವ ಕೆಲಸವಾಗಬೇಕು. ಮಾತೃಭಾಷೆಯ ಶಿಕ್ಷಣ ನೀಡಿದಲ್ಲಿ ಯಶಸ್ಸು ಕಾಣಬಹುದು. ಯಾವುದೇ ಸಂದರ್ಭ ಕನ್ನಡ ಕಾವಲು ಸಮಿತಿಯ ಅಗತ್ಯತೆ ಇಲ್ಲ ಎಂದರು.
ಕೊಡಗು ಜಿಲ್ಲೆಯಿಂದ ಹೊರಬಂದ ಜನಪ್ರತಿನಿಧಿಗಳು ರಾಜ್ಯಕ್ಕೆ ಮಾದರಿಯಾಗಿದ್ದಾರೆ ಎಂದ ಹೊರಟ್ಟಿ; ಮುಖ್ಯಮಂತ್ರಿಯಾಗಿದ್ದ ಆರ್. ಗುಂಡೂರಾವ್, ಸಚಿವರಾಗಿದ್ದ ಎಂ.ಸಿ ನಾಣಯ್ಯ ಅವರ ಸ್ಥಳ ತುಂಬಲು ಕಷ್ಟಸಾಧ್ಯವಾಗಿದೆ ಎಂದರು. ಇತ್ತೀಚಿನ ವಿಧಾನ ಪರಿಷತ್ನ ಕಲಾಪದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಜನಪ್ರತಿನಿಧಿಗಳಿಗೆ ಇಂತಹ ಘಟನೆಗಳು ಶೋಭೆ ತರಲ್ಲ, ಹಿರಿಯ ಚಿಂತಕರ ಚಾವಡಿ ಬಗ್ಗೆ ಟೀಕೆ ಟಿಪ್ಪಣಿಯ ಬಗ್ಗೆ ವಿಷಾದ ವ್ಯಕ್ತಪಡಿಸಿ ನಾಡಿನ ಜನತೆಗೆ ನ್ಯಾಯ ಒದಗಿಸುವ ಕೆಲಸವಾಗಬೇಕಾಗಿದೆ ಎಂದರು. ಕ್ಷೇತ್ರ ಶಾಸಕ ಅಪ್ಪಚ್ಚು ರಂಜನ್ ಅವರ ಮೂಲಕ ಸರ್ಕಾರದಿಂದ ಜಿಲ್ಲೆಯ ಅಭಿವೃದ್ಧಿ ಬಗ್ಗೆ ನಿರಂತರವಾಗಿ ಕೆಲಸವಾಗುತ್ತಿದೆ ಎಂದರು.
೮೦೦ ಸರ್ಕಾರಿ ಪ್ರಾಥಮಿಕ ಶಾಲೆಗಳು ಮಕ್ಕಳ ಕೊರತೆಯಿಂದ ಮುಚ್ಚುವ ಸ್ಥಿತಿಗೆ ಬಂದಿದೆ ಎಂದ ಅವರು, ಕನ್ನಡ ಸಾಹಿತ್ಯ ಪರಿಷತ್ ಚಟುವಟಿಕೆಗಳಿಂದ ಶಾಲೆ ಉಳಿಸುವ ಕೆಲಸವಾಗಬೇಕು. ಈ ಮೂಲಕ ಪ್ರತಿ ಜಿಲ್ಲೆಯ ಅಭಿವೃದ್ಧಿಗೆ ಕಂಕಣ ಬದ್ಧರಾಗಬೇಕೆಂದರು.
ನಾಡಿನ ಸಿರಿ ಬೆಳೆಸುವ ಕೆಲಸವಾಗಲಿ; ಕುಶಾಲನಗರ ಸಮ್ಮೇಳನ ಅತ್ಯಂತ ಶಿಸ್ತುಬದ್ದವಾಗಿ ನಡೆದಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ನಾಡಗೀತೆ, ರೈತಗೀತೆ ಹಾಡಿದ ತಂಡಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.