ಮಡಿಕೇರಿ, ಫೆ. ೩: ದೇಶದ ೪ನೇ ಅತೀ ದೊಡ್ಡ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಗೌರವಕ್ಕೆ ಭಾಜನರಾದ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು ಮಡಿಕೇರಿ ಕೊಡವ ಸಮಾಜ ಹಾಗೂ ಪೊಮ್ಮಕ್ಕಡ ಕೂಟದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ನಗರದ ಮಹದೇವಪೇಟೆಯಿಂದ ರಾಣಿ ಮಾಚಯ್ಯ ಅವರನ್ನು ತೆರೆದ ವಾಹನದಲ್ಲಿ ಮುಖ್ಯಬೀದಿಯಲ್ಲಿ ಮೆರವಣಿಗೆ ನಡೆಸಿ ಬಳಿಕ ಕೊಡವ ಸಮಾಜದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪದ್ಮಶ್ರೀ ಪುರಸ್ಕೃತೆ ರಾಣಿ ಮಾಚಯ್ಯ ಕೊಡವ ಸಂಸ್ಕೃತಿಯ ಭಾಗವಾಗಿರುವ ಬೊಳಕಾಟ್, ಕೋಲಾಟ್ ಕಲೆಗಳು ಮತ್ತಷ್ಟು ಪ್ರಸಿದ್ಧಗೊಳ್ಳಬೇಕು. ಇವುಗಳನ್ನು ಕಲಿಯುವ ಹಾಗೂ ಕಲಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ನನ್ನ ಪ್ರಯತ್ನ ಮುಂದುವರೆಯಲಿದೆ. ಉಮ್ಮತ್ತಾಟ್ ಕಲಿಯಲು ಜನಾಂಗದ ಮಹಿಳೆಯರು ಮುಂದೆ ಬರಬೇಕು. ಇದರಿಂದ ಸಂಸ್ಕೃತಿಯ ರಕ್ಷಣೆ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
(ಮೊದಲ ಪುಟದಿಂದ) ಮಾಜಿ ಸಚಿವ ಮೇರಿಯಂಡ. ಸಿ. ನಾಣಯ್ಯ ಪಾಲ್ಗೊಂಡು ಮಾತನಾಡಿ, ಫೀ.ಮಾ. ಕಾರ್ಯಪ್ಪ ಅವರಿಗೆ ಭಾರತ ರತ್ನ ನೀಡಬೇಕೆಂಬ ಬೇಡಿಕೆ ಹಾಗೂ ಪ್ರಸ್ತಾವನೆ ಮೊದಲಿನಂದ ಇದೆ. ಆದರೆ, ಇಂದಿಗೂ ಗೌರವ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೊಳ್ಳೇರ ಗಣೇಶ್, ಕೋದಂಡ ರೋಹಿಣಿ ಅವರ ಬಳಿಕ ರಾಣಿ ಮಾಚಯ್ಯ ಅವರಿಗೆ ಪದ್ಮಶ್ರೀ ಲಭಿಸಿರುವುದು ಕೊಡಗಿಗೆ ಹೆಮ್ಮೆ ತಂದಿದೆ. ಉಮ್ಮತ್ತಾಟ್ ಮೂಲಕ ಕೊಡವ ಸಂಸ್ಕೃತಿಯನ್ನು ದೇಶದ ವಿವಿಧೆಡೆ ಮುಟ್ಟಿಸಿದ್ದಾರೆ. ನಿಸ್ವಾರ್ಥವಾಗಿ ತರಬೇತಿ ನೀಡಿದ ಪರಿಣಾಮ ಇಂದು ದೊಡ್ಡ ಗೌರವ ಹುಡುಕಿ ಬಂದಿದೆ. ಅವರ ಈ ಉತ್ಸಾಹ ಸದಾ ಇರಲಿ. ಕೊಡವ ಸಂಸ್ಕೃತಿಯ ಪಸರಿಸುವ ಕೆಲಸ ಮುಂದುವರೆಯಲಿ ಎಂದು ಆಶಿಸಿದರು.
ಕೊಡವರಲ್ಲಿ ಒಗ್ಗಟ್ಟು ಇರಬೇಕು. ಜನಾಂಗದ ಬಗ್ಗೆ ಹೆಮ್ಮೆ ಇರಬೇಕು. ಕೊಡವರ ಒಳ್ಳೆಯ ಪ್ರಯತ್ನಗಳಿಗೆ ಕೈಜೋಡಿಸಬೇಕು. ರಾಜಕೀಯವಾಗಿ ಸಂಘಟಿತರಾಗಬೇಕು ಎಂದು ನಾಣಯ್ಯ ಕರೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಮಾತನಾಡಿ, ಕೊಡವ ಮಹಿಳೆಯರಿಗೆ ರಾಣಿ ಮಾಚಯ್ಯ ಮಾದರಿಯಾಗಿ ನಿಂತಿದ್ದಾರೆ. ಜಾತಿ, ಧರ್ಮ ಎನ್ನದೇ ಆಸಕ್ತರಿಗೆ ತರಬೇತಿ ನೀಡಿರುವುದು ಅವರ ದೊಡ್ಡ ಗುಣ. ಮಹಿಳೆಯರು ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳಲು ಪುರುಷರು ಪ್ರೋತ್ಸಾಹ ನೀಡಬೇಕು. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುವಂತಾಗಬೇಕು ಎಂದು ಕರೆ ನೀಡಿದರು.
ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ರಾಣಿ ಮಾಚಯ್ಯ ಅವರು ಕೊಡವ ಜನಾಂಗಕ್ಕೆ ಹೆಮ್ಮೆ ತರುವುದರ ಜೊತೆಗೆ ಕೊಡವ ಸಾಂಸ್ಕೃತಿಕ ಕಲೆಯಾದ ಉಮ್ಮತ್ತಾಟ್ಗೆ ಜಾಗತಿಕ ಮನ್ನಣೆ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಮುತ್ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಕೊಡವರ ಜನಪದ ಆಚರಣೆ, ಆಚಾರ-ವಿಚಾರ, ಸಂಸ್ಕೃತಿ ಪ್ರಪಂಚದಲ್ಲಿ ಗುರುತಿಸಿಕೊಂಡಿದೆ. ಸೇನೆ, ಕ್ರೀಡೆ, ಕಲೆ, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ ಸೇರಿದಂತೆ ಅನೇಕ ಕ್ಷೇತ್ರದಲ್ಲಿ ಕೊಡವರು ಅಪಾರ ಸಾಧನೆಗೈದಿದ್ದಾರೆ. ಕೊಡವ ಸಾಂಸ್ಕೃತಿಕ ಲೋಕವನ್ನು ರಾಣಿ ಅವರು ಶ್ರೀಮಂತಗೊಳಿಸಿದ್ದಾರೆ. ಸಾವಿರಾರು ಮಕ್ಕಳಿಗೆ ಉಮ್ಮತ್ತಾಟ್ ಕಲಿಸಿ ದೇಶದ ವಿವಿಧೆಡೆ ಕೊಡವ ಸಂಸ್ಕೃತಿಯನ್ನು ಅನಾವರಣಗೊಳಿಸಿದ್ದಾರೆ. ಯಾವುದೇ ಲಾಭದ ಲೆಕ್ಕಾಚಾರವಿಲ್ಲದೆ ನಿಸ್ವಾರ್ಥವಾಗಿ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದ ಅವರು, ಯಾವುದೇ ಅರ್ಜಿ ಸಲ್ಲಿಸದೆ ಕೇಂದ್ರ ಸರಕಾರವೇ ಗುರುತಿಸಿ ಗೌರವ ನೀಡಿರುವುದು ಇಡೀ ಕೊಡವ ಜನಾಂಗಕ್ಕೆ ಸಂದ ಗೌರವ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಮಾತನಾಡಿ, ಕೊಡವ ಸಾಂಸ್ಕೃತಿಕ ಕಲೆಯಲ್ಲಿ ನಮ್ಮ ದಿನಚರಿ, ಆಚಾರ-ವಿಚಾರ ಅಡಗಿದೆ. ಅನನ್ಯ ಸಂಸ್ಕೃತಿ ಹೊಂದಿರುವ ಕೊಡವ ಜನಾಂಗದ ಏಳಿಗೆಗೆ ಅನೇಕರು ಶ್ರಮಿಸಿದ್ದಾರೆ. ತಮ್ಮ ಸ್ವಂತ ಖರ್ಚಿನಲ್ಲಿ ತರಬೇತಿ ನೀಡಿ ಉಮ್ಮತ್ತಾಟ್ ಕಲಿಸಿದ್ದಾರೆ ಎಂದರು.
ಕೊಡವ ಸಮಾಜದ ಮಾಜಿ ಅಧ್ಯಕ್ಷ ಕೊಂಗAಡ ಎಸ್.ದೇವಯ್ಯ ಮಾತನಾಡಿ, ಕಡಿಮೆ ಜನಸಂಖ್ಯೆಯ ಕೊಡವ ಜನಾಂಗದ ಮಹಿಳೆಗೆ ಸರಕಾರ ಅತೀ ದೊಡ್ಡ ಗೌರವ ನೀಡಿರುವುದು ಸಂತಸ ತಂದಿದೆ. ೧೦ ಸಾವಿರ ವಿದ್ಯಾರ್ಥಿಗಳಿಗೆ ಉಮ್ಮತ್ತಾಟ್ ಕಲಿಸಿರುವುದು ಸಣ್ಣ ಸಾಧನೆಯಲ್ಲ ಎಂದು ರಾಣಿ ಅವರ ಗುಣಗಾನ ಮಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮಂಡೇಪAಡ ಸುನಿಲ್ ಸುಬ್ರಮಣಿ, ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಕೊಡವ ಸಮಾಜ ಆಡಳಿತ ಮಂಡಳಿ, ವಿವಿಧ ಕೊಡವಕೇರಿಯ ಪ್ರಮುಖರು ಹಾಜರಿದ್ದರು. ಬೊಪ್ಪಂಡ ಸರಳ ಕರುಂಬಯ್ಯ ಪ್ರಾರ್ಥಿಸಿ, ಸಮಾಜದ ಕಾರ್ಯದರ್ಶಿ ಕನ್ನಂಡ ಸಂಪತ್ ಸ್ವಾಗತಿಸಿ, ಕೇಟೋಳಿರ ವಿಜು ದೇವಯ್ಯ ನಿರೂಪಿಸಿ, ವಂದಿಸಿದರು.