ಕುಶಾಲನಗರ, ಫೆ. ೨: ರಸ್ತೆ ಬದಿ ಬೆಳೆದು ನಿಂತಿದ್ದ ಮರಗಳನ್ನು ಅಕ್ರಮವಾಗಿ ಕಡಿದ ಹಿನ್ನೆಲೆಯಲ್ಲಿ ಇಬ್ಬರು ವ್ಯಕ್ತಿಗಳ ಮೇಲೆ ಅರಣ್ಯ ಇಲಾಖೆಗೆ ದೂರು ನೀಡಲಾಗಿದೆ.
ಕುಶಾಲನಗರ- ಕೊಪ್ಪ ಗಡಿಭಾಗದಲ್ಲಿ ಹೆದ್ದಾರಿ ರಸ್ತೆ ಬದಿಯಲ್ಲಿ ಹಲವು ವರ್ಷಗಳಿಂದ ಬೆಳೆದು ನಿಂತಿದ್ದ ಮರಗಳನ್ನು ಅರಣ್ಯ ಅಧಿಕಾರಿಗಳು ಅನುಮತಿ ನೀಡದಿದ್ದರೂ, ಮರಗಳಿಗೆ ಹಾನಿ ಮಾಡಿದ್ದು, ಈ ಸಂದರ್ಭ ಸ್ಥಳದಲ್ಲಿಯೇ ಕೆಲವು ಪರಿಸರ ಪ್ರೇಮಿಗಳು ಪ್ರತಿಭಟನೆ ನಡೆಸಿ ಘೋಷಣೆ ಕೂಗಿದರು. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಕೆ.ವಿಶಿವರಾಂ ಭೇಟಿ ನೀಡಿ ಮರ ಕಡಿಯದಂತೆ ಸೂಚನೆ ನೀಡಿದರೂ ಸ್ಪಂದಿಸದೆ ಎರಡು ಮರಗಳ ಕೊಂಬೆಗಳನ್ನು ಅನಾವಶ್ಯಕವಾಗಿ ಕಡಿದ ಹಿನ್ನೆಲೆಯಲ್ಲಿ ಪರಿಸರ ಪ್ರೇಮಿ ಚಂದ್ರಮೋಹನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಮರ ಕಡಿಯಲು ಕಾರಣರಾದ ವೆಂಕಟೇಶ್ ಪೂಜಾರಿ ಮತ್ತು ವಿ.ಪಿ ಶಶಿಧರ್ ಮತ್ತಿತರರ ಮೇಲೆ ಅರಣ್ಯ ಇಲಾಖೆ ಅಧಿಕಾರಿ ಕೆ.ವಿ ಶಿವರಾಂ ಅವರ ಮೂಲಕ ಪಕ್ಷಿಗಳ ಆವಾಸ ಸ್ಥಾನವಾಗಿದ್ದ ಮರಗಳಿಗೆ ಹಾನಿ ಮಾಡಿದ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಚಂದ್ರಮೋಹನ್ ಮತ್ತಿತರರು ದೂರು ಸಲ್ಲಿಸಿದ್ದಾರೆ.
ಈ ಸಂದರ್ಭ ಪ್ರತಿಭಟನೆಯಲ್ಲಿ ಸ್ಥಳೀಯ ಪರಿಸರ ಪ್ರೇಮಿಗಳಾದ ಕೊಡಗನ ಹರ್ಷ, ತೋರೆರ ಉದಯ್, ಸುಮನ್ ಬಾಲಚಂದ್ರ, ಎಂ. ಕೃಷ್ಣ ಮತ್ತಿತರರು ಇದ್ದರು.