ವೀರಾಜಪೇಟೆ, ಫೆ.೩: ಹಿಂದೂ ಸಾಮಾಜಿಕ ಕಾರ್ಯಕರ್ತರಿಬ್ಬರ ಮೇಲೆ ಜಿಲ್ಲಾ ಆಡಳಿತ ಗಡಿಪಾರು ಪ್ರಕ್ರಿಯೆ ಆರಂಭಿಸಿರುವುದನ್ನು ಖಂಡಿಸಿ ಗಡಿಪಾರು ಆದೇಶವನ್ನು ತಕ್ಷಣ ಹಿಂಪಡೆಯುವAತೆ ಒತ್ತಾಯಿಸಿ ತಾಲೂಕು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ವೀರಾಜಪೇಟೆ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ ಪೊಲೀಸ್ ಇಲಾಖೆ ವಿರುದ್ಧ ಘೋಷಣೆ ಕೂಗಿದರು.

ಹಿಂದೂ ಸಂಘಟನೆಯ ಮುಖಂಡ ಸುನಿಲ್ ಮಾದಾಪುರ ಮಾತನಾಡಿ ಕೊಡಗು ಜಿಲ್ಲಾ ಆಡಳಿತ ಪೊಲೀಸ್ ಇಲಾಖೆಯ ಮುಖೇನ ಆರೋಪ ಹೊರಿಸಿ ಹಿಂದೂ ಸಾಮಾಜಿಕ ಕಾರ್ಯಕರ್ತರಾದ ವಿನಯ್ ಮತ್ತು ಕವನ್ ಕಾವೇರಪ್ಪ ಇವರನ್ನು ಗಡಿಪಾರು ಮಾಡಬೇಕೆನ್ನುವ ದುರುದ್ದೇಶದಿಂದ ಕೆಲವು ಅಧಿಕಾರಿಗಳ ಮೂಲಕ ಕಾರಣ ಕೇಳಿ ನೋಟೀಸ್ ನೀಡಲಾಗಿದ್ದು, ಹಿಂದೂ ಸಂಘಟನೆಗಳನ್ನು ಹತ್ತಿಕ್ಕಲು ಜಿಲ್ಲಾಡಳಿತ ಮುಂದಾಗಿರುವುದು ಖಂಡನೀಯ. ಕಾರಣ ಕೇಳಿ ನೋಟೀಸ್ ನೀಡಿರುವುದನ್ನು ಹಿಂಪಡೆಯುವ ಮೂಲಕ ಗಡಿಪಾರು ಪ್ರಕ್ರಿಯೆಯನ್ನು ಕೂಡಲೇ ರದ್ದುಗೊಳಿಸಬೇಕು. ಇಲ್ಲವಾದಲ್ಲಿ ಹಿಂದೂ ಸಂಘಟನೆ ವತಿಯಿಂದ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಚಾಲಕ ಬಿ.ಎನ್. ಯೋಗೇಶ್, ಎಂ. ಅಯ್ಯಣ್ಣ, ತಾಲೂಕು ಸಂಚಾಲಕ ಅನಿಲ್ ಸಿದ್ದಾಪುರ ಸೇರಿದಂತೆ ವೀರಾಜಪೇಟೆ ತಾಲೂಕಿನ ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು.

ಪೊನ್ನಂಪೇಟೆ: ಹಿಂದೂ ಸಾಮಾಜಿಕ ಕಾರ್ಯಕರ್ತರಿಬ್ಬರ ಮೇಲೆ ಜಿಲ್ಲಾಡಳಿತ ಗಡಿಪಾರು ಪ್ರಕ್ರಿಯೆ ಆರಂಭಿಸಿರುವುದನ್ನು ಖಂಡಿಸಿ, ಅನಗತ್ಯ ಗಡಿಪಾರು ಪ್ರಕ್ರಿಯೆಗೆ ಆದೇಶ ನೀಡಿರುವ ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹಿಸಿ ಮತ್ತು ಹಿಂದೂ ಸಾಮಾಜಿಕ ಕಾರ್ಯಕರ್ತರ ಮೇಲೆ ಹೊರಡಿಸಿದ ಕಾರಣ ಕೇಳಿ ನೋಟೀಸ್ ಹಿಂಪಡೆಯುವAತೆ ಆಗ್ರಹಿಸಿ ಪೊನ್ನಂಪೇಟೆ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಪೊನ್ನಂಪೇಟೆ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ನಂತರ ಈ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಬರೆದಿರುವ ಮನವಿ ಪತ್ರವನ್ನು ಪೊನ್ನಂಪೇಟೆ ತಹಶೀಲ್ದಾರ್ ಪ್ರಶಾಂತ್ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆ ಮಂಗಳೂರು ವಿಭಾಗ ಸಂಚಾಲಕ ಮಹೇಶ್, ಪೊನ್ನಂಪೇಟೆ ತಾಲೂಕು ಸಂಚಾಲಕ ಅಲ್ಲುಮಾಡ ಶರತ್ ಪೆಮ್ಮಯ್ಯ, ಪೊನ್ನಂಪೇಟೆ ಸಂಚಾಲಕ ಅನಿಲ್ ಪ್ರಸಾದ್, ವೇದಿಕೆ ಮುಖಂಡರಾದ ಪಿ.ಕೆ.ಮಣಿಕಂಠ, ತಿಮ್ಮಯ್ಯ, ಜಯಂತ್, ರಾಕೇಶ್, ಸಂಪತ್ ಮುಂತಾದವರು ಇದ್ದರು.