ಮಡಿಕೇರಿ, ಫೆ. ೩: ಕಣ್ಣಿಗೆ ಹಿತ ನೀಡುವ ಬಣ್ಣ ಬಣ್ಣದ ಹೂಗಳು, ಅವುಗಳಿಂದಲೇ ತಯಾರಾದ ಅರಮನೆ, ಚಿಟ್ಟೆ, ಕರುನಾಡ ಕಲಾಕೃತಿಗಳು, ಸೊಗಸಾದ ವಾತಾವರಣದ ಸೌಂದರ್ಯ ಹೆಚ್ಚಿಸಿದ ಪುಷ್ಪರಾಶಿ, ಇದನ್ನು ಕಂಡು ಬೆರಗಾದ ಜನತೆ.. ನೋಡಿದಷ್ಟು ಮತ್ತೆ ಮತ್ತೆ ನೋಡಬೇಕೆಂಬ ಹಂಬಲ.

ಹೌದು, ಈ ದೃಶ್ಯಾವಳಿಗಳು ಕಂಡು ಬಂದಿದ್ದು ನಗರದ ರಾಜಾಸೀಟ್ ಉದ್ಯಾನವನದಲ್ಲಿ ನಿತ್ಯ ಸೂರ್ಯಾಸ್ತಮ, ತಂಗಾಳಿ, ವಾಯುವಿಹಾರ, ಸಂಗೀತ ಕಾರಂಜಿ, ಪರಿಸರ ಸವಿಯಲು ಬರುತ್ತಿದ್ದ ಜನತೆಗೆ ಇಂದು ರಾಜಾಸೀಟ್‌ನಲ್ಲಿ ಪುಷ್ಪಲೋಕ ಸ್ವಾಗತಿಸುತಿತ್ತು. ಚಿತ್ತಾಕರ್ಷಕ ಹೂವಿನಗಿಡಗಳು ರಾಜಾಸೀಟ್‌ನ ಅಂದ ದ್ವಿಗುಣಗೊಳಿಸಿತ್ತು. ಹಸಿರೂರಿಗೆ ಬಣ್ಣದ ಸೀರೆ ಉಡಿಸಿದಂತೆ ಭಾಸವಾಗುತಿತ್ತು.

ಪ್ರತಿವರ್ಷ ಪ್ರವಾಸಿಗರನ್ನು ಸೊಜಿಗಲ್ಲಿನಂತೆ ಸೆಳೆಯುತ್ತಿದ್ದ ಫಲಪುಷ್ಪ ಪ್ರದರ್ಶನ ಕೋವಿಡ್ ಪರಿಸ್ಥಿತಿಯಿಂದ ಕಳೆದ ೨ ವರ್ಷ ಸ್ಥಗಿತಗೊಂಡಿತ್ತು. ಇದೀಗ ಮತ್ತೆ ರಾಜಾಸೀಟ್‌ನಲ್ಲಿ ಹೂವಿನ ಲೋಕ ಅರಳಿ ನಿಂತಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ - ೨೦೨೩ ಜನರನ್ನು ಆಕರ್ಷಿಸುತ್ತಿದೆ. ಬೆಳಿಗ್ಗಿನಿಂದಲೇ ಸ್ಥಳೀಯರು, ಪ್ರವಾಸಿಗರು ಆಗಮಿಸಿ ‘ಫ್ಲವರ್ ಶೋ’ ಕಣ್ತುಂಬಿಕೊAಡರು.

ಕಾರ್ಯಕ್ರಮದ ಅಂಗವಾಗಿ ೧೦ ರಿಂದ ೧೨ ಸಾವಿರ ಸಂಖ್ಯೆಯ ಪೇಟೊನಿಯ, ಕ್ಯಾನ, ಸಾಲ್ವಿಯ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಕ್ಯಾಲಾಂಡೂಲಾ, ಫ್ಲಾಕ್ಸ್, ವಿಂಕಾ ರೋಸಿಯಾ, ಡೇಲಿಯಾ, ಅಲಿಸಂ ಸೇರಿದಂತೆ ೨೦ ಜಾತಿಯ ಹೂಗಳನ್ನು ರಾಜಾಸೀಟ್ ಉದ್ಯಾನದಲ್ಲಿ ಪಾತಿ ಹಾಗೂ ಕುಂಡಗಳಲ್ಲಿ ನೆಡಲಾಗಿದೆ.

