ಮಡಿಕೇರಿ, ಫೆ. ೨: ಹಿಂದೂಪರ ಕಾರ್ಯಕರ್ತರನ್ನು ಗುರಿ ಮಾಡಿ ಗಡಿಪಾರಿಗೆ ಪೊಲೀಸ್ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆ ಹಾಗೂ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಯಿತು.

ಹಿಂದೂಪರ ಕಾರ್ಯಕರ್ತರು ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ನಡೆಯನ್ನು ಖಂಡಿಸಿ ಘೋಷಣೆ ಕೂಗಿದರು. ಗಡಿಪಾರಿಗೆ ಸಲ್ಲಿಸಿರುವ ನೋಟೀಸ್ ಹಿಂಪಡೆಯುವುದರ ಜೊತೆಗೆ ಅನಗತ್ಯವಾಗಿ ಗಡಿಪಾರು ಪ್ರಕ್ರಿಯೆ ಕೈಗೊಂಡ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ಕುಕ್ಕೇರ ಅಜಿತ್ ಮಾತನಾಡಿ, ಕವನ್ ಕಾವೇರಪ್ಪ ಹಾಗೂ ವಿನಯ್ ಅವರು ಧರ್ಮ ಹಾಗೂ ದೇಶ ರಕ್ಷಣೆಗೆ ದುಡಿಯುತ್ತಿರುವವರು. ದೇಶದ್ರೋಹ ಕೆಲಸ ಮಾಡುವವರು, ಗೋಹತ್ಯೆ ನಡೆಸಿದವರು,

(ಮೊದಲ ಪುಟದಿಂದ) ಮಾದಕ ವ್ಯಸನ ಮಾರಾಟಗಾರರು, ಬಾಂಬ್ ಸ್ಫೋಟಿಸುತ್ತೇವೆ ಎಂದು ಬಹಿರಂಗವಾಗಿ ಹೇಳಿಕೊಂಡವರನ್ನು ಸುಮ್ಮನೆ ಬಿಟ್ಟಿರುವ ಪೊಲೀಸ್ ಇಲಾಖೆ ದೇಶಪ್ರೇಮವನ್ನು ಜೀವವನ್ನಾಗಿಸಿಕೊಂಡ ಹಿಂದೂ ಕಾರ್ಯಕರ್ತರ ಮೇಲೆ ಗಡಿಪಾರಿಗೆ ಪ್ರಸ್ತಾಪಿಸಿರುವುದು ಖಂಡನೀಯ. ಈ ರೀತಿಯ ಹಲವು ಸವಾಲುಗಳನ್ನು ಎದುರಿಸಿ ಹಿಂದೂ ಕಾರ್ಯಕರ್ತರು ದೇಶ ರಕ್ಷಣೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಇಂತಹ ಗೊಡ್ಡು ಬೆದರಿಕೆಗಳಿಗೆ ನಾವು ಜಗ್ಗುವದಿಲ್ಲ. ಪೊಲೀಸರು ದುಸ್ಸಾಹಸಕ್ಕೆ ಕೈಹಾಕಿದ್ದಾರೆ ಎಂದು ಕಿಡಿಕಾರಿದ ಅವರು, ಗಡಿಪಾರು ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಘಟನೆಯನ್ನು ಖಂಡಿಸಿ ನ್ಯಾಯಕ್ಕೆ ಒತ್ತಾಯಿಸಿದರು. ಈ ಸಂದರ್ಭ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಪ್ರಚಾರ ಪ್ರಮುಖ್ ಕುಮಾರ್, ಸಹಸಂಚಾಲಕರುಗಳಾದ ಚೇತನ್, ಯೋಗೇಶ್, ಜಿಲ್ಲಾ ಮಾತೃ ಸುರಕ್ಷಾ ಸುನಿಲ್ ಮಾದಪುರ, ವೀರಾಜಪೇಟೆ ತಾಲೂಕು ಸಂಚಾಲಕ ಜೋಯಪ್ಪ, ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ನಗರ ಬಿಜೆಪಿ ಅಧ್ಯಕ್ಷ ಮನುಮಂಜುನಾಥ್, ಉಪಾಧ್ಯಕ್ಷ ಬಿ.ಕೆ. ಜಗದೀಶ್ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಕಾರ್ಯದರ್ಶಿ ಎಸ್.ಸಿ. ಸತೀಶ್, ಕಾಳಚಂಡ ಅಪ್ಪಣ್ಣ, ಬಿಜೆಪಿ ಯುವಮೋರ್ಚ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ, ಮಡಿಕೇರಿ ನಗರಾಧ್ಯಕ್ಷ ನವೀನ್ ಪೂಜಾರಿ ಸೇರಿದಂತೆ ಇನ್ನಿತರರು ಹಾಜರಿದ್ದರು.