ಪೊನ್ನಂಪೇಟೆ, ಫೆ. ೩: ಪೊನ್ನಂಪೇಟೆ ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಇಲ್ಲಿನ ಇಗ್ಗುತಪ್ಪ ಸೌಹಾರ್ದ ಸಭಾಂಗಣದಲ್ಲಿ ವಲಯಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ನ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಎಸ್.ಪೊನ್ನಣ್ಣ ಅವರು, ರಾಜ್ಯ ಹಾಗೂ ಕೊಡಗಿನ ಎರಡು ಕ್ಷೇತ್ರಗಳಲ್ಲೂ ಈ ಬಾರಿ ಜನರು ಬದಲಾವಣೆ ಬಯಸಿದ್ದು, ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಕಾರ್ಯಕರ್ತರ ದಂಡು ಸಜ್ಜಾಗಬೇಕಿದೆ. ಈ ಹಿಂದಿನ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಪ್ರಮುಖ ಕಾರಣವೆಂದರೆ ಚುನಾವಣೆಯನ್ನು ಎದುರಿಸಲು ಅಗತ್ಯ ತಯಾರಿ ಕೈಗೊಳ್ಳದಿರುವುದು. ಈ ನಿಟ್ಟಿನಲ್ಲಿ ಇಂದಿನಿAದಲೇ ಚುನಾವಣೆಯನ್ನು ಎದುರಿಸಲು ಅಗತ್ಯ ತಯಾರಿ ಮಾಡಿಕೊಳ್ಳಬೇಕಿದೆ. ಈ ಬಾರಿ ಬದಲಾವಣೆಯ ಗಾಳಿ ಬೀಸುತ್ತಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ ಮಾತನಾಡಿ, ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್ ನೀಡಿದರೂ ಸಹ ಅಭ್ಯರ್ಥಿಯ ಗೆಲುವಿಗೆ ಒಗ್ಗಟ್ಟಿನಿಂದ ಕಾರ್ಯಕರ್ತರು ಶ್ರಮಿಸಬೇಕು ಎಂದರು. ವಿಧಾನ ಪರಿಷತ್ ಮಾಜಿ ಸದಸ್ಯರಾದ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವಂತಹ ಕಾರ್ಯವಾಗಬೇಕೆಂದರು.
ಕಾAಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ ಕೊಡಗಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷದ ೧೦೬ ವಲಯಗಳಿದ್ದು, ಪ್ರತಿ ಬೂತ್ ಮಟ್ಟದಲ್ಲೂ ಪಕ್ಷದ ಬಲವರ್ಧನೆಗೆ ಕಾರ್ಯಕರ್ತರು ಶ್ರಮಿಸಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಪೊನ್ನಂಪೇಟೆ ವಲಯ ಕಾಂಗ್ರೆಸ್ ಅಧ್ಯಕ್ಷ ಅಡ್ಡಂಡ ಸವಿಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೆರಿರ ನವೀನ್, ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಕೋಳೆರ ಭಾರತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಂ.ಎನ್.ಕುಶಾಲಪ್ಪ, ಪಿ.ಕೆ.ಪೊನ್ನಪ್ಪ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಆಲೀರ ರಶೀದ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶಾಜಿ ಅಚ್ಚುತ್ತನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.