ಕಲಾಕೃತಿಗಳ ಆಕರ್ಷಣೆ

ಪ್ರತಿವರ್ಷದಂತೆ ಈ ವರ್ಷವೂ ಹೂವಿನಿಂದ ಮಾಡಿದ ಕಲಾಕೃತಿಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಪ್ರಮುಖವಾಗಿ ರಾಜರ ಕಾಲದ ನಾಲ್ಕುನಾಡು ಅರಮನೆಯ ಕಲಾಕೃತಿ ನೋಡಗರನ್ನು ಆಶ್ಚರ್ಯ ಚಕಿತಗೊಳಿಸುತ್ತದೆ. ೧೮ ಅಡಿ ಎತ್ತರ, ೧೩ ಅಡಿ ಉದ್ದ, ೩೫ ಅಡಿ ಅಗಲದಲ್ಲಿ ಕೆಂಪು ಗುಲಾಬಿ, ಬಿಳಿ ಹಾಗೂ ಹಳದಿ ಸೇವಂತಿಗೆ ಹೂವಿನಿಂದ ತಯಾರಾದ ಈ ಅರಮನೆ ಎದುರು ಆಗಮಿಸಿದವರು ಫೋಟೋ ಕ್ಲಿಕ್ಕಿಸಿ ಸಂಭ್ರಮಿಸುತ್ತಿದ್ದಾರೆ.

ಇದರೊಂದಿಗೆ ಮತದಾನದ ಅರಿವು ಮೂಡಿಸಲು ಬ್ಯಾಲೆಟ್ ಯೂನಿಟ್, ವಿವಿ ಪ್ಯಾಟ್, ಕಂಟ್ರೋಲ್ ಯೂನಿಟ್ ಮಾದರಿಯನ್ನು ರಂಗು ರಂಗಿನ ಹೂವಿನಿಂದ ರಚಿಸಲಾಗಿದೆ. ಜಿಲ್ಲೆಯ ಪ್ರಮುಖ ಬೆಳೆಯಾದ ಕಾಫಿಯನ್ನು ಪ್ರತಿಬಿಂಬಿಸಲು ಕಾಫಿ ಕಪ್ ಹಾಗೂ ಸಾಸರ್ ಮಾದರಿ, ಚಿಟ್ಟೆ, ಜೇನು, ಕ್ರಿಕೆಟ್ ವಿಶ್ವಕಪ್, ಮಕ್ಕಳಿಗೆ ಮನರಂಜನೆ ನೀಡುವ ಉದ್ದೇಶದಿಂದ ಸ್ಪೆöÊಡರ್‌ಮೆನ್, ಮಾಶ ಆ್ಯಂಡ್ ಬೇರ್ ಇನ್ನಿತರ ಕಾರ್ಟೂನ್ ಪಾತ್ರಗಳು, ಸೆಲ್ಫಿ ಬೂತ್, ಮಾವಿನ ಹಣ್ಣು, ಸೇರಿದಂತೆ ಇನ್ನಿತರ ಕಲಾಕೃತಿಗಳನ್ನು ಹೂವಿನ ಮೂಲಕ ಸೃಷ್ಟಿಸಲಾಗಿದೆ.

ಕಾರ್ಯಕ್ರಮದ ಅಂಗವಾಗಿ ಗಾಂಧಿ ಮೈದಾನದಲ್ಲಿ ೬೦ ಮಳಿಗೆಯನ್ನು ನಿರ್ಮಿಸಲಾಗಿದೆ. ೨೦ ಮಳಿಗೆಗಳಲ್ಲಿ ತೋಟಗಾರಿಕೆ,

(ಮೊದಲ ಪುಟದಿಂದ) ಕೃಷಿ, ಕೈಗಾರಿಕೆ, ವಾಣಿಜ್ಯ ಸೇರಿದಂತೆ ಇನ್ನಿತರ ಇಲಾಖೆಗಳ ಯೋಜನೆ ಕುರಿತ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ. ಉಳಿದ ಮಳಿಗೆಗಳಲ್ಲಿ ಖಾಸಗಿ ನರ್ಸರಿಗಳು, ಕೃಷಿ ಯಂತ್ರೋಪಕರಣ ಮಳಿಗೆಗಳು ತಲೆಎತ್ತಿವೆ. ಇದರೊಂದಿಗೆ ಗೃಹೋಪಯೋಗಿ ವಸ್ತುಗಳ ಮಾರಾಟ, ಮನರಂಜನಾ ಕ್ರೀಡೆ, ಚಾಟ್ಸ್ ಶಾಪ್‌ಗಳಿವೆ. ತಾ. ೬ ರ ತನಕ ರಾಜಾಸೀಟ್‌ನಲ್ಲಿ ‘ಫ್ಲವರ್ ಶೋ’ ಮುಂದುವರೆಯಲಿದೆ.

ಉದ್ಘಾಟನೆ

ಶಾಸಕ ಎಂ.ಪಿ.ಅಪ್ಪಚ್ಚುರAಜನ್ ಫಲಪುಷ್ಪ ಪ್ರದರ್ಶನವನ್ನು ವರ್ಷದಿಂದ ವರ್ಷಕ್ಕೆ ಅತ್ಯುತ್ತಮವಾಗಿ ಏರ್ಪಡಿಸಲಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜಾಸೀಟು ಉದ್ಯಾನವನ ಫಲಪುಷ್ಪ ಪ್ರದರ್ಶನವು ಕಣ್ಮನ ಸೆಳೆಯುತ್ತಿದ್ದು, ಪ್ರವಾಸಿಗರಲ್ಲಿ ಒಂದು ರೀತಿ ಸಂತಸ ತರುತ್ತದೆ. ನಾಡಿನ ಪ್ರವಾಸಿಗರು ರಾಜಸೀಟು ಉದ್ಯಾನವನದ ಫಲಪುಷ್ಪ ಪ್ರದರ್ಶನ ವೀಕ್ಷಿಸುವಂತಾಗಬೇಕು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಗೆ ಆಗಮಿಸಿ ಗ್ರೇಟರ್ ರಾಜಸೀಟು ಮತ್ತು ಗಾಂಧಿ ಭವನ ಉದ್ಘಾಟಿಸಲಿದ್ದಾರೆ. ಇತರೆ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಡಗು ಜಿಲ್ಲೆಗೆ ಹೆಚ್ಚಿನ ಅನುದಾನ ನೀಡಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ, ಗಾಂಧಿ ಮೈದಾನದಲ್ಲಿ ೬೦ ಕ್ಕೂ ಹೆಚ್ಚು ವಸ್ತು ಪ್ರದರ್ಶನ ಮಳಿಗೆಯನ್ನು ನಿರ್ಮಾಣ ಮಾಡಲಾಗಿದ್ದು, ತೋಟಗಾರಿಕೆ, ಪಶುಪಾಲನೆ, ಕೃಷಿ, ಆಯುಷ್, ಕಾಫಿ ಮಂಡಳಿ, ಕೈಗಾರಿಕೆ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ, ಕಾರ್ಮಿಕ, ಹೀಗೆ ಹಲವು ಇಲಾಖೆಗಳು ವಸ್ತುಪ್ರದರ್ಶನ ಏರ್ಪಡಿಸಿರುವುದು ವಿಶೇಷವಾಗಿದೆ ಎಂದರು.

ವೈನ್ ಮೇಳಕ್ಕೆ ಚಾಲನೆ: ಫಲಪುಷ್ಪ ಪ್ರದರ್ಶನ ಪ್ರಯುಕ್ತ ನಗರದ ಗಾಂಧಿ ಮೈದಾನದಲ್ಲಿ ವೈನ್‌ಮೇಳವನ್ನು ಆಯೋಜಿಸಲಾಗಿದ್ದು, ಕೊಡಗಿನ ಹೋಮ್ ಮೇಡ್ ವೈನ್‌ಗಳು ಹಾಗೂ ಕರ್ನಾಟಕ ದ್ರಾಕ್ಷರಸ ಮಂಡಳಿ ವತಿಯಿಂದ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ.

ಶಾಸಕ ಎಂ.ಪಿ.ಅಪ್ಪಚ್ಚುರAಜನ್, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಕರ್ನಾಟಕ ದ್ರಾಕ್ಷರಸ ಮಂಡಳಿ ಅಧ್ಯಕ್ಷ ನಾರಾಯಣ ರೆಡ್ಡಿ, ನಿರ್ದೇಶಕ ಅಭಿಲಾಷ್, ವ್ಯವಸ್ಥಾಪಕ ನಿರ್ದೇಶಕರಾದ ಸೋಮು, ಜನರಲ್ ಮ್ಯಾನೇಜರ್ ಸರ್ವೇಶ್ ಇತರರು ಚಾಲನೆ ನೀಡಿದರು. ವೈನ್ ತಯಾರಿಸುವ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ ನಡೆಯಿತು.

ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿ.ಪಂ.ಸಿಇಒ ಡಾ.ಎಸ್.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಕಾಫಿ ಮಂಡಳಿ ನಿರ್ದೇಶಕ ತಳೂರು ಕಿಶೋರ್ ಕುಮಾರ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಮೋದ್ ಸಿ.ಎಂ., ನಗರಸಭಾ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. -ಹೆಚ್. ಜೆ. ರಾಕೇಶ್