ಗ್ರಾಮಸ್ಥರಿಂದ ತಡೆ

ಕೂಡಿಗೆ, ಫೆ. ೩: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿ ಗ್ರಾಮದ ಸರ್ವೆ ನಂಬರ್ ೧೫/೨ರ ಗ್ರಾಮದ ಹಳೆಯ ನಕಾಶೆಯಂತೆ ಇರುವ ರಸ್ತೆಯನ್ನು ಕಂದಾಯ ಇಲಾಖೆಯವರು ಗುರುತಿಸಿ ತೆರವುಗೊಳಿಸಲು ಮುಂದಾದಾಗ ಸ್ಥಳೀಯ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಸದಸ್ಯರು ವಿರೋಧ ವ್ಯಕ್ತಪಡಿಸಿ ತಾತ್ಕಾಲಿಕವಾಗಿ ರಸ್ತೆ ಒತ್ತುವರಿ ತೆರವು ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ.

ಭುವನಗಿರಿ ಗ್ರಾಮ ವ್ಯಾಪ್ತಿಯಲ್ಲಿ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಈಗಾಗಲೇ ಹಾರಂಗಿ ನಾಲೆ ರಸ್ತೆ ಮತ್ತು ಇತರ ಉಪ ರಸ್ತೆ ಇದ್ದರೂ ವೈಯಕ್ತಿಕವಾಗಿ ಒಬ್ಬರಿಗಾಗಿ ರಸ್ತೆ ನಿರ್ಮಾಣ ಮಾಡಲು ಮುಂದಾದಾಗ ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ರಾದ ಟಿ.ಪಿ. ಹಮೀದ್, ಅನಂತ್, ಅರುಣ್ ರಾವ್, ಚಂದ್ರು ಸೇರಿದಂತೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎನ್. ರಾಜಾರಾವ್, ಗ್ರಾಮಸ್ಥ ರಾದ ಪ್ರಕಾಶ್, ಶೇಖರ್, ನಾಗೇಶ್ ಸೇರಿದಂತೆ ರೈತರು ತಡೆಯೊಡಿದ್ದರು.

ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಂತರ ಗ್ರಾಮಸ್ಥರ ಮನವಿಯಂತೆ ತಹಶೀಲ್ದಾರರ ಮಟ್ಟದಲ್ಲಿ ಸಭೆ ನಡೆಸಿ ಚರ್ಚಿಸುವುದಾಗಿ ತಾತ್ಕಾಲಿಕವಾಗಿ ತೆರವು ಕಾರ್ಯವನ್ನು ಸ್ಥಗಿತಗೊಳಿಸಿದರು.

ಈ ಸಂದರ್ಭ ಕಂದಾಯ ಇಲಾಖೆಯ ಉಪ ತಹಶೀಲ್ದಾರ್ ಮಧುಸೂದನ್, ಕಂದಾಯ ನಿರೀಕ್ಷಕ ಸಂತೋಷ, ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್, ಸಿಬ್ಬಂದಿ ವರ್ಗದವರು ಹಾಜರಿದ್ದರು